ಕಾವೇರಿ ನೀರು ಉಳಿಸುವಂತೆ ಒತ್ತಾಯಿಸಿ ಪ್ರತಿಭಟನೆ

KannadaprabhaNewsNetwork | Published : Feb 4, 2024 1:31 AM

ಸಾರಾಂಶ

ಚಾಮರಾಜನಗರನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಹಾದು ಹೋಗಿರುವ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪೋಲಾಗುತ್ತಿರುವ ನೀರನ್ನು ಉಳಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಹಾದು ಹೋಗಿರುವ ಕಾವೇರಿ ಕುಡಿಯುವ ನೀರಿನ ಪೈಪ್‌ಲೈನ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ಪೋಲಾಗುತ್ತಿರುವ ನೀರನ್ನು ಉಳಿಸುವಂತೆ ಒತ್ತಾಯಿಸಿ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಕಾವೇರಿ ನೀರು ಪೋಲಾಗುತ್ತಿರುವ ಸ್ಥಳದಲ್ಲೇ ಸುವರ್ಣ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಸುರೇಶ್‌ ವಾಜಪೇಯಿ, ಟೌನ್ ಅಧ್ಯಕ್ಷ ಆಟೋ ಮಂಜುನಾಥ್ ಅವರ ನೇತೃತ್ವದಲ್ಲಿ ಜಮಾಯಿಸಿದ ಪ್ರತಿಭಟನಾ ನಿರತರು ರಸ್ತೆತಡೆ ನಡೆಸಿ, ಜಿಲ್ಲಾ ಉಸ್ತುವಾರಿ ಸಚಿವ, ಸ್ಥಳೀಯ ಶಾಸಕರು ಹಾಗೂ ನಗರಸಭೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ನಗರಸಭಾ ಪೌರಾಯುಕ್ತ ರಾಮದಾಸ್ ಮಾತನಾಡಿ, ಹಳೆ ಪೈಪ್‌ಲೈನ್‌ನಿಂದ ಸಮಸ್ಯೆ ಉಂಟಾಗಿದ್ದು, ಹೊಸ ಪೈಪ್‌ಲೈನ್ ಮಾಡಲಾಗುತ್ತಿದೆ. ತಕ್ಷಣದಲ್ಲೇ ಕಾವೇರಿ ನೀರು ಪೋಲಾಗದಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪ್ರತಿಭಟನೆ ನೇತೃತ್ವ ವಹಿಸಿದ್ದ ಸುರೇಶ್‌ ವಾಜಪೇಯಿ ಹಾಗೂ ಟೌನ್ ಅಧ್ಯಕ್ಷ ಮಂಜುನಾಥ್ ಮಾತನಾಡಿನಗರದ ಬಿ.ರಾಚಯ್ಯ ಜೋಡಿರಸ್ತೆಯಲ್ಲಿ ಸುಮಾರು ೭ ತಿಂಗಳಿಂದಲ್ಲೂ ಕಾವೇರಿ ನೀರು ಪೋಲಾಗುತ್ತಿದೆ ಇದನ್ನು ನಿಲ್ಲಿಸುವಂತೆ ನಗರಸಭೆಗೆ ಮನವಿ ಕೊಟ್ಟಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರಸ್ತೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳು ಸೇರಿದಂತೆ ೪೨ ಇಲಾಖೆಯ ಅಧಿಕಾರಿಗಳು ಸಂಚರಿಸುತ್ತಾರೆ. ಇದರ ಬಗ್ಗೆ ಅಧಿಕಾರಿಗಳು ಗಮನಹರಿಸಿಲ್ಲ. ನಗರಸಭೆ ಸಂಪೂರ್ಣ ವಿಫಲವಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪೋಲಾಗುತ್ತಿರುವ ಕಾವೇರಿ ನೀರನ್ನು ನಿಲ್ಲಿಸಿ ಉಳಿಸಬೇಕು ಎಂದು ಒತ್ತಾಯಿಸಿದರು. ಕರ್ನಾಟಕ ಕನ್ನಡ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಾ.ಗು.ನಾಗರಾಜು ಮಾತನಾಡಿ, ತಿ.ನರಸೀಪುರದಿಂದ ಬರುವ ಕಾವೇರಿ ನೀರು ನಗರದಲ್ಲಿ ಪೋಲಾಗುತ್ತಿರುವುದು ಇದು ನಗರ ಜನತೆಗೆ ಅನ್ಯಾಯವಾಗುತ್ತಿದೆ. ಅನೇಕ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ತುಂಬಾ ಬವಣೆ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬರಗಾಲ ಬರುತ್ತಿದ್ದು, ಪೋಲಾಗುತ್ತಿರುವ ಕಾವೇರಿ ನೀರನ್ನು ಉಳಿಸಿ ನಗರದ ಜನತೆಗೆ ಕಾವೇರಿ ನೀರು ದೊರೆಯುವಂತೆ ಮಾಡಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ‌ ಕಂಡಕ್ಟರ್ ಸೋಮನಾಯಕ, ಕುಮಾರ್, ಸಿದ್ದು, ಗಣೇಶ್, ಮಹದೇವಪ್ರಸಾದ್ ಇತರರು ಭಾಗವಹಿಸಿದ್ದರು.

Share this article