ಕಾವೇರಿ ಪ್ರಾಧಿಕಾರದ ಆದೇಶದ ವಿರುದ್ಧ ನದಿಗಿಳಿದು ಪ್ರತಿಭಟನೆ

KannadaprabhaNewsNetwork |  
Published : Jul 31, 2026, 01:30 AM IST
30ಕೆಎಂಎನ್‌ಡಿ-11ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಶ್ರೀರಂಗಪಟ್ಟಣದಲ್ಲಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ನದಿಗಿಳಿದು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಬಹಳ ಹಿಂದಿನಿಂದಲೂ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದಕ್ಕೆ ನಮ್ಮನ್ನಾಳಿರುವ ಸರ್ಕಾರ ಹಾಗೂ ರಾಜಕಾರಣಿಗಳೇ ನೇರ ಹೊಣೆಗಾರರು, ಕಾವೇರಿ ನೀರಿನ ವಾಸ್ತವ ವಿಚಾರವನ್ನ ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ಮಂಡನೆ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಕೆಆರ್‌ಎಸ್ ಜಲಾಶಯದಿಂದ ತಮಿಳುನಾಡಿಗೆ 15 ದಿನಗಳ ಕಾಲ 3,500 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನು ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿ ಸದಸ್ಯರು ಹಾಗೂ ರೈತರು ಕಾವೇರಿ ನದಿಗಿಳಿದು ಪ್ರತಿಭಟನೆ ನಡೆಸಿದರು.

ಪಟ್ಟಣದ ಸ್ನಾನಘಟ್ಟದ ಬಳಿ ಭೂಮಿತಾಯಿ ಹೋರಾಟ ಸಮಿತಿ ಹಿರಿಯ ಮುಖಂಡ ಕೆ.ಎಸ್.ನಂಜುಂಡೇಗೌಡ ಹಾಗೂ ಸಮಿತಿ ಅಧ್ಯಕ್ಷ ಬಲ್ಲೇನಹಳ್ಳಿ ಕೃಷ್ಣೇಗೌಡ ನೇತೃತ್ವದಲ್ಲಿ ರೈತ ಕಾರ್ಯಕರ್ತರು ಕಾವೇರಿ ನದಿಗಿಳಿದು ಕಾವೇರಿ ನೀರು ನಿಯಂತ್ರಣ ಸಮಿತಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಮುಖಂಡ ಕೆ.ಎಸ್.ನಂಜುಂಡೇಗೌಡ ಮಾತನಾಡಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಬಹಳ ಹಿಂದಿನಿಂದಲೂ ನಿರಂತರವಾಗಿ ಅನ್ಯಾಯವಾಗುತ್ತಿದೆ. ಇದಕ್ಕೆ ನಮ್ಮನ್ನಾಳಿರುವ ಸರ್ಕಾರ ಹಾಗೂ ರಾಜಕಾರಣಿಗಳೇ ನೇರ ಹೊಣೆಗಾರರು, ಕಾವೇರಿ ನೀರಿನ ವಾಸ್ತವ ವಿಚಾರವನ್ನ ಪ್ರಾಧಿಕಾರದ ಮುಂದೆ ಸಮರ್ಪಕವಾಗಿ ಮಂಡನೆ ಮಾಡಲು ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಅಲ್ಲದೇ, ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಇತ್ತೀಚಿಗೆ ರೈತರು ತಮ್ಮ ಜಮೀನುಗಳಲ್ಲಿ ನಾಟಿ ಮಾಡಬೇಡಿ, ನಾಟಿ ಮಾಡಿ, ನೀರು ಹರಿಸುವ ಒತ್ತಡ ಹೇರಬೇಡಿ ಎಂದು ಹೇಳಿದ್ದರು. ರೈತರು ಹೊಸ ಬೆಳೆ ಬೆಳೆಯಲು ಮುಂದಾಗುತ್ತಿಲ್ಲ, ಬದಲಿಗೆ ಲಕ್ಷಾಂತರ ಎಕರೆ ಜಮೀನಿನಲ್ಲಿರುವ ತೋಟಗಾರಿಕೆ ಬೆಳೆ ಸೇರಿದಂತೆ ಇತರೆ ಬೆಳೆಗಳನ್ನ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ ಎಂಬ ಚಿಂತೆಯಲ್ಲಿದ್ದಾರೆ. ಈ ವಿಷಯವನ್ನು ಪ್ರಾಧಿಕಾರಕ್ಕೆ ಮನದಟ್ಟು ಮಾಡಿಕೊಟ್ಟರೆ, ಅವರು ಪ್ರಬುದ್ಧರಿದ್ದು ಸತ್ಯಾಸತ್ಯತೆ ಅರಿತು ರಾಜ್ಯದ ಜನರಿಗೆ ಅನುಕೂಲ ಮಾಡಿಕೊಡುವವರಿದ್ದರು. ಆದರೆ, ರಾಜ್ಯ ಕಾಂಗ್ರೆಸ್ ನಾಯಕರಿಗೆ ಇದರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲದೆ, ಅಧಿಕಾರ ಹಂಚಿಕೊಳ್ಳಲು ದೆಹಲಿಯ ಕಾಂಗ್ರೆಸ್ ನಾಯಕನ ಭೇಟಿಗಾಗಿ ಬೆಳಗ್ಗೆಯಿಂದ ಸಂಜೆಯವರೆಗೆ ದೆಹಲಿಯಲ್ಲಿ ಸರ್ಕಸ್ ಮಾಡುತ್ತಾ ಕುಳಿತಿದ್ದಾರೆ ಎಂದು ಕಿಡಿಕಾರಿದರು.

ಪ್ರಾಧಿಕಾರ ತಮಿಳುನಾಡಿನ ದಬ್ಬಾಳಿಕೆಗೆ ಹೆದರುತ್ತಿದೆ. ಒಕ್ಕೂಟದಿಂದ ಹೊರ ಹೋಗುತ್ತೇವೆ ಎಂದು ಹೇಳುತ್ತಿದ್ದಾರೆ. ಮುಂದುವರೆದು ನ್ಯಾಯಾಲಯವನ್ನೇ ತಮಿಳುನಾಡು ತಮ್ಮ ಹಿಡಿತದಲ್ಲಿ ಇರುವಂತೆ ಎಲ್ಲಾ ಆದೇಶಗಳು ತಮಿಳುನಾಡಿನ ಪರವಾಗುತ್ತಿವೆ. ಇಲ್ಲಿನ ವಸ್ತು ಸ್ಥಿತಿ, ನೀರಿನ ಬಗ್ಗೆ ಅರಿಯದೆ ಪ್ರಾಧಿಕಾರಗಳು ಕರ್ನಾಟಕಕ್ಕೆ ಅನ್ಯಾಯ ಮಾಡುತ್ತಿವೆ ಎಂದು ಅಳಲು ತೋಡಿಕೊಂಡ ಅವರು, ಎಷ್ಟೇ ಕಷ್ಟವಾದರೂ ಸರಿಯೇ ತಮಿಳುನಾಡಿಗೆ ನೀರು ಹರಿಸಲು ಮುಂದಾಗಬಾರದು. ರೈತರಾದ ನಾವು ಸಹ ನಿಮ್ಮೊಂದಿಗೆ ಇರುತ್ತೇವೆ. ಒಂದು ವೇಳೆ ನೀರು ಬಿಟ್ಟಿದ್ದೇ ಆದಲ್ಲಿ, ನಮ್ಮ ಸರ್ಕಾರದ ವಿರುದ್ಧವೇ ಉಗ್ರ ಹೋರಾಟಗಳ ಮಾಡಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಸಿದರು.

ಈ ವೇಳೆ ಸಮಿತಿ ಮುಖಂಡರಾದ ರಾಮಕೃಷ್ಣ, ಮಹದೇವು, ಜಯರಾಮು ಮಂಜುನಾಥ್, ಕೃಷ್ಣ, ಶ್ರೀನಿವಾಸ್, ಲೋಕೇಶ್, ರವಿಲಕ್ಷ್ಮಣ, ಮಹದೇವು ಉಂಡವಾಡಿ ಸೇರಿದಂತೆ ಇತರ ಮುಖಂಡರು ನದಿಗಿಳಿದು ಪ್ರತಿಭಟಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿಯಲ್ಲಿ ಲೋಪವಾದರೆ ಅಧಿಕಾರಿಗಳ ವಿರುದ್ಧ ಕ್ರಮ
ಮಾಧ್ಯಮ ಒಂದು ಪ್ರವೃತ್ತಿಯಾಗಿ ಸಮಾಜಕ್ಕೆ ಕೊಡುಗೆ ನೀಡಲಿ