ಕೊಪ್ಪಳ: ಅನಿರೀಕ್ಷಿತ ಘಟನೆಗಳಿಂದ ವಂಚಿತರಾದ ಸಂತ್ರಸ್ತ ಮಕ್ಕಳಿಗೆ ಗುಣಮಟ್ಟದ ಬದುಕು ರೂಪಿಸುವ ಹಾಗೂ ನೀಡುವ ಜವಾಬ್ದಾರಿ ಪ್ರತಿಯೊಬ್ಬರದ್ದು ಎಂದು ಡಿಸಿ ಡಾ. ಸುರೇಶ ಬಿ ಇಟ್ನಾಳ ಹೇಳಿದರು.
ಕೇಂದ್ರ ಸ್ಥಾನದಲ್ಲಿರಿ: ಅಧಿಕಾರಿಗಳು ಸದಾ ತಮ್ಮ ಕೇಂದ್ರ ಸ್ಥಾನದಲ್ಲಿದ್ದು ಕರ್ತವ್ಯ ನಿರ್ವಹಿಸಬೇಕು ಹಾಗೂ ಇಲಾಖೆಗಳ ನಡುವೆ ಸೂಕ್ತ ಸಮನ್ವಯ ಸಾಧಿಸಿ ಸರ್ಕಾರದ ಸುತ್ತೋಲೆ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಬೇಕು.ಗ್ರಾಪಂ ಕಾರ್ಯದರ್ಶಿ, ಪಿಡಿಒ ಹಾಗೂ ವಿಎ ಸೇರಿದಂತೆ ತಾಲೂಕು ಮತ್ತು ಗ್ರಾಮ ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ತಮ್ಮ ಕೇಂದ್ರ ಸ್ಥಾನದಲ್ಲೇ ಇದ್ದು, ತುರ್ತು ಸಂದರ್ಭ ಹೊರತುಪಡಿಸಿ ಕೇಂದ್ರಸ್ಥಾನ ತೊರೆಯುವಂತಿಲ್ಲ ಎಂದು ಡಿಸಿ ಅಧಿಕಾರಿಗಳಿಗೆ ಹೇಳಿದರು.
ನಿತ್ಯ ಹಾಸ್ಟಲ್ ಗೆ ಭೇಟಿ ನೀಡಿ: ಮಕ್ಕಳ ಸುರಕ್ಷತೆ ಮತ್ತು ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ಶಿಕ್ಷಣ, ಸಮಾಜ ಕಲ್ಯಾಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಪ್ರಮುಖ ಇಲಾಖೆಗಳ ಕಾರ್ಯದರ್ಶಿಗಳು ಜಂಟಿಯಾಗಿ ಹೊರಡಿಸಿರುವ ಸುತ್ತೋಲೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು. ಶಾಲೆಗಳಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ತರುವುದು ಮತ್ತು ಬಾಲ್ಯವಿವಾಹ ತಡೆಯುವುದು ಮುಖ್ಯವಾಗಿದೆ. ಅಧಿಕಾರಿಗಳು ವಾರಕ್ಕೆ ಕನಿಷ್ಠ ೧೦ ರಿಂದ ೧೨ ಹಾಗೂ ಪ್ರತಿ ದಿನ ಯಾವುದಾದರೂ ಒಂದು ಹಾಸ್ಟೆಲ್‌ಗೆ ಕಡ್ಡಾಯವಾಗಿ ಭೇಟಿ ನೀಡಬೇಕು ಎಂದರುಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿಂಧು ಅಂಗಡಿ ಮಾತನಾಡಿ, ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಶಾಸನಬದ್ಧವಾಗಿ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಬಾಲ ನ್ಯಾಯ ಮಂಡಳಿ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ೫ ಮಕ್ಕಳ ಪಾಲನಾ ಸಂಸ್ಥೆಗಳಿದ್ದು, ಇವುಗಳಲ್ಲಿ ಒಟ್ಟು ೮೭ಮಕ್ಕಳು ಇದ್ದಾರೆ. ಇಲ್ಲಿನ ಮಕ್ಕಳಿಗೆ ಆರೋಗ್ಯ, ಪೋಷಣೆ, ರಕ್ಷಣೆ ಹಾಗೂ ಶಿಕ್ಷಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಕುಟುಂಬ ಬಲಪಡಿಸುವ ಮೂಲಕ ಮಕ್ಕಳನ್ನು ಕುಟುಂಬದ ವಾತಾವರಣದಲ್ಲೇ ಬೆಳೆಸಲು ವಿಶೇಷ ಮಾದರಿ ರೂಪಿಸಲಾಗಿದೆ. ೧೮ ವರ್ಷ ಒಳಗಿನ ೨೦ ಮಕ್ಕಳಿಗೆ ಹಾಗೂ ೧೮ ವರ್ಷ ಪೂರೈಸಿದ ೨೧ ಯುವಕ, ಯುವತಿಯರಿಗೆ ಉಪಕಾರ ಯೋಜನೆ ಹಾಗೂ ವಿವಿಧ ತರಬೇತಿ ಕೋರ್ಸ್‌ಗಳಿಗೆ ನೆರವು ನೀಡಲಾಗುತ್ತಿದೆ. ನೇರ ನಗದು ವರ್ಗಾವಣೆ ಮೂಲಕ ಹಣಕಾಸಿನ ನೆರವು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾಂತೇಶ ದರಗದ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವರ್ಣಿತ್ ನೇಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಅಂಬರೀಶ್ ಹಾವಿನ್, ಕೊಪ್ಪಳ ಬಾಲನ್ಯಾಯ ಮಂಡಳಿಯ ಸದಸ್ಯ ನೇತ್ರಾವತಿ ಪಾಟೀಲ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಪ್ರಕಾಶ್ ಕಡಗದ್, ಯುನಿಸೆಫ್‌ನ ಮಕ್ಕಳ ರಕ್ಷಣಾ ಯೋಜನೆಯ ವಿಭಾಗೀಯ ಸಂಯೋಜಕ ರಾಘವೇಂದ್ರ ಭಟ್, ಹೈದರಾಬಾದ್ ಯುನಿಸೆಫ್‌ನ ಮಕ್ಕಳ ತಜ್ಞ ಸೋನಿ ಕುಟ್ಟಿ ಜಾರ್ಜ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಂಜುನಾಥ ಗುಂಡೂರ, ಡಿಡಿಪಿಯು, ಡಿಡಿಪಿಐ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಮಕ್ಕಳ ವಿಶೇಷ ಪೊಲೀಸ್ ಘಟಕದ ಕಲ್ಯಾಣಾಧಿಕಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧಿಕಾರಿಗಳಿದ್ದರು.