ಕನ್ನಡಪ್ರಭವ ವಾರ್ತೆ ಹೊಳೆನರಸೀಪುರ
ಪುರಸಭೆಯ ಪೌರಕಾರ್ಮಿಕರು ಪಟ್ಟಣವನ್ನು ಸ್ವಚ್ಚವಾಗಿಟ್ಟು, ಸಾರ್ವಜನಿಕರಿಗೆ ರೋಗ ರುಜಿನ ಹರಡದಂತೆ ತಡೆಯಲು ಗರಿಷ್ಠ ಸ್ವಚ್ಛತೆ ಕಾಪಾಡಲು ಪಣತೊಟ್ಟಿದ್ದಾರೆ ಎಂದು ಪೌರಕಾರ್ಮಿಕ ಮೇಲ್ವಿಚಾರಕರಲ್ಲಿ ಒಬ್ಬರಾದ ನಾಗಮ್ಮ ಹೇಳಿದರು.ಪಟ್ಟಣದ ಗಣಪತಿ ಪೆಂಡಾಲಿನಲ್ಲಿ ಪೌರಕಾರ್ಮಿಕ ದಿನಾಚರಣೆ ಅಂಗವಾಗಿ ಮಂಗಳವಾರ ಸಂಜೆ ಮಹಾಗಣಪತಿ ಮಹೋತ್ಸವ ಸೇವಾ ಸಮಿತಿಯವರು ಆಯೋಜಿಸಿದ್ದ ಪೌರಕಾರ್ಮಿಕರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಬೆಳಗಿನ ಜಾವ ೪ ಗಂಟೆಯಿಂದ ನೀವೆಲ್ಲಾ ಏಳುವ ಮುನ್ನ ಪಟ್ಟಣವನ್ನು ಸ್ವಚ್ಛವಾಗಿಟ್ಟಿರುತ್ತೇವೆ. ಆದರೆ ಕೆಲವರು ಸ್ವಚ್ಛ ಮಾಡಿದ ನಂತರ ರಸ್ತೆಗಳಿಗೆ ಕಸ ತಂದು ಸುರಿಯುತ್ತಿದ್ದಾರೆ. ಇದರಿಂದ ನಮಗೆ ಅತ್ಯಂತ ಹಿಂಸೆ ಆಗುತ್ತಿದೆ. ಕೆಲವರು ಈಗಲೂ ಹಸಿ ಕಸ ಮತ್ತು ಒಣಕಸವನ್ನು ಬೇರೆ ಮಾಡಿ ಕೊಡುತ್ತಿಲ್ಲ. ದಯವಿಟ್ಟು ಸಾರ್ವಜನಿಕರು ನಮಗೆ ಸಹಕಾರ ಕೊಟ್ಟು ನಿರಂತರ ಸ್ವಚ್ಛತೆ ಕಾಪಾಡಿ, ಆರೋಗ್ಯ ಕಪಾಡಿಕೊಳ್ಳಲು ಸಹಕರಿಸಿ ಎಂದು ವಿನಂತಿಸಿದರು.
ಪಟ್ಟಣದ ಕೆಲವು ಬಡಾವಣೆಗಳಲ್ಲಿ ಪೌರ ಕಾರ್ಮಿಕರ ಜತೆಗೆ ಸೌಜನ್ಯದಿಂದ ವರ್ತಿಸುವ ನಿವಾಸಿಗಳಿಗೆ ಅಭಿನಂದಿಸಿದರು.ಪುರಸಭಾಧ್ಯಕ್ಷ ಎಚ್.ಕೆ. ಪ್ರಸನ್ನ ಮಾತನಾಡಿ ಪೌರಕಾರ್ಮಿಕ ದಿನಾಚರಣೆಯನ್ನು ಮುಂದಿನ ದಿನದಲ್ಲಿ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ್ದೇವೆ. ಅವರೆಲ್ಲರಿಗೂ ವಿವಿಧ ಆಟೋಟ ಸ್ಪರ್ಧೆಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆ ನೆಡೆಸಿ ಬಹುಮಾನ ನೀಡಲಾಗುತ್ತೆ. ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸುವ ಪೌರಕಾರ್ಮಿಕರಿಗೆ ಸನ್ಮಾನ ಮಾಡಿ ಗೌರವವಾಗಿ ದಿನಾಚರಣೆ ಆಚರಿಸುತ್ತೇವೆ. ಇಂದು ಪೌರಕಾರ್ಮಿಕ ದಿನಾಚರಣೆ ಆಗಿರುವುದರಿಂದ ಮಹಾಗಣಪತಿ ಸೇವಾ ಸಮಿತಿಯವರು ಈ ದಿನ ಪೌರಕಾರ್ಮಿಕರ ಸೇವೆಯನ್ನು ಗೌರವಿಸಿ ಸನ್ಮಾನಿಸಿರುವುದು ಆಶ್ಲಾಘನೀಯ ಕಾರ್ಯ. ಸಾರ್ವಜನಿಕರು ಪೌರಕಾರ್ಮಿಕರನ್ನು ಗೌರವದಿಂದ ನಡೆಸಿಕೊಳ್ಳಿ. ಅವರು ಸ್ವಚ್ಚ ಮಾಡಿದ ನಂತರ ಕಸತಂದು ಬೀದಿಗೆ ಸುರಿಯಬೇಡಿ, ಪುರಸಭೆ ವಾಹನಕ್ಕೆ ಹಾಕಿ. ಮನೆಗಳಲ್ಲಿ ಹಸಿ ಕಸ, ಒಣ ಕಸವನ್ನು ತಪ್ಪದೆ ಬೇರ್ಪಡಿಸಿಕೊಡಿ ಎಂದರು.
ಮಹಾಗಣಪತಿ ಸೇವಾ ಸಮಿತಿಯ ಕಾರ್ಯಧ್ಯಕ್ಷ ಎಚ್.ಎಸ್.ಪುಟ್ಟಸೋಮಪ್ಪ ಪೌರಕಾರ್ಮಿಕ ಮೇಲ್ವಿಚಾರಕರಾದ ಚಲುವ, ಕಿರಣ ಹಾಗೂ ಪ್ರೌರಕಾರ್ಮಿಕರಾದ ಆಶಾ, ಶಶಾಂಕ, ರೂಪ, ಮಿನಿಯಮ್ಮ, ಶರತ್, ಕುಮಾರ, ಶಿಶಾ, ಪ್ರಶಾಂತ್ ಅವರನ್ನು ಸನ್ಮಾನಿಸಿದರು.ಪಾರ್ಕ್ ಪಕ್ಕದ್ದಲ್ಲಿರುವ ನಂದಿನ ಡೇರಿ ಮಾಲೀಕ ಚಂದ್ರು ಪೌರಕಾರ್ಮಿಕರಿಗೆ ನಂದಿನಿ ಪೇಡ ಪ್ಯಾಕೆಟ್‌ಗಳನ್ನು ನೀಡಿದರು. ಸಮಿತಿಯ ಸಹಕಾರ್ಯದರ್ಶಿ ಸುರೇಶ್ ಕುಮಾರ್, ಆರ್. ಬಿ.ಪುಟ್ಟೇಗೌಡ, ಶಂಕರ ನಾರಾಯಣ್ ಐತಾಳ್, ಚಂದ್ರು ಇತರರು ಭಾಗವಹಿಸಿದ್ದರು