ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ ವಿದ್ಯಾರ್ಥಿ ಜೀವನದಲ್ಲಿ ಸಮಯ ಪಾಲನೆ ಮತ್ತು ಶಿಸ್ತು ಮುಖ್ಯವೆಂದು ಭಾವಿಸಿ ಶಿಕ್ಷಣದಲ್ಲಿ ತೊಡಗಿದರೆ ಭವಿಷ್ಯ ಉತ್ತಮವಾಗಿರಲಿದೆ ಎಂದು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಶಶಿಧರ್ ಹೇಳಿದರು.
ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು. ಶಿಕ್ಷಣವಿಲ್ಲದೆ ಯಾವುದೇ ಸಾಧನೆ ಸಾಧ್ಯವಿಲ್ಲ. ಸಮಯ ಕಳೆದರೆ ಅದು ಮತ್ತೆ ಮರಳಿ ಬರುವುದಿಲ್ಲ. ಮುಂದೆ ಓದೋಣ ಎಂದು ತೀರ್ಮಾನ ಮಾಡುವಷ್ಟರಲ್ಲಿ ಅವಕಾಶಗಳು ಕೈ ತಪ್ಪಿರುತ್ತವೆ ಎಂದು ಎಚ್ಚರಿಸಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರವಿಕುಮಾರ್ ಮಾತನಾಡಿ, ವಿದ್ಯಾಭ್ಯಾಸದ ಅವಧಿಯಲ್ಲಿ ಓದಿನತ್ತ ತೋರಿಸುವ ಉದಾಸೀನತೆ ಭವಿಷ್ಯದಲ್ಲಿ ಭಾರೀ ತೊಂದರೆಗಳಿಗೆ ಕಾರಣವಾಗಬಹುದು. ಈ ದಿನಗಳಲ್ಲಿ ಒಂದು ನಿಮಿಷವೂ ಬಹಳ ಅಮೂಲ್ಯ. ಪರೀಕ್ಷೆಗಳಿಗೆ ಪೂರ್ವಸಿದ್ಧತೆ ಅತ್ಯಂತ ಅಗತ್ಯ. ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿರುವುದರಿಂದ ವಿದ್ಯಾರ್ಥಿಗಳು ಇನ್ನಷ್ಟು ಕಷ್ಟಪಟ್ಟು ಓದಬೇಕು ಎಂದು ಸಲಹೆ ನೀಡಿದರು.ಜನ್ಮ ನೀಡಿದ ತಂದೆ- ತಾಯಿ, ವಿದ್ಯೆ ಕಲಿಸಿದ ಗುರುಗಳು ಹಾಗೂ ಕಷ್ಟಕಾಲದಲ್ಲಿ ನೆರವಾದ ಸ್ನೇಹಿತರನ್ನು ಯಾವತ್ತೂ ಮರೆಯಬಾರದು ಎಂದು ಹೇಳಿದರು.
ಮಂಡಿಕಲ್ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂರುಲ್ಲಾ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯಲ್ಲಿ ಪೋಷಕರು ಹಾಗೂ ಗುರುಗಳ ಪಾತ್ರ ಅತ್ಯಂತ ಮಹತ್ವ ದ್ದಾಗಿದೆ. ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಅವರು ನಿಸ್ವಾರ್ಥ ಸೇವೆ ಸಲ್ಲಿಸುತ್ತಾರೆ. ನಿಮ್ಮನ್ನು ತಿದ್ದುವ ಕಾರ್ಯವನ್ನು ಸದಾ ಮಾಡುತ್ತಾರೆ. ಅವರ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದರು.
ಈ ಹಂತದಲ್ಲಿ ಉದಾಸೀನತೆ ತೋರಿದರೆ ಮುಂದಿನ ಜೀವನದಲ್ಲಿ ಅದರ ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಅಮ್ಮ ಎಜುಕೇಷನಲ್ ಆ್ಯಂಡ್ ರೂರಲ್ ಡೆವಲಪ್ ಮೆಂಟ್ ಟ್ರಸ್ಟ್ ಹಾಗೂ ಆಕಾಶ್ ಕಾಲೇಜಿನ ಅಧ್ಯಕ್ಷ ಗೊಳ್ಳು ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಥೆ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಉತ್ತಮ ಶಿಕ್ಷಣ ನೀಡುತ್ತಿದೆ. ವಿದ್ಯಾರ್ಥಿಗಳು ಶ್ರಮಪಟ್ಟು ಓದಿ ಪೋಷಕರ ಕನಸು ನನಸಾಗಿಸಬೇಕು. ಈ ಮಹತ್ವದ ಹಂತದಲ್ಲಿ ದುಷ್ಚಟಗಳಿಗೆ ಬಲಿಯಾಗಬಾರದು. ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅನುಸರಿಸಿ ಸಮಾಜದಲ್ಲಿ ಏಳಿಗೆ ಸಾಧಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿ ಬಂದವು.