ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಹಿಂದೂ ಕಾರ್ಯಕರ್ತ ಮುತ್ತು ಮಾಗಿ ಆ ಗಲಾಟೆಯಲ್ಲಿ ಭಾಗಿಯೇ ಆಗಿಲ್ಲ. ಆದರೂ ಪೊಲೀಸರು ನಮ್ಮ ಮೇಲೆ ದೌರ್ಜನ್ಯ ಎಸಗಿದ್ರೆ ಹೇಗೆ ಎಂದು ಮಹಿಳೆಯರು ಅಳಲು ತೋಡಿಕೊಂಡರು. ಮಹಿಳೆಯರ ಅಳಲು ಆಲಿಸಿದ ಅಧಿಕಾರಿಗಳು ಹಾಗೂ ರಾಜಕೀಯ ನಾಯಕರು. ಯಾವುದೇ ರೀತಿಯ ಗೊಂದಲಕ್ಕೆ ದಾರಿ ಮಾಡಿಕೊಡಲ್ಲ ಎಂದು ಹೇಳಿದರು.
ಪೊಲೀಸರ ಅಮಾತುಗೊಳಿಸಲು ಪಟ್ಟು: ಬಾಗಲಕೋಟೆಯಲ್ಲಿ ಹಿಂದೂ ಕಾರ್ಯಕರ್ತನ ಬಂಧನ ವೇಳೆ ನಡೆದ ಗಲಾಟೆ ಪ್ರಕರಣದ ನಡುವೆ ಕಿಲ್ಲಾ ಗಲ್ಲಿಯಲ್ಲಿ ಶಾಂತಿ ಸಭೆ ನಡೆಸಲಾಯಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಂಸದ ಪಿ.ಸಿ.ಗದ್ದಿಗೌಡರ, ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಪೋಲಿಸರಿಂದಾದ ದೌರ್ಜನ್ಯದ ಕುರಿತು ಮಹಿಳೆಯರು ಮಾತನಾಡಿದರು.ನಿನ್ನೆ ದೌರ್ಜನ್ಯ ನಡೆಸಿದ ಪೊಲೀಸ್ ಅಧಿಕಾರಿಗಳ ಅಮಾನತುಗೊಳಿಸಲು ಮಹಿಳೆಯರ ಒತ್ತಾಯ ಮಾಡಿದರು. ನಮ್ಮ ಓಣಿಯ ಹುಡುಗ ಮುತ್ತು ಮಾಗಿ ಬಂಧನ ಮಾಡಲು ಪೊಲೀಸರು ಬಂದಿದ್ದರು. ನಾವೆಷ್ಟೇ ಹೇಳಿದ್ರೂ ಕೇಳಲಿಲ್ಲ, ಮಹಿಳೆಯರ ಮೇಲೆಯೇ ದೌರ್ಜನ್ಯ ಎಸಗಿದ್ರು, ಇಂತವರ ವಿರುದ್ಧ ನಾವು ನ್ಯಾಯ ಕೇಳೋದು ಹೇಗೆ? ಭಾನುವಾರ ಹಿಂದೂ ಸಮ್ಮೇಳನ ಇದೆ. ಮುಂದೆ ಹೋಳಿ ಹಬ್ಬ ಇದೆ. ಹೀಗಿರುವಾಗ ನಮ್ಮ ಹುಡುಗರು ಹೊರಗೆ ಹೋಗಿಯೇ ಹೋಗ್ತಾರೆ. ಆ ಸಮಯದಲ್ಲಿ ಯಾರನ್ನೂ ಪೊಲೀಸರು ಬಂಧನ ಮಾಡಬಾರದು, ಬಂಧನ ಮಾಡೋದಿಲ್ಲವೆಂದು ಪೊಲೀಸರು ನಮಗೆ ಲಿಖಿತವಾಗಿ ಬರೆದು ಕೊಡಬೇಕು. ಇಲ್ಲವಾದರೆ ದೌರ್ಜನ್ಯ ಮೆರೆದ ಪೊಲೀಸರ ವಿರುದ್ಧ ಅಮಾನತು ಕ್ರಮ ಕೈಗೊಳ್ಳಬೇಕು. ನಮ್ಮ ಬೇಡಿಕೆಗೆ ಪೊಲೀಸ್ ಇಲಾಖೆ ಸ್ಪಂದಿಸಬೇಕು ಎಂದು ಆಕ್ರೋಶ ಹೊರ ಹಾಕಿದರು.