1127 ಮತದಾರರಿಗೆ ಮನೆಯಲ್ಲಿಯೇ ಮತದಾನ ಅವಕಾಶ: ಜುಬಿನ್ ಮೊಹಪಾತ್ರ

KannadaprabhaNewsNetwork | Updated : Apr 12 2024, 01:06 AM IST

ಸಾರಾಂಶ

ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ 5 ಸಖಿ, 4 ಮಾದರಿ ಮತಗಟ್ಟೆ ಸೇರಿದಂತೆ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ಮಾಡಲಾಗುತ್ತಿದೆ. ಕಳೆದ ಬಾರಿ ಕಡಿಮೆ ಮತದಾನ ನಡೆದ ಕೇಂದ್ರಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ.

ಕನ್ನಡಪ್ರಭವಾರ್ತೆ ಪುತ್ತೂರು

ದಕ್ಷಿಣ ಕನ್ನಡ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಮನೆ ಮನೆ ಮತದಾನಕ್ಕೆ ಅರ್ಹ ವ್ಯಕ್ತಿಗಳಾದ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ವಿಕಲಚೇತನರನ್ನು ಗುರುತಿಸಲಾಗಿದ್ದು, ಒಟ್ಟು 1127 ಮಂದಿ ಮನೆಯಲ್ಲೇ ಮತದಾನ ಚಲಾಯಿಸಲಿದ್ದಾರೆ. ಈ ಮತದಾನ ಪ್ರಕ್ರಿಯೆ ಏ. 14 ರಿಂದ 16ರ ತನಕ ನಡೆಯಲಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ತಿಳಿಸಿದ್ದಾರೆ. ಅವರು ಗುರುವಾರ ತಮ್ಮ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಈ ಹಿಂದೆ 85 ವರ್ಷ ಮೇಲ್ಪಟ್ಟ ಮತ್ತು ಅಂಗವಿಕಲರಿಗೆ ಮನೆಯಲ್ಲೇ ಮತದಾನ ಮಾಡಲು ಅರ್ಜಿ ನಮೂನೆ ನೀಡಲಾಗಿತ್ತು. ಈ ಅರ್ಜಿಯ ಮೂಲಕ ಅವರು ಮನೆಯಲ್ಲೇ ಅಥವಾ ಮತಗಟ್ಟೆಗೆ ಬಂದು ಮತ ಚಲಾಯಿಸುವಂತೆ ತಮ್ಮ ಅಭಿಪ್ರಾಯ ಮಂಡಿಸಿದಂತೆ ಮನೆಯಲ್ಲೇ ಮತದಾನ ಮಾಡುವ 85 ವರ್ಷ ಮೇಲ್ಪಟ್ಟವರು 787 ಮಂದಿ ಮತ್ತು 340 ವಿಕಲಚೇತನರು ಮನೆಯಲ್ಲೇ ಮತ ಚಲಾಯಿಸುವ ಬಗ್ಗೆ ತಿಳಿಸಿದ್ದಾರೆ. ಈ ಮತದಾನ ಪ್ರಕ್ರಿಯೆಯು ಅಂಚೆ ಮತದಾರರ ವೀಕ್ಷಕರಾದ ಕ್ಷೇತ್ರ ಶಿಕ್ಷಣಾಧಿಕಾರಿಯವರ ನೇತೃತ್ವದಲ್ಲಿ ನಡೆಯಲಿದೆ. ಅವರ ಕೈಕೆಳಗೆ ತಂಡವೊಂದನ್ನು ರಚಿಸಲಾಗಿದೆ. ಈ ತಂಡ ಎಲ್ಲಾ ಅರ್ಹ ಮತದಾರರಿಗೆ ಕರೆ ಮಾಡಿ ಮತದಾನ ಪ್ರಕ್ರಿಯೆಗೆ ಮನೆಗೆ ಬರುವ ದಿನಾಂಕವನ್ನು ತಿಳಿಸುತ್ತಾರೆ. ಈ ಕುರಿತು ರಾಜಕೀಯ ಪಕ್ಷಗಳಿಗೂ ಎಷ್ಟು ಮಂದಿ ಮತದಾನ ಮಾಡುತ್ತಾರೆ ಮತ್ತು ಅವರ ಮತಪಟ್ಟಿಗಳ ಕುರಿತು ಮಾಹಿತಿ ನೀಡಲಾಗಿದೆ. ಮನೆ ಮನೆ ಮತದಾನದಲ್ಲಿ ಜಿಲ್ಲಾಧಿಕಾರಿ ಹಂತದಲ್ಲಿ ನೇಮಕವಾಗಿರುವ ಪಿ.ಆರ್.ಒ, ಕ್ಯಾಮರ ಮ್ಯಾನ್, ಪೊಲೀಸರು, ಮೈಕ್ರೋ ವೀಕ್ಷಕರು ಭಾಗವಹಿಸಲಿದ್ದಾರೆ. ಅವರಿಗೆ ಮತದಾನ ಪ್ರಕ್ರಿಯೆ ನಡೆಸುವ ಬಗ್ಗೆ ತರಬೇತಿ ನೀಡಲಾಗುತ್ತಿದೆ. ಈ ಮತದಾನ ಮತಪತ್ರ (ಬ್ಯಾಲೆಟ್ ಪೇಪರ್) ಮೂಲಕ ನಡೆಯಲಿದೆ. ಬೆಳಗ್ಗೆ ಗಂಟೆ 8 ರಿಂದ ಸಂಜೆ ಗಂಟೆ 6ರ ತನಕ ಮತದಾನ ಪ್ರಕ್ರಿಯೆ ನಡೆಯಲಿದೆ. ಒಳಮೊಗ್ರು, ಕುರಿಯ, ಅರಿಯಡ್ಕ ಭಾಗದಲ್ಲಿ 85 ವರ್ಷ ಮೇಲ್ಪಟ್ಟವರು 85 ಮಂದಿ ಇದ್ದಾರೆ. ರೂಟ್ ನಂಬರ್ 1ರಲ್ಲಿ 85 ವರ್ಷ ಮೇಲ್ಪಟ್ಟ ಅತೀ ಕಡಿಮೆ 35 ಮಂದಿ ಮತದಾರರಿದ್ದಾರೆ. 100 ವರ್ಷಕ್ಕಿಂತ ಮೇಲ್ಪಟ್ಟವರು 16 ಮಂದಿ ಇದ್ದಾರೆ. ಅದರಲ್ಲಿ ಅತಿ ಹಿರಿಯರಾದ 109 ವರ್ಷದವರೂ ಮತದಾನ ಮಾಡಲಿದ್ದಾರೆ. ಈ ಪೈಕಿ ಕೆಲವು ಕಡೆ ಹಿರಿಯರು ಮೃತಪಟ್ಟಿದ್ದರೆ ಅಲ್ಲಿ ಮಹಜರು ನಡೆಸಿ ದಾಖಲಿಸಿಕೊಳ್ಳಲಾಗುವುದು. ಚುನಾವಣೆಯಲ್ಲಿ ವಿವಿಧ ವಿಭಾಗಗಳಲ್ಲಿನ ಒಟ್ಟು 34 ಮಂದಿಯನ್ನು ಅಗತ್ಯ ಸೇವೆಯ ಕರ್ತವ್ಯದಲ್ಲಿ ಆಯ್ಕೆ ಮಾಡಲಾಗಿದ್ದು, ಅವರ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಕಳುಹಿಸಲಾಗಿದೆ. ಅವರಿಗೆ ಜಿಲ್ಲಾ ಚುನಾವಣಾಧಿಕಾರಿಗಳ ಕೊಠಡಿ ಸಂಖ್ಯೆ 303ಯಲ್ಲಿರುವ ಅಂಚೆ ಮತದಾನ ಕೇಂದ್ರ ಏ. 19ರಿಂದ 21ರ ತನಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.ಅಲ್ಲದೆ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗಳಿಗೆ ಫಾರ್ಮ್ ನಂಬ್ರ 12 ಮತ್ತು 12 ಎ ಅಡಿಯಲ್ಲಿ ಅಂಚೆ ಮತದಾನ ನಡೆಯಲಿದೆ. ಏ. 13 ರ ಒಳಗಾಗಿ ಚುನಾವಣಾ ಕರ್ತವ್ಯದಲ್ಲಿರುವವರು ಎಲ್ಲಾ ಫಾರ್ಮ್ 12 ಮತ್ತು 12ಎ ಅನ್ನು ತಹಸೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಏ.14ಕ್ಕೆ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಕಚೇರಿಗೆ ಸಲ್ಲಿಸಲಾಗುವುದು. ಏ. 15 ರ ಒಳಗಾಗಿ ಈ ಪ್ರಕ್ರಿಯೆ ಮುಗಿಯಲಿದೆ. ಮತದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ 5 ಸಖಿ, 4 ಮಾದರಿ ಮತಗಟ್ಟೆ ಸೇರಿದಂತೆ ಒಟ್ಟು 9 ವಿಶೇಷ ಮತಗಟ್ಟೆಗಳನ್ನು ಮಾಡಲಾಗುತ್ತಿದೆ. ಕಳೆದ ಬಾರಿ ಕಡಿಮೆ ಮತದಾನ ನಡೆದ ಕೇಂದ್ರಗಳಲ್ಲಿ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ತಾಲೂಕು ಆಡಳಿತ ಸೌಧದಲ್ಲಿ ಸೆಲ್ಫ್ ಕಾರ್ನರ್ ಮಾಡಲಾಗಿದೆ. ಕೊಲ್ಲತ್ತಡ್ಕ, ಪೆರುವಾಯಿ ಮತ್ತು ದೂಮಡ್ಕ ಎಂಬಲ್ಲಿರುವ ಮೂರು ಮತಗಟ್ಟೆಗಳಲ್ಲಿ ನೆಟ್‌ವರ್ಕ್ ಸಮಸ್ಯೆಗಳಿದ್ದು ಇಲ್ಲಿಗೆ ಪ್ರತ್ಯೇಕ ನೆಟ್‌ವರ್ಕ್ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಜುಬಿನ್ ಮೊಹಪಾತ್ರ ತಿಳಿಸಿದರು. ಪುತ್ತೂರು ತಹಸೀಲ್ದಾರ್ ಕುಂಞ ಅಹಮ್ಮದ್, ಚುನಾವಣಾ ನೋಡೆಲ್ ಅಧಿಕಾರಿಯಾಗಿದ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಹನುಮ ರೆಡ್ಡಿ, ಹಿರಿಯ ನೋಡೆಲ್ ಅಧಿಕಾರಿ ಶಿವಶಂಕರ್ ದಾನೆಗೊಂಡ, ಉಪತಹಶೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

Share this article