ಪುತ್ತೂರು: ನಗರ ಯೋಜನಾ ಪ್ರಾಧಿಕಾರ(ಪುಡಾ)ದ ವತಿಯಿಂದ ಪುತ್ತೂರು ಮತ್ತು ಕಡಬ ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮತ್ತು ಸಿವಿಲ್ ಇಂಜಿನಿಯರ್ ಗಳಿಗೆ ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆಯ 4ಕೆ ಕಾಯ್ದೆಯ ನಿಯಮವಳಿಗಳ ಅನುಷ್ಠಾನ ಕುರಿತಂತೆ ತರಬೇತಿ ಕಾರ್ಯಾಗಾರವು ಇತ್ತೀಚೆಗೆ ಪುತ್ತೂರಿನ ಲಯನ್ಸ್ ಸಭಾಭವನದಲ್ಲಿ ಜರುಗಿತು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಅಮಳ ರಾಮಚಂದ್ರ ಮಾತನಾಡಿ ಕೆ.ಪಿ.ಟಿ.ಸಿ. ಕಾಯ್ದೆಯ 4 ಕೆ ತಿದ್ದುಪಡಿಯ ನಂತರ ಅದರ ನಿಯಮಾವಳಿಗಳ ಬಗ್ಗೆ ಪಂಚಾಯತ್ ಪಿ.ಡಿ.ಓ. ಮತ್ತು ಇಂಜಿನಿಯರುಗಳಲ್ಲಿ ಇರುವ ಸಂದೇಹ ಮತ್ತು ಮಾಹಿತಿಯ ಕೊರತೆಯನ್ನು ನಿವಾರಿಸಿ ಜನರ ಕೆಲಸ ವೇಗವಾಗಿ ನಡೆಯುವ ಉದ್ದೇಶದಿಂದ ಈ ಮಾಹಿತಿ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ. ಮೊದಲಿಗೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ನಡೆಯುತ್ತಿದ್ದ ವಿನ್ಯಾಸ ನಕ್ಷೆಯ ಅನುಮೋದನೆ ಮತ್ತು ಕಟ್ಟಡ ವಿನ್ಯಾಸದ ಅನುಮೋದನೆಯ ಕಾರ್ಯ ಇದೀಗ ಯೋಜನಾ ಪ್ರಾಧಿಕಾರದ ಅಧಿಕಾರಿಗಳ ಮಟ್ಟಕ್ಕೆ ಬಂದಿದೆ. ವೈಜ್ಞಾನಿಕವಾಗಿ ಮತ್ತು ವ್ಯವಸ್ಥಿತವಾಗಿ ಮನೆ ಮತ್ತಿತರ ಕಡ್ಟಡಗಳು ನಿರ್ಮಾಣವಾಗಿ ಭವಿಷ್ಯದಲ್ಲಿ ರಸ್ತೆ , ಪಾರ್ಕಿಂಗ್ ಮೊದಲಾದ ಸೌಕರ್ಯಗಳು ಎಲ್ಲರಿಗೂ ಲಭ್ಯವಾಗಬೇಕೆಂಬ ಉದ್ದೇಶದಿಂದ ಈ ನಿಯಮಾವಳಿಗಳನ್ನು ರಚಿಸುವಂತೆ ಉಚ್ಛನ್ಯಾಯಾಲಯವು ನಿರ್ದೇಶಿಸಿದ ಕಾರಣದಿಂದ ಈ ಬದಲಾವಣೆಗಳು ನಡೆದಿದ್ದು ಇದು ಭವಿಷ್ಯದ ದೃಷ್ಟಿಯಿಂದ ಸಕಾಲಿಕವಾಗಿದೆ. ಪಿ.ಡಿ.ಓ. ಮತ್ತು ಅಧಿಕಾರಿಗಳಂತೆ ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರ ಹುದ್ದೆಯೂ ಸರಕಾರದಿಂದಲೇ ನೇಮಕಗೊಂಡಿದ್ದು ಅಧಿಕಾರಿಗಳಿಗೆ ಕಾನೂನನ್ನು ರಕ್ಷಿಸುವ ಜವಾಬ್ದಾರಿಯಿದ್ದರೆ ನಮಗೆ ಜನರ ಹಿತವನ್ನು ರಕ್ಷಿಸುವುದು ಜವಾಬ್ದಾರಿಯಾಗಿದೆ. ಕಾನೂನಿನ ಆಶಯಗಳಿಗೆ ಹಾನಿಯಾಗದಂತೆ ಜನರ ಹಿತವನ್ನು ಕಾಯುವ ಕಾರ್ಯ ನಡೆಯಬೇಕಾಗಿದ್ದು , ಈ ನಿಟ್ಡಿನಲ್ಲಿ ಇಂದು ನಡೆಯುತ್ತಿರುವ ಮಾಹಿತಿ ಕಾರ್ಯಾಗಾರ ಅತ್ಯಂತ ಉಪಯುಕ್ತಕರವಾಗಿದೆ ಎಂದು ಹೇಳಿದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ನವೀನ್ ಭಂಡಾರಿ ಅವರು ಮಾತನಾಡಿ, ಮಾಹಿತಿ ಕಾರ್ಯಾಗಾರವು ನಮ್ಮ ಅಧಿಕಾರಿಗಳಿಗಿರುವ ನಿಯವಾವಳಿ ಬದಲಾವಣೆಯ ಪೂರ್ಣ ಮಾಹಿತಿಯನ್ನು ನೀಡುವಲ್ಲಿ ಬಹು ಉಪಯುಕ್ತಕರವಾದುದಾಗಿದೆ ಎಂದರು.ವೇದಿಕೆಯಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕ ಹೇಮಾನಾಥ ಶೆಟ್ಟಿ ಕಾವು, ನಗರ ಯೋಜನಾ ಪ್ರಾಧಿಕಾರದ ಸದಸ್ಯರಾದ ಲ್ಯಾನ್ಸಿ ಮಸ್ಕೇರೇನಸ್, ಅನ್ವರ್ ಖಾಸಿಂ, ನಿಹಾಲ್ ಶೆಟ್ಟಿ ಉಪಸ್ಥಿತರಿದ್ದರು. ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವರುಣ್ ವಂದಿಸಿದರು.ಸಭಾ ಕಾರ್ಯಕ್ರಮದ ಬಳಿಕ ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗುರುಪ್ರಸಾದ್ ತರಬೇತಿ ನೀಡಿದರು. ......................9/11 ನೀಡುವ ಪ್ರಕ್ರಿಯೆಯಲ್ಲಿ ವಿನ್ಯಾಸ ನಕ್ಷೆಯ ಅನುಮೋದನೆ ತಾಲೂಕು ಮಟ್ಟಕ್ಕೆ ಬರಬೇಕೆಂದು ನಾವು ಯಾರೂ ಬಯಸಿರಲಿಲ್ಲ. ಆದರೆ ನ್ಯಾಯಾಲಯದ ನಿರ್ದೇಶನ ಈ ಹೊಸ ನಿಯಮಾವಳಿಗಳ ರಚನೆಗೆ ಕಾರಣವಾಯಿತು. ನಗರ ಯೋಜಕರು ಇಲ್ಲದ ಪಂಚಾಯತ್ ಮಟ್ಟದಲ್ಲಿ ವಿನ್ಯಾಸ ನಕ್ಷೆಯ ಅನುಮೋದನೆಗೆ ತಜ್ಞರ ಲಭ್ಯತೆ ಇಲ್ಲದೇ ಇರುವುದಿಂದ ಮುಂದಿನ ದಿನಗಳಲ್ಲಿ ಈ ಪ್ರಕ್ರಿಯೆ ಪಂಚಾಯತ್ ಮಟ್ಟಕ್ಕೆ ಹಿಂತಿರುಗುವ ಯಾವುದೇ ಸಾಧ್ಯತೆಗಳು ಇರುವುದಿಲ್ಲ. ಯೋಜನಾ ಪ್ರಾಧಿಕಾರದಲ್ಲಿ ನಡೆಯುವ ಈ ಪ್ರಕ್ರಿಯೆಗಳಲ್ಲಿ ಯಾವುದೇ ರೀತಿಯ ಅಡೆತಡೆಗಳು ಬಂದರೂ ಅದನ್ನು ಪರಿಹರಿಸಿ ಜನರ ಸೇವೆ ಮಾಡಲು ಪ್ರಾಧಿಕಾರದ ಅಧ್ಯಕ್ಷ ಮತ್ತು ಸದಸ್ಯರೆಂಬ ನೆಲೆಯಲ್ಲಿ ನಾವೆಲ್ಲರೂ ಸದಾ ಜನರ ಧ್ವನಿಯಾಗಿ ಕಾರ್ಯನಿರ್ವಹಿಸಲು ಬದ್ಧರಾಗಿದ್ದೇವೆ.-ಅಮಳ ರಾಮಚಂದ್ರ ಅಧ್ಯಕ್ಷರು, ಪುಡಾ ಪುತ್ತೂರು.