ಪುತ್ತೂರು: ಭರತನಾಟ್ಯದಲ್ಲಿ ರಂಗಪ್ರವೇಶಕ್ಕೆ ತಾಯಿಯ ಸ್ಥಾನ ಇದೆ. ಸನಾತನ ಕಲೆ ಉಳಿಯಲು ಇಂತಹ ಕಲಾ ರತ್ನಗಳು ಬೆಳೆಯಬೇಕಾಗಿದೆ. ಕಲಾ ಜಗತ್ತಿನ ಸ್ವತಂತ್ರ ಪಯಣದ ಆರಂಭ ರಂಗಪ್ರವೇಶದ ಮೂಲಕ ನಡೆಯಲಿದೆ ಎಂದು ಶಾಂತಲಾ ಪ್ರಶಸ್ತಿ ಪುರಸ್ಕೃತ ನೃತ್ಯಗುರು ಉಳ್ಳಾಲ ಮೋಹನ ಕುಮಾರ್ ಹೇಳಿದರು.ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ ಇದರ ಪ್ರಸ್ತುತಿಯಲ್ಲಿ ಪುತ್ತೂರಿನ ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ತೆರೆದ ವೇದಿಕೆಯಲ್ಲಿ ಶನಿವಾರ ನಡೆದ ಅಕಾಡೆಮಿ ವಿದ್ಯಾರ್ಥಿನಿ, ನೃತ್ಯಗುರು ಶಾಲಿನಿ ಆತ್ಮಭೂಷಣ್ ಅವರ ಶಿಷ್ಯೆ ಭಾರತಿ ಎಂ. ಅವರ ‘ಭರತನಾಟ್ಯ ರಂಗಪ್ರವೇಶ’ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಮಂಗಳೂರು ರಾಧಾಕೃಷ್ಣ ದೇವಸ್ಥಾನದ ವೇದಮೂರ್ತಿ ಗಿರಿಧರ ಭಟ್ ಅಧ್ಯಕ್ಷತೆ ವಹಿಸಿದ್ದರು. ಜೀವನದಲ್ಲಿ ನೆಮ್ಮದಿ ಕೊಡುವುದು ಇಂತಹ ಸಾಂಸ್ಕೃತಿಕ ಕಾರ್ಯಕ್ರಮಗಳು ಎಂದರು.
ಈ ಸಂದರ್ಭ ನೃತ್ಯಗುರು ಶಾಲಿನಿ ಆತ್ಮಭೂಷಣ್‌ಗೆ ಭಾರತಿ ಎಂ. ಗುರುಕಾಣಿಕೆ ಸಮರ್ಪಿಸಿದರು. ವಿದ್ಯಾರ್ಥಿನಿ ಧನ್ಯಶ್ರೀ ಬಿಡಿಸಿದ ಅತಿಥಿಗಳ ಭಾವಚಿತ್ರಗಳನ್ನು ಸ್ಮರಣಿಕೆಯಾಗಿ ನೀಡಿ ಗೌರವಿಸಲಾಯಿತು.ನೃತ್ಯಗುರು ಶಾಲಿನಿ ಆತ್ಮಭೂಷಣ್ ಮಾತನಾಡಿ, ನನ್ನ ಎಲ್ಲ ಗುರುಗಳ ಎದುರು ನನ್ನ ಶಿಷ್ಯೆಯ ರಂಗಪ್ರವೇಶ ಆಗಿರುವುದು ಸಂತಸ ತಂದಿದೆ. ಆಕೆಯ ಮೊದಲ ಹೆಜ್ಜೆ ಬಾಳಿನಲ್ಲಿ ಬೃಹತ್ ಆಗಿ ಬೆಳೆಯಲಿ ಎಂದು ಹಾರೈಸಿದರು.
ರಂಗಪ್ರವೇಶಕ್ಕೆ ಕಾರಣಕರ್ತರಾದ ಗುರುಗಳು, ಹೆತ್ತವರು ಹಾಗೂ ಸಹಪಾಠಿಗಳ ಸಹಕಾರವನ್ನು ಭಾರತಿ ಎಂ.ಸ್ಮರಿಸಿದರು.ಭಾರತಿ ಎಂ. ಅವರ ತಂದೆ ಮಾಧವ ಭಟ್, ತಾಯಿ ಗಾಯತ್ರಿ, ಸಹೋದರ ರಾಮಕೃಷ್ಣ, ದೊಡ್ಡಪ್ಪ ಕೃಷ್ಣ ಭಟ್ ಇದ್ದರು.
ಬಿಳಿನೆಲೆ ಗೋಪಾಲಕೃಷ್ಣ ಪ್ರೌಢ ಶಾಲಾ ಮುಖ್ಯಗುರು ಸತ್ಯಶಂಕರ ಸ್ವಾಗತಿಸಿದರು. ಸಹೋದರಿ ಲಕ್ಷ್ಮೀನಯನ ವಂದಿಸಿದರು. ಉಪನ್ಯಾಸಕಿ ಡಾ.ವಿಜಯಸರಸ್ವತಿ ಹಾಗೂ ಅಕಾಡೆಮಿ ವಿದ್ಯಾರ್ಥಿನಿ ವಿದುಷಿ ಮಧುರ ಪಿ.ಕೆ. ನಿರೂಪಿಸಿದರು.ಹಿಮ್ಮೇಳದಲ್ಲಿ ನಟುವಾಂಗ ಶಾಲಿನಿ ಆತ್ಮಭೂಷಣ್, ಹಾಡುಗಾರಿಕೆ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಚೆನ್ನೈ, ಮೃದಂಗದಲ್ಲಿ ವಿದ್ವಾನ್ ವಿನಯ್ ನಾಗರಾಜ್ ಬೆಂಗಳೂರು, ಕೊಳಲಿನಲ್ಲಿ ವಿದ್ವಾನ್ ರಘುಸಿಂಹ ಎ.ಎನ್.ಬೆಂಗಳೂರು, ವೀಣೆಯಲ್ಲಿ ವಿದ್ವಾನ್ ವಿ.ಸುಂದರರಾಜನ್ ತಿರುವನಂತಪುರ ಸಾಥ್ ನೀಡಿದರು.