ವಿಶೇಷ ವರದಿ
ದ.ಕ. ಜಿಲ್ಲೆ ಸೇರಿದಂತೆ ಕರ್ನಾಟಕ ಮತ್ತು ಕೇರಳದ ಹಲವು ಪ್ರದೇಶಗಳಲ್ಲಿ ಗೇರು ಬೆಳೆಗಳನ್ನು ಹೆಚ್ಚಾಗಿ ಬೆಳೆಸಲಾಗುತ್ತಿದೆ. ಆದರೆ ಗೇರು ಬೀಜಗಳಿಗೆ ಇರುವ ಬೇಡಿಕೆ ಅದರ ಹಣ್ಣುಗಳಿಗೆ ಇರುವುದಿಲ್ಲ. ಕಾರಣ ಗೇರು ಹಣ್ಣುಗಳ ಸಂಸ್ಕರಣೆ ಮಾಡುವುದು ಸುಲಭದ ಕೆಲಸವಲ್ಲ. ಹೀಗಾಗಿ ಎಲ್ಲರೂ ಗೇರು ಬೀಜವನ್ನು ಬೇರ್ಪಡಿಸಿ ಹಣ್ಣುಗಳನ್ನು ಎಸೆಯುತ್ತಾರೆ. ಗೇರು ಹಣ್ಣುಗಳ ಮೌಲ್ಯಗಳ ಅರಿವಿಲ್ಲದ ಕಾರಣ ವ್ಯರ್ಥವಾಗುತ್ತದೆ. ಆದರೆ ಇತ್ತೀಚೆಗೆ ಗೇರು ಹಣ್ಣುಗಳ ಮೌಲ್ಯವರ್ಧನೆ ಕುರಿತು ಹಲವು ಯೋಜನೆಗಳು ಕಾರ್ಯಗತಗೊಂಡಿದೆ.
ಅಲ್ಕೋಹಾಲ್ ಅಲ್ಲದ ಕುಡಿಯಲು ಯೋಗ್ಯವಾದ ಮತ್ತು ಆರೋಗ್ಯಕರ ಜ್ಯೂಸ್, ಇನ್ನಿತರ ಉತ್ಪನ್ನಗಳನ್ನು ಗೇರುಹಣ್ಣಿನ ಮೂಲಕ ತಯಾರಿಬಹುದು ಎಂಬ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಗಳು ನಡೆಯುತ್ತಿದೆ. ಅಲ್ಲದೆ ಗೇರು ಕೃಷಿಕರಿಗೆ ಇದನ್ನೊಂದು ಲಾಭದಾಯಕ ಉದ್ಯಮವಾಗಿ ಪರಿವರ್ತಿಸುವ ಪ್ರಯತ್ನಗಳು ನಡೆಯುತ್ತಲೇ ಇದೆ.ಪುತ್ತೂರಿನ ಮೊಟ್ಟೆತ್ತಡ್ಕದಲ್ಲಿರುವ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ಬುಧವಾರ ನಡೆದ ಗೇರು ದಿನಾಚರಣೆ ಮತ್ತು ಗೇರು ಹಣ್ಣಿನ ಮೌಲ್ಯವರ್ಧನೆ ಕುರಿತಂತೆ ಹಲವು ವಿಚಾರ ಸಂಕಿರಣದಲ್ಲಿ, ರೈತರಿಗೆ ಗೇರು ಮೌಲ್ಯವರ್ಧನೆಯ ವಿಚಾರದಲ್ಲಿ ಹಲವು ವಿಚಾರಗಳು ಬೆಳಕಿಗೆ ಬಂದಿದೆ. ಈ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ೫ ಬಗೆಯ ಗೇರು ಹಣ್ಣುಗಳ ಪಾನೀಯಗಳನ್ನು ಲೋಕಾರ್ಪಣೆಗೊಳಿಸಲಾಗಿತ್ತು.ಈ ಬಗ್ಗೆ ಅಡಿಕೆ ಪತ್ರಿಕೆಯ ಸಂಪಾದಕರಾದ ಪ್ರಗತಿಪರ ಕೃಷಿಕ ಶ್ರೀಪಡ್ರೆ ಅವರು ನಿರಂತರ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದಾರೆ. ಅಡಿಕೆ ಪತ್ರಿಕೆ ಸಂಪಾದಕ, ಕೃಷಿ ತಜ್ಞ ಶ್ರೀ ಪಡ್ರೆಯವರು ಹೇಳುವಂತೆ ಗೇರು ಹಣ್ಣಿನ ಪಾನೀಯವನ್ನು ಕುಡಿದ ಗೇರು ಕೃಷಿ ಕುಟುಂಬದ ಹಲವು ವ್ಯಕ್ತಿಗಳು ಅದಕ್ಕೆ ಉತ್ತಮ ಅಂಕ ನೀಡಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದೇಹಳ್ಳಿಯ ನಾಗರಾಜ ಭಟ್ ಈಚೆಗೆ ವಾಟ್ಸಪ್ ನಲ್ಲಿ ಬಂದ ಮಾಹಿತಿ ಅನುಸರಿಸಿ ಗೇರುಹಣ್ಣು ಜ್ಯೂಸ್ ತಯಾರಿಸಿ ಕುಡಿದು ಹತ್ತರಲ್ಲಿ ೮ ಅಂಕ ನೀಡಿದ್ದಾರೆ. ದ.ಕ. ಜಿಲ್ಲೆಯ ಅಡ್ಯನಡ್ಕದ ಬಳಿಯ ಪುಣಚದ ಕೃಷಿಕ ಮೂಡಂಬೈಲು ನಾರಾಯಣ ನಾಯ್ಕ ಅವರು ಜ್ಯೂಸ್ ತಯಾರಿಸಿದ್ದು ರುಚಿ, ಸ್ವಾದ ಉತ್ತಮವಾಗಿದೆ ಎಂದಿದ್ದಾರೆ. ಗೇರು ಹಣ್ಣಿನಿಂದ ತಯಾರಿಸಿದ ಪಾನೀಯಗಳನ್ನು ಒಗರು ತೆಗೆಯದೆ ಕುಡಿಯುವುದು ಸ್ಪಲ್ಪ ಮಟ್ಟಿಗೆ ಕಷ್ಟಸಾಧ್ಯ. ಸುಲಭವಾಗಿ ಇದರ ಒಗರು ತೆಗೆಯುವ ಕ್ರಮ ಜನರಿಗೆ ಗೊತ್ತಿಲ್ಲ ಎನ್ನುತ್ತಾರೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ದೇಹಳ್ಳಿಯ ನಾಗರಾಜ ಭಟ್ ಗೇರು ಹಣ್ಣು ಆರ್ಥಿಕ ಸಂಪನ್ಮೂಲಕ್ಕೆ ದಾರಿ: ಭರತ್‌ರಾಜ್
ರೈತ ಕುಡ್ಲ ಪ್ರತಿಷ್ಠಾನ ವಿಚಾರ ಗೋಷ್ಠಿ ರೈತ ಕುಡ್ಲ ಪ್ರತಿಷ್ಠಾನದ ನೇತೃತ್ವದಲ್ಲಿ ಮೇ ೮,೯,೧೦ರಂದು ಗೇರು ಮತ್ತು ಮಾವು ಮೇಳವನ್ನು ಮಂಗಳೂರಿನಲ್ಲಿ ಆಯೋಜಿಸಲಾಗಿದೆ. ಮೇಳದಲ್ಲಿ ಗೇರು ಹಣ್ಣಿನ ಮೌಲ್ಯವರ್ಧನೆಯ ಬಗ್ಗೆ ವಿಚಾರಗೋಷ್ಠಿಗಳು ನಡೆಯಲಿದೆ. ಈ ಮೇಳಕ್ಕೆ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರ ಮತ್ತು ಕೇರಳದ ಪ್ಲಾಂಟೇಶನ್ ಕಾರ್ಪೋರೇಶನ್, ಗೇರು ಸಂಶೋಧನಾ ನಿರ್ದೇಶನಾಲಯಗಳಲ್ಲಿ ಅಭಿವೃದ್ಧಿ ಪಡಿಸಲಾಗಿರುವ ಗೇರು ಆ್ಯಪಲ್‌ಗಳು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗೋವಾದಿಂದ ಆಗಮಿಸುವ ೧೫ಕ್ಕೂ ಅಧಿಕ ಗೇರು ಆ್ಯಪಲ್ ಸಂಬಂಧಿತ ಮಳಿಗೆಗಳು ಮಂಗಳೂರಿಗೆ ಬರಲಿದೆ. ಜ್ಯೂಸ್ ತಯಾರಿ ತರಬೇತಿ: ಮುಂದಿನ ದಿನಗಳಲ್ಲಿ ಸ್ತ್ರೀ ಶಕ್ತಿ ಸಂಘಗಳಿಗೆ ೩ ದಿನಗಳ ಕ್ಯಾಶ್ಯೂ ಆ್ಯಪಲ್ ಜ್ಯೂಸ್ ತಯಾರಿ ತರಬೇತಿ ನೀಡಿ ಗ್ರಾಮೀಣ ಪ್ರದೇಶಗಳ ಮಹಿಳೆಯರ ಆರ್ಥಿಕ ಸಂಪನ್ಮೂಲಗಳನ್ನು ಬಲಪಡಿಸುವ ಉದ್ದೇಶ ಹೊಂದಲಾಗಿದೆ ಎಂದು ರೈತ ಕುಡ್ಲ ಪ್ರತಿಷ್ಠಾನದ ಭರತ್‌ರಾಜ್ ಸೊರಕೆ ಅವರು ತಿಳಿಸಿದ್ದಾರೆ.
೩೦ಕ್ಕೂ ಅಧಿಕ ಉತ್ಪನ್ನ: ಪುತ್ತೂರಿನ ಕೇಂದ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದಲ್ಲಿ ೩೦ಕ್ಕೂ ಅಧಿಕ ಉತ್ಪನ್ನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಶಿವಮೊಗ್ಗದ ಗೇರು ಸಂಶೋಧನಾ ಕೇಂದ್ರದಲ್ಲಿ ಕಾರ್ಬೋನೈಟೆಡ್ ಡ್ರಿಂಕ್ ತಯಾರಿಸಲಾಗಿದೆ. ಚಿತ್ರದುರ್ಗದ ತಿಪ್ಪೇಸ್ವಾಮಿ ಎಂಬವರು ತಾವೇ ಯಂತ್ರದ ಮೂಲಕ ಜ್ಯೂಸ್ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಮೂಲ್ಕಿಯ ಕೆನ್ಯೂಟ್ ರ‍್ಹಾನ ಅವರಲ್ಲಿ ೩೦೦ ಗೇರು ಮರಳಿದ್ದು, ಅದರಲ್ಲಿ ಆದ ಹಣ್ಣುಗಳಿಂದ ಜ್ಯೂಸ್ ಮಾಡಿ ಬಾಟ್ಲಿಯಲ್ಲಿ ತುಂಬಿಸಿ ಮಾರಾಟ ಮಾಡುತ್ತಿದ್ದಾರೆ. ಅವರು ಮರದಲ್ಲಿ ಸಿಗುವ ಬೀಜಕ್ಕಿಂತ ಹಣ್ಣುಗಳಲ್ಲಿಯೇ ಹೆಚ್ಚು ಲಾಭ ಪಡೆಯುತ್ತಿದ್ದಾರೆ. ಎತಡ್ಕದಲ್ಲಿನ ಗಣಪತಿ ಭಟ್ ಎಂಬವರು ಗೇರು ಹಣ್ಣಿನ ಒಗರು ತೆಗೆದು ಉಪ್ಪು ಸೇರಿಸಿ ಜ್ಯೂಸ್ ಮಾಡಿ ಮಾರಾಟ ಮಾಡುತ್ತಿದ್ದು, ಈ ಜ್ಯೂಸ್‌ಗೆ ಬಹಳ ಬೇಡಿಕೆ ಇದೆ ಎನ್ನಲಾಗಿದೆ. ಸುಳ್ಯ ತಾಲೂಕಿನ ಗುತ್ತಿಗಾರಿನ ಲತಾ ಅಜಡ್ಕ ಅವರೂ ಜ್ಯೂಸ್ ತಯಾರಿಸುತ್ತಿದ್ದಾರೆ. ಕಾಸರಗೋಡಿನ ಪ್ಲಾಂಟೇಶನ್ ಕಾರ್ಪೋರೇಶನ್ ಆಫ್ ಕೇರಳ ಎಂಬ ಸರ್ಕಾರಿ ಸ್ವಾಮ್ಯದ ಸಂಸ್ಥೆಯು ಸುಮಾರು ೪.೫ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೇರು ಬೆಳೆ ಮಾಡುತ್ತಿದ್ದು, ಕಳೆದ ೧೦ ವರ್ಷಗಳಲ್ಲಿ ಗೇರು ಮೌಲ್ಯವರ್ಧಿತ ಉತ್ಪನ್ನ ತಯಾರಿಸಿ ಮಾರಾಟ ಮಾಡುತ್ತಿದ್ದಾರೆ. ೩೦೦ ಎಂಎಲ್‌ಗೆ ೪೦ ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದ್ದು, ಈ ಮೂಲಕ ರೂ. ೧.೪೦ ಲಕ್ಷ ಆದಾಯ ಸಂಗ್ರಹಿಸಿಕೊಂಡಿದ್ದಾರೆ. ಗೇರು ಮೌಲ್ಯವರ್ಧಿತ ಉತ್ಪನ್ನಗಳು ಲಾಭದಾಯಕ ಎಂದು ಇವರು ಹೇಳುತ್ತಾರೆ. ಕಡಿಮೆ ಎಂದರೂ ಗೇರು ಬೀಜದಿಂದ ೫ ಪಟ್ಟು ಹೆಚ್ಚಿನ ಆರ್ಥಿಕ ಲಾಭವನ್ನು ಗೇರು ಹಣ್ಣುಗಳ ಉತ್ಪನ್ನದಿಂದ ಪಡೆಯಲು ಸಾಧ್ಯವಿದೆ ಎಂದು ಶ್ರೀಪಡ್ರೆ ಅವರು ವಿಶ್ವಾಸ ವ್ಯಕ್ತ ಪಡಿಸುತ್ತಾರೆ.