ಪುತ್ತೂರು: ಇತಿಹಾಸದ ಅಧ್ಯಯನ ಮತ್ತು ಪ್ರಾಚೀನ ವಸ್ತುಗಳನ್ನು ಬಳಕೆಯ ಹಿನ್ನೆಲೆಯನ್ನು ತಿಳಿಯಲು ಹೆರಿಟೇಜ್ ಕ್ಲಬ್ ಸಹಕಾರಿ. ಕರ್ನಾಟಕದಲ್ಲಿ ದೊರೆತ ಅನೇಕ ಶಾಸನಗಳು ಅಥವಾ ಐತಿಹಾಸಿಕ ಹಿನ್ನೆಲೆಗಳಿರುವ ಹಂಪಿ, ಬೇಲೂರು ಪಟ್ಟದಕಲ್ಲುಗಳಂತಹ ಸ್ಥಳಗಳನ್ನು ಗಮನಿಸಿದಾಗ ಇದು ಅರಿವಾಗುತ್ತದೆ. ಕರ್ನಾಟಕದಲ್ಲಿ ಪಾರಂಪರಿಕ ಜ್ಞಾನವಿದೆ. ಅದರೊಂದಿಗೆ ಇನ್ನಷ್ಟು ಸಂಶೋಧನಾತ್ಮಕತೆಯ ಅಗತ್ಯತೆಯೂ ಇವೆ ಎಂದು ಪುರಾತತ್ವ ಸಂಗ್ರಹಾಲಯ ಮತ್ತು ಹೆರಿಟೇಜ್ ಇಲಾಖೆಯ ಪುರಾತತ್ವ ವಿಭಾಗದ ನಿರ್ದೇಶಕ ಡಾ. ಆರ್. ಶೇಜೇಶ್ವರ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿಕೃಷ್ಣ ಕೆ.ಎನ್. ಮಾತನಾಡಿ, ಇತಿಹಾಸದ ಕುರಿತು ಅಧ್ಯಯನ ಮಾಡುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಸ್ಫೂರ್ತಿದಾಯಕವಾಗಿದ್ದು, ಇವರು ಸಮಾಜವನ್ನು ನಡೆಸುವವರಾಗಿದ್ದಾರೆ. ಆದ್ದರಿಂದ ಸೃಜನತ್ಮಾಕ ಯೋಚನೆ ಮಾಡುತ್ತಾ ಮುಂದಿನ ಗುರಿಯತ್ತ ಗಮನಹರಿಸಬೇಕು ಹಾಗೂ ರಾಷ್ಟ್ರ ನಿರ್ಮಾಣದಲ್ಲಿ ಮಹತ್ತರ ಪಾತ್ರ ವಹಿಸಬೇಕು ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶ್ರೀಕೃಷ್ಣ ಗಣರಾಜ ಭಟ್ ಮಾತನಾಡಿ, ಪ್ರತಿಭೆಗಳು ಹುಟ್ಟುತ್ತಲೇ ಬರುವುದಿಲ್ಲ. ಕೆಲವನ್ನು ಕೇಳಿ, ಇನ್ನು ಕೆಲವನ್ನು ನೋಡಿ ಆರಿತುಕೊಂಡಾಗ ಮಾತ್ರ ಪ್ರತಿಭೆಗಳು ಹುಟ್ಟಲು ಸಾಧ್ಯ ಎಂದು ಹೇಳಿದರು.ಇತಿಹಾಸ ವಿಭಾಗದ ಮುಖ್ಯಸ್ಥ ಹಾಗೂ ಹೆರಿಟೇಜ್ ಕ್ಲಬ್ ಸಂಯೋಜಕ ಡಾ. ಪ್ರಮೋದ್ ಎಂ.ಜಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾಲೇಜಿನ ಆಡಳಿತ ಮಂಡಳಿ ಸದಸ್ಯ ಸುಕುಮಾರ್ ರಾವ್ ಎನ್.ಎಸ್. ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಹೆರಿಟೇಜ್ ಕ್ಲಬ್‌ನ ಉಪಾಧ್ಯಕ್ಷೆ ಸೌಮ್ಯ ಸ್ವಾಗತಿಸಿದರು. ಹೆರಿಟೇಜ್ ಕ್ಲಬ್‌ನ ಅಧ್ಯಕ್ಷ ಚಂದನ್ ವಂದಿಸಿದರು. ಕೆ. ಕೃತಿಕಾ ನಿರೂಪಿಸಿದರು.