ಗೋಕರ್ಣ: ರಾಘವೇಶ್ವರ ಭಾರತೀ ಸ್ವಾಮೀಜಿಯವರ 31ನೇ ಚಾತುರ್ಮಾಸ್ಯ ಜು. 21ರಿಂದ ಸೆ. 18ರ ವರೆಗೆ ಗೋಕರ್ಣದ ಅಶೋಕೆಯಲ್ಲಿ ಸಂಪನ್ನಗೊಳ್ಳಲಿದೆ.
ಅನಾವರಣ ಚಾತುರ್ಮಾಸ್ಯದ ಪ್ರತಿದಿನವೂ ಸಮಾಜದ ವಿಶಿಷ್ಟ ವ್ಯಕ್ತಿಗಳು, ವಿಷಯಗಳು ಮತ್ತು ವಸ್ತುಗಳ ಅನಾವರಣ ಈ ಬಾರಿಯ ವಿಶೇಷ. 60 ದಿನಗಳಲ್ಲಿ ಕನಿಷ್ಠ 60 ವ್ಯಕ್ತಿ- ವಿಷಯ- ವಸ್ತುಗಳ ಅನಾವರಣಕ್ಕೆ ಈ ಚಾತುರ್ಮಾಸ್ಯ ಸಾಕ್ಷಿಯಾಗಲಿದೆ. ಸಮಾಜದಲ್ಲಿ ಎಲೆಮರೆಯ ಕಾಯಿಗಳಾಗಿ ಸೇವೆ ಸಲ್ಲಿಸುತ್ತಿರುವ, ಇದುವರೆಗೆ ಸಮಾಜಕ್ಕೆ ತೆರೆದುಕೊಳ್ಳದ ವ್ಯಕ್ತಿಗಳು, ಸಮಾಜದಲ್ಲಿ ಬೆಳಕಿಗೆ ಬರದ ಶ್ರೀಮಠದ ಭವ್ಯತೆ, ರಾಮಚಂದ್ರಾಪುರ ಮಠದ ಮಹತ್ವದ ಯೋಜನೆಗಳ ಅನಾವರಣ ಕೂಡಾ ಈ ಸಂದರ್ಭದಲ್ಲಿ ನಡೆಯಲಿದೆ.
ಚಾತುರ್ಮಾಸ್ಯಕ್ಕೆ ಪೂರ್ವಭಾವಿಯಾಗಿ ಮುನ್ನಾ ದಿನ(ಜುಲೈ 20) ಶ್ರೀಗಳು ಪುರಾತನ ಮಲ್ಲಿಕಾರ್ಜುನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುವರು. ರಾಜ್ಯದ ಮೂಲೆ ಮೂಲೆಗಳಿಂದ ಶಿಷ್ಯಭಕ್ತರು ಸಮರ್ಪಿಸಿದ ಸುವಸ್ತುಗಳಿಗೆ ಧಾನ್ಯಲಕ್ಷ್ಮಿಪೂಜೆಯನ್ನು ರಾಘವೇಶ್ವರ ಶ್ರೀಗಳು ನೆರವೇರಿಸುವರು. ಬಳಿಕ ಅನ್ನಪೂರ್ಣೇಶ್ವರಿ ಪೂಜೆಯೊಂದಿಗೆ ಚಾತುರ್ಮಾಸ್ಯ ಪರ್ಯಂತ ಲಕ್ಷಾಂತರ ಶಿಷ್ಯಭಕ್ತರಿಗೆ ಅನ್ನದಾನ ಆರಂಭವಾಗಲಿದೆ.ಆಷಾಢ ಶುದ್ಧ ಹುಣ್ಣಿಮೆಯಂದು ವ್ಯಾಸಪೂಜೆ ಮತ್ತು ಗುರು ಪರಂಪರೆ ಪೂಜೆಯೊಂದಿಗೆ 31ನೇ ವರ್ಷದ ವ್ರತಾರಂಭ ಮಾಡುವರು. ಜು. 24ರಂದು ಶ್ರೀವರ್ಧಂತಿ, ಆ. 6ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಸೆ. 7ರಂದು ಗಣೇಶ ಚತುರ್ಥಿಯಂಥ ವಿಶೇಷ ಕಾರ್ಯಕ್ರಮಗಳ ಜತೆಗೆ ವೈದಿಕ ಸಮಾವೇಶ, ಗುರಿಕಾರರ ಸಮಾವೇಶಗಳು ಚಾತುರ್ಮಾಸ್ಯದಲ್ಲಿ ಆಯೋಜಿತವಾಗಿವೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಜನೆ ಹಾಗೂ ಪ್ರತಿಭಾ ಪುರಸ್ಕಾರ ನೆರವೇರಲಿದೆ. ಸೆ. 18ರಂದು ಸೀಮೋಲ್ಲಂಘನೆಯೊಂದಿಗೆ ಚಾತುರ್ಮಾಸ್ಯ ಸಂಪನ್ನಗೊಳ್ಳಲಿದೆ.