ಖಾಸಗಿ ಶಿಕ್ಷಣ ಸಂಸ್ಥೆಯ ಶಾಲೆ ವಾಹನ - ಬಸ್‌ ಭೀಕರ ಡಿಕ್ಕಿ : 2 ಮಕ್ಕಳ ದುರ್ಮರಣ, 3 ಗಂಭೀರ

ಸಾರಾಂಶ

ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಹಾಗೂ ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಕಪಗಲ್ ಗ್ರಾಮದ ಸಮೀಪ ಗುರುವಾರ ಸಂಭವಿಸಿದೆ.

ಮಾನ್ವಿ(ರಾಯಚೂರು) :  ಖಾಸಗಿ ಶಿಕ್ಷಣ ಸಂಸ್ಥೆಯ ಶಾಲಾ ವಾಹನ ಹಾಗೂ ಸಾರಿಗೆ ಸಂಸ್ಥೆಯ ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟು, ಮೂವರು ಗಂಭೀರ ಗಾಯಗೊಂಡಿರುವ ಘಟನೆ ತಾಲೂಕಿನ ಕಪಗಲ್ ಗ್ರಾಮದ ಸಮೀಪ ಗುರುವಾರ ಸಂಭವಿಸಿದೆ. ಅಪಘಾತದ ತೀವ್ರತೆಗೆ ಒಬ್ಬನ ಎರಡೂ ಕಾಲುಗಳು ತುಂಡಾಗಿದ್ದು, ಇನ್ನೊಬ್ಬನ ಒಂದು ಕಾಲು ತುಂಡಾಗಿದೆ. ಇವರಲ್ಲಿ ಎರಡೂ ಕಾಲು ತುಂಡಾದ ವಿದ್ಯಾರ್ಥಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.

ತಾಲೂಕಿನ ಕುರ್ಡಿ ಗ್ರಾಮದ ಒಂದನೇ ತರಗತಿ ವಿದ್ಯಾರ್ಥಿ ಸಮರ್ಥ ಅಮರೇಶ (7), ಏಳನೇ ತರಗತಿ ವಿದ್ಯಾರ್ಥಿ ಶ್ರೀಕಾಂತ ಮಾರೇಶ್ (12) ಮೃತ ವಿದ್ಯಾರ್ಥಿಗಳು. ಇವರೆಲ್ಲ ಮಾನ್ವಿ ಪಟ್ಟಣದ ಲೊಯಲಾ ಶಾಲೆ ವಿದ್ಯಾರ್ಥಿಗಳು. ಘಟನೆಯಲ್ಲಿ ಶಾಲಾ ಬಸ್‌ ಚಾಲಕ ಬಲವಂತರಾಯ ಸೇರಿ ಮೂವರ ಸ್ಥಿತಿ ಗಂಭೀರವಾಗಿದೆ. 18 ವಿದ್ಯಾರ್ಥಿಗಳೂ ಗಾಯಗೊಂಡಿದ್ದು, ಇವರಲ್ಲಿ ಕೆಲವರನ್ನು ರಾಯಚೂರಿನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾರಿಗೆ ಸಂಸ್ಥೆಯ ಬಸ್‌ನಲ್ಲಿ 60 ಪ್ರಯಾಣಿಕರಿದ್ದು, ಅದರಲ್ಲಿ 20 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳಗ್ಗೆ ವಿದ್ಯಾರ್ಥಿಗಳನ್ನು ಶಾಲೆಗೆ ಕರೆದುಕೊಂಡು ಬರುತ್ತಿದ್ದ ಶಾಲಾ ಬಸ್‌ ಕಪಗಲ್ ಗ್ರಾಮದಿಂದ ಪಟ್ಟಣದ ಕಡೆಗೆ ಹೋಗುತ್ತಿದ್ದಾಗ ಮಾನ್ವಿಯಿಂದ ರಾಯಚೂರು ಕಡೆಗೆ ತೆರಳುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಮುಖಾಮುಖಿಯಾಗಿ ಡಿಕ್ಕಿಯಾಗಿ ಈ ದುರ್ಘಟನೆ ಸಂಭವಿಸಿದೆ. ರಸ್ತೆ ಗುಂಡಿ ತಪ್ಪಿಸಲು ಹೋಗಿ ಸಾರಿಗೆ ಬಸ್‌ ಚಾಲಕ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ.

ಘಟನೆಯ ತೀವ್ರತೆ ಎಷ್ಟಿತ್ತೆಂದರೆ ಎರಡೂ ವಾಹನಗಳ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಶಾಲಾ ವಾಹನಕ್ಕೆ ಹೆಚ್ಚು ಹಾನಿಯಾಗಿದ್ದು, ಅದರಲ್ಲಿದ್ದ ಮಕ್ಕಳೆಲ್ಲ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ಪಾಲಕರು ಆಸ್ಪತ್ರೆಗೆ ದೌಡಾಯಿಸಿ ಕಣ್ಣೀರಿಡುತ್ತಿದ್ದ ದೃಶ್ಯ ಕಣ್ಣೀರು ತರಿಸುವಂತಿತ್ತು.

ಘಟನಾ ಸ್ಥಳಕ್ಕೆ ಹಾಗೂ ರಿಮ್ಸ್ ಬೋಧಕ ಆಸ್ಪತ್ರೆಗೆ ಶಾಸಕ ಜಿ.ಹಂಪಯ್ಯ ನಾಯಕ, ಮಾಜಿ ಸಂಸದ ಬಿ.ವಿ.ನಾಯಕ, ಜಿಲ್ಲಾಧಿಕಾರಿ ನಿತೀಶ ಕೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಎಎಸ್ಪಿ ಶಿವಕುಮಾರ ಭೇಟಿ ನೀಡಿ ಪರಿಶೀಲನೆ , ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಹಾಗೂ ಗಾಯಾಳುಗಳ ಆರೋಗ್ಯ ವಿಚಾರಿಸಿದರು.

5 ಲಕ್ಷ ರು. ಪರಿಹಾರ ಘೋಷಣೆ: ಅಪಘಾತದಲ್ಲಿ ಮೃತ್ತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಕೆಎಸ್ಆರ್‌ಟಿಸಿಯಿಂದ ತಲಾ 5 ಲಕ್ಷ ಪರಿಹಾರ ಘೋಷಿಸಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡವರಿಗೆ ತಲಾ 3 ಲಕ್ಷ ರು. ಪರಿಹಾ ನೀಡಲು ನಿರ್ಧರಿಸಲಾಗಿದೆ.

ಸಾರ್ವಜನಿಕರಿಂದ ಪ್ರತಿಭಟನೆರಾಯಚೂರು-ಮಾನ್ವಿ ರಸ್ತೆ ಮಾರ್ಗ ನಡುವೆ ಅನೇಕ ಗುಂಡಿಗಳು ಬಿದ್ದಿದ್ದು, ಇದೇ ಕಾರಣದಿಂದಾಗಿ ಈ ಅಪಘಾತ ಸಂಭವಿಸಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು, ತನಿಖೆ ನಡೆಸಬೇಕು, ಮೃತರ ಕುಟುಂಬಕ್ಕೆ ಪರಿಹಾರ ಕಲ್ಪಿಸಿ, ರಸ್ತೆ ದುರಸ್ತಿಗೆ ಮುಂದಾಗಬೇಕು ಹಾಗೂ ಇಂಥ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಸ್ಥಳದಲ್ಲಿ ದಿಢೀರ್ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೃತರ ಕುಟುಂಬಕ್ಕೆ ಐದು ಲಕ್ಷ ರು. ಪರಿಹಾರ ಘೋಷಣೆ

ರಸ್ತೆ ಅಪಘಾತದಲ್ಲಿ ಮೃತ್ತಪಟ್ಟ ವಿದ್ಯಾರ್ಥಿಗಳ ಕುಟುಂಬಗಳಿಗೆ ಪರಿಹಾರವನ್ನು ನೀಡಲು ಸರ್ಕಾರದ ಆದೇಶಿಸಿದೆ. ಕೆಎಸ್ಆರ್ಟಿಸಿಯಿಂದ ಇಂದೇ 5 ಲಕ್ಷ ಪರಿಹಾರವನ್ನು ಸಂತ್ರಸ್ತ ಕುಟುಂಬಕ್ಕೆ ಹಸ್ತಾಂತರಿಸಲಾಗುತ್ತಿದೆ. ಗಂಭೀರವಾಗಿ ಗಾಯಗೊಂಡವರಿಗೆ 3 ಲಕ್ಷ ಪರಿಹಾ ನೀಡಲಾಗುವುದು.ಗಂಭೀರಗಾಯಗೊಂಡವರು ಹೆಚ್ಚಿನ ಚಿಕಿತ್ಸೆಗೆ ಬೇರೆಡೆ ನೀಡುವ ಅವಶ್ಯಕತೆ ಬಿದ್ದರೆ, ಕಳುಹಿಸಲು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಸೂಚನೆ ನೀಡಿದ್ದಾರೆ. ಮುಂದೆ ಇಂಥ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೀಶ ಕೆ ಅವರು ತಿಳಿಸಿದ್ದಾರೆ.

Share this article