ಕನ್ನಡಪ್ರಭ ವಾರ್ತೆ ಹಾಸನ
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿನ ಮಳೆ ಪರಿಸ್ಥಿತಿ, ಜಲಾಶಯಗಳ ನೀರಿನ ಮಟ್ಟ, ಕುಡಿಯುವ ನೀರಿನ ಲಭ್ಯತೆ, ಕೃಷಿ ಚಟುವಟಿಕೆಗಳು ಹಾಗೂ ಬರ ಪರಿಸ್ಥಿತಿಯ ಕುರಿತು ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿದರು. ಈ ಬಾರಿ ಮುಂಗಾರು ಆರಂಭವಾದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗಿಲ್ಲ. ಜಿಲ್ಲೆಯಲ್ಲಿ ಒಟ್ಟಾರೆ ಶೇ.೩೨ರಷ್ಟು ಮಳೆ ಕೊರತೆಯಾಗಿದ್ದು, ವಿಶೇಷವಾಗಿ ಜೂನ್ ತಿಂಗಳಲ್ಲಿ ತೀವ್ರ ಮಳೆ ಅಭಾವ ಕಂಡುಬಂದಿದೆ. ಇದರ ಪರಿಣಾಮ ರೈತರು ಬಿತ್ತನೆ ಕಾರ್ಯ ಆರಂಭಿಸಲು ಸಾಧ್ಯವಾಗದೆ ಕೃಷಿ ಚಟುವಟಿಕೆಗಳು ಹಿನ್ನಡೆಯಾಗಿವೆ. ಮಳೆಗಾಗಿ ಕಾಯುತ್ತಿರುವ ರೈತರು ಆತಂಕದಲ್ಲಿದ್ದು, ಮುಂದಿನ ಕೆಲ ದಿನಗಳ ಮಳೆಯೇ ಕೃಷಿಯ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಹೇಮಾವತಿ ಜಲಾಶಯದಲ್ಲಿರುವ ನೀರು ಕೇವಲ ಮೂರು ತಿಂಗಳಿಗೆ ಲಭ್ಯ:ಜಿಲ್ಲೆಯ ಪ್ರಮುಖ ಕುಡಿಯುವ ನೀರಿನ ಮೂಲವಾದ ಹೇಮಾವತಿ ಜಲಾಶಯದಲ್ಲಿ ಪ್ರಸ್ತುತ ಕೇವಲ ೧೦ ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಇದೇ ಜಲಾಶಯದಿಂದ ಹಾಸನ, ಅರಕಲಗೂಡು, ಹೊಳೆನರಸೀಪುರ ಹಾಗೂ ಆಲೂರು ತಾಲೂಕುಗಳಿಗೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಈ ನಾಲ್ಕು ತಾಲೂಕುಗಳ ಕುಡಿಯುವ ನೀರಿನ ಅಗತ್ಯಕ್ಕಾಗಿ ಪ್ರತಿ ತಿಂಗಳು ಸುಮಾರು ೨ ರಿಂದ ೨.೫ ಟಿಎಂಸಿ ನೀರು ಬೇಕಾಗುತ್ತದೆ. ಪ್ರಸ್ತುತ ಇರುವ ನೀರಿನ ಪ್ರಮಾಣವನ್ನು ಲೆಕ್ಕ ಹಾಕಿದರೆ ಇನ್ನೂ ಸುಮಾರು ಮೂರು ತಿಂಗಳ ಅವಶ್ಯಕತೆಯನ್ನು ಮಾತ್ರ ಪೂರೈಸುವಷ್ಟು ಸಂಗ್ರಹವಿದೆ ಎಂದು ಅಧಿಕಾರಿಗಳು ವಿವರಿಸಿದರು.
ಕುಡಿಯುವ ನೀರಿನ ಸಮಸ್ಯೆ ಯಾವುದೇ ಕಾರಣಕ್ಕೂ ಜನರಿಗೆ ಅಥವಾ ಜಾನುವಾರುಗಳಿಗೆ ಉಂಟಾಗದಂತೆ ಎಲ್ಲಾ ತಹಸೀಲ್ದಾರರು ತಮ್ಮ ವ್ಯಾಪ್ತಿಯ ಗ್ರಾಮಗಳ ಮೇಲೆ ನಿರಂತರ ನಿಗಾ ವಹಿಸಬೇಕು. ನೀರಿನ ಮೂಲಗಳು, ಕೆರೆಗಳು, ಕೊಳವೆಬಾವಿಗಳು ಹಾಗೂ ಪೈಪ್‌ಲೈನ್ ವ್ಯವಸ್ಥೆಯ ಕುರಿತು ಪ್ರತಿದಿನ ಮಾಹಿತಿ ಸಂಗ್ರಹಿಸಿ, ಸಮಸ್ಯೆ ಕಂಡುಬಂದ ಕೂಡಲೇ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಶ್ರೇಯಸ್ ಪಟೇಲ್ ನಿರ್ದೇಶನ ನೀಡಿದರು.
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಜುಲೈ ತಿಂಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ. ನಿರೀಕ್ಷೆಯಂತೆ ಮಳೆಯಾದರೆ ಕೃಷಿ ಚಟುವಟಿಕೆಗಳಿಗೆ ವೇಗ ಸಿಗಲಿದ್ದು, ಜಲಾಶಯಗಳಲ್ಲೂ ನೀರಿನ ಸಂಗ್ರಹ ಹೆಚ್ಚಾಗಿ ಕುಡಿಯುವ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಲಿದೆ. ಆದರೆ ಮಳೆ ಬರುವವರೆಗೂ ಯಾವುದೇ ನಿರ್ಲಕ್ಷ್ಯ ವಹಿಸದೆ ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಬೇಕು ಎಂದು ಅವರು ಹೇಳಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ಗೀತಾ ಹಾಗೂ ಜಿಲ್ಲೆಯ ಎಲ್ಲಾ ತಹಸೀಲ್ದಾರರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.