ಎರಡು ದಿನಗಳಿಂದ ನಿರಂತರ ವಿದ್ಯುತ್‌ ಕಡಿತ : 25ಕ್ಕೂ ಹೆಚ್ಚು ಹಳ್ಳಿಗಳು ರಾತ್ರಿ ಕಗ್ಗತ್ತಲಲ್ಲಿ

ಸಾರಾಂಶ

ಕಳೆದ ಎರಡು ದಿನಗಳಿಂದ ನಿರಂತರ ವಿದ್ಯುತ್‌ ಕಡಿತವಾಗಿ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ 25ಕ್ಕೂ ಹೆಚ್ಚು ಹಳ್ಳಿಗಳು ರಾತ್ರಿ ಕಗ್ಗತ್ತಲಲ್ಲಿ ಮುಳುಗಿದ್ದಲ್ಲದೆ, ಕುಡಿಯಲು ನೀರಿಲ್ಲದೆ, ಊಟ ತಯಾರಿಸಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಮಲಾಪುರ : ಕಳೆದ ಎರಡು ದಿನಗಳಿಂದ ನಿರಂತರ ವಿದ್ಯುತ್‌ ಕಡಿತವಾಗಿ ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ 25ಕ್ಕೂ ಹೆಚ್ಚು ಹಳ್ಳಿಗಳು ರಾತ್ರಿ ಕಗ್ಗತ್ತಲಲ್ಲಿ ಮುಳುಗಿದ್ದಲ್ಲದೆ, ಕುಡಿಯಲು ನೀರಿಲ್ಲದೆ, ಊಟ ತಯಾರಿಸಲು ಸಾಧ್ಯವಾಗದೆ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮಹಾಗಾಂವ ವಿದ್ಯುತ್ ಘಟಕದಲ್ಲಿ ಭಾನುವಾರ ಮಧ್ಯಾಹ್ನ ಕೇಬಲ್‌ ಸುಟ್ಟು ಹೋಗಿರುವ ಕಾರಣ ಸುತ್ತಮುತ್ತಲಿನ ಸುಮಾರು 25ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಭಾನುವಾರ ಮತ್ತು ಸೋಮವಾರ ನಿರಂತರ ವಿದ್ಯುತ್ ಕಡಿತವಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಮಹಿಳೆಯರು ಪಾತ್ರೆ ತೊಳೆಯಲು, ಊಟ ತಯಾರಿಸಲು ತೀವ್ರ ತೊಂದರೆಗೆ ಸಿಲುಕಿದ್ದಾರೆ. ನೀರು ಬಿಡಪ್ಪ ಅಂತ ನೀರುಗಂಟಿಗೆ ಕರೆ ಮಾಡಿದ್ದಾರೆ, ಕರೆಂಟ್ ಬಂದ ಮೇಲೆ ಬಿಡುತ್ತೇನೆಂಬ ಸಿದ್ಧ ಉತ್ತರ ಬರುತ್ತಿದೆ. ಅನಿವಾರ್ಯವಾಗಿ ಸಾರ್ವಜನಿಕರು ಎರಡು ಮೂರು ಕಿಲೋ ಮೀಟರ್‌ ದೂರದ ಕೆರೆ, ತೆರದ ಬಾವಿಯಿಂದ ನೀರು ತಂದು ಕುಡಿಯಲು, ಉಟ ತಯಾರಿಕೆಗೆ ಬಳಸುತ್ತಿದ್ದಾರೆ.

ರೊಟ್ಟಿ ಇಲ್ಲಿನ ಮುಖ್ಯ ಆಹಾರ. ಹಿಟ್ಟು ಹಾಕಿಸಲು ಗಿರಣಿಗಳು ಬಂದ್ ಆಗಿವೆ. ರೊಟ್ಟಿ ಮಾಡಲು ಸಾಧ್ಯವಾಗುತ್ತಿಲ್ಲ. ವಿಪರೀತ ಬಿಸಿಲಿನ ಕಾರಣ ರಾತ್ರಿ ತುಂಬಾ ಶಕೆ. ಫ್ಯಾನ್‌ಗಳಿಲ್ಲದೆ ನಿದ್ದೆ ಮಾಡಲು ಆಗಿಲ್ಲ. ಊಟ ತಿಂಡಿ ಇಲ್ಲದೆ ನಿಗದಿತ ಸಮಯಕ್ಕೆ ಮಕ್ಕಳು ಶಾಲೆ-ಕಾಲೇಜಿಗೆ ಹೋಗಲು, ನೌಕರರು ಕೆಲಸಕ್ಕೆ ಹೋಗಲು ತೊಂದರೆಯಾಗಿದೆ. ಅಲ್ಲದೆ ಸಿಬಿಎಸ್‌ಇ ಪಠ್ಯದ 10ನೇ ತರಗತಿ ಮಕ್ಕಳಿಗೆ ಪರೀಕ್ಷೆ ನಡೆಯುತ್ತಿದೆ. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಹತ್ತಿರ ಬರುತ್ತಿದೆ. ಮಕ್ಕಳ ಓದಿಗೆ ಅನಾನುಕೂಲವಾಗಿದೆ. ಕೂಡಲೇ ಜೆಸ್ಕಾಂ ಅಧಿಕಾರಿಗಳು ಕೇಬಲ್‌ ದುರಸ್ತಿಪಡಿಸಿ ವಿದ್ಯುತ್‌ ಪೂರೈಕೆಗೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Share this article