ಮಾಗಡಿ: ಚಕ್ರಬಾವಿ ವಿಎಸ್ಎಸ್ಎನ್ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ, ಕೂಡಲೇ ಫಲಿತಾಂಶವನ್ನು ತಡೆದು ಮರು ಚುನಾವಣೆ ಮಾಡಬೇಕು, ಈ ಬಗ್ಗೆ ಸಹಕಾರ ಇಲಾಖೆ ಹಾಗೂ ನ್ಯಾಯಲಯಕ್ಕೆ ದೂರು ನೀಡಲಾಗುತ್ತದೆ ಎಂದು ಮಾಜಿ ಶಾಸಕ ಎ.ಮಂಜುನಾಥ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಚುನಾವಣೆ ಗೆದ್ದ ರೀತಿಯಲ್ಲಿ ಕಾಂಗ್ರೆಸ್ ಮುಖಂಡರು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ನನ್ನಿಂದ ಚುನಾವಣೆ ನಡೆದಿದೆ ಎಂದು ಅಪಪ್ರಚಾರ ಮಾಡುತ್ತಿದ್ದು, 40 ವರ್ಷಗಳಿಂದ ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಚಕ್ರಬಾವಿ ಸೊಸೈಟಿಗೆ ಈ ಬಾರಿ ಚುನಾವಣೆ ನಡೆದಿದ್ದು ಪ್ರತಿ ಮನೆಗೂ ಹೋಗಿ ಮತಯಾಚನೆ ಮಾಡಿದ್ದೀರಾ, ಶಾಸಕ ಬಾಲಕೃಷ್ಣ ಸೀಗೇಕುಪ್ಪೆ ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆಯನ್ನು ಚುನಾವಣೆ ಸಂದರ್ಭದಲ್ಲಿ ಹಾಕಿಕೊಂಡು ಅರಳುಕುಪ್ಪೆ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಭೂಮಿಪೂಜೆ ಮಾಡಿದ್ದಕ್ಕೆ ನಿಮಗೆ ನಾಚಿಕೆ ಆಗಬೇಕು ಎಂದು ಹರಿಹಾಯ್ದರು.ಚುನಾವಣಾಧಿಕಾರಿ ಮಂಜುನಾಥ್ ಕಾಂಗ್ರೆಸ್ ಅಭ್ಯರ್ಥಿಗಳೊಂದಿಗೆ ಶಾಮಿಲಾಗಿ, ಪೊಲೀಸ್ ಇಲಾಖೆ ಬಳಸಿಕೊಂಡು, ಬೆಂಬಲಿಗರಾದ 25ರಿಂದ 30 ಮತಗಳನ್ನು ಅಕ್ರಮವಾ ಗಿ ತಾವೇ ಹಾಕಿಕೊಂಡು ಚುನಾವಣೆ ಗೆದ್ದಿದ್ದೀರಾ? ಈ ಚುನಾವಣೆ ಪಾರದರ್ಶಕವಾಗಿ ನಡೆಯಲಿಲ್ಲ. ಈ ಬಗ್ಗೆ ಎಆರ್, ಡಿಆರ್, ಜಾಯಿಂಟ್ ರಿಜಿಸ್ಟರ್, ಆರ್‌ಸಿಎಸ್‌ವರೆಗೂ ದೂರು ನೀಡಿ ಪಾರದರ್ಶಕ ಚುನಾವಣೆ ನಡೆದಿಲ್ಲ ಫಲಿತಾಂಶ ತಡೆಹಿಡಿದು ಮರು ಚುನಾವಣೆ ನಡೆಸುವಂತೆ ಒತ್ತಾಯಿಸಿ ನ್ಯಾಯಾಲಯದಲ್ಲೂ ಹೋರಾಟ ಮಾಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜೆಡಿಎಸ್ ನ ಹಿರಿಯ ಮುಖಂಡ ಏಳಿಗೆಹಳ್ಳಿ ತಮ್ಮಣ್ಣ ಗೌಡ, ವಿಜಯಕುಮಾರ್, ಹೊಸಹಳ್ಳಿ ರಂಗಣಿ, ಕೋರಮಂಗಲ ಶ್ರೀನಿವಾಸ್, ಚಕ್ರಬಾವಿ ಪ್ರಸನ್ನ, ಅರಳುಕುಪ್ಪೆ ಗಿರಿಧರ್, ಬೆಳಗವಾಡಿ ರಂಗಸ್ವಾಮಿ, ಅಂಬಿ ವಿಜಿ, ಮರೂರು ಸಾಗರ್, ರಂಗಸ್ವಾಮಿ, ಕರಡಿ ನಾಗರಾಜು, ಜಯರಾಂ, ಕೆಂಪೇಗೌಡ, ನಾಗರಾಜು ಇತರರಿದ್ದರು.