ಚನ್ನಪಟ್ಟಣ: ಜಿಲ್ಲೆಯ ರೈತರ ಪಾಲಿಗೆ ಉಪಟಳಕಾರಿಯಾಗಿದ್ದ ಮಖ್ನಾ ಅನೆಯನ್ನು ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ತಾಲೂಕಿನ ಬಿ.ವಿ.ಹಳ್ಳಿ ಬಳಿಯ ಕೆಂಪೀಕಟ್ಟೆ ಬಳಿ ಭಾನುವಾರ ಬೆಳಗ್ಗೆ ೧೧ ಗಂಟೆಗೆ ಕಂಡು ಬಂದ ೪೫ ವರ್ಷ ವಯಸ್ಸಿನ ಮಖ್ನಾ ಆನೆಯನ್ನು ಅರವಳಿಕೆ ಮದ್ದಿನಿಂದ ಪ್ರಜ್ಞೆ ತಪ್ಪಿಸಿ ಸೆರೆಹಿಡಿಯಲಾಗಿದೆ.ಜಿಲ್ಲೆಯ ರೈತರ ಪಾಲಿಗೆ ಕಂಟಕಪ್ರಾಯವಾಗಿರುವ ಎರಡು ಪುಂಡಾನೆಗಳ ಸೆರೆಗೆ ಶನಿವಾರದಿಂದ ಕಾರ್ಯಾಚರಣೆ ಆರಂಭಿಸಲಾಗಿತ್ತು. ಆದರೆ, 11 ಆನೆಗಳು ಗುಂಪುಗೂಡಿ ಬಿಡಾರ ಹೂಡಿದ್ದ ಕಾರಣ ಮಖ್ನಾ ಆನೆಯನ್ನು ಬೇರ್ಪಡಿಸಿ ಸೆರೆ ಹಿಡಿಯಲು ಕಷ್ಟಸಾಧ್ಯವಾಗಿತ್ತು. ಶನಿವಾರ ಅನೆ ಹಿಂಡಿನಿಂದ ಬೇರ್ಪಡಿಸಲು ಸಾಕಷ್ಟು ಪ್ರಯತ್ನ ನಡೆಸಿದ ನಂತರ ಸಂಜೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಶನಿವಾರ ರಾತ್ರಿ ಆನೆ ಹಿಂಡಿನಿಂದ ಬೇರ್ಪಟ್ಟ ಆನೆಯನ್ನು ಮತ್ತೆ ಹಿಂಡು ಕೂಡಿಕೊಳ್ಳದಂತೆ ನೋಡಿಕೊಳ್ಳಲಾಗಿತ್ತು.
ಶನಿವಾರ ರಾತ್ರಿಯಿಂದಲೇ ಅರಣ್ಯ ಇಲಾಖೆ ವಾಚರ್‌ಗಳು ಆನೆಯ ಚಲನವಲನದ ಮೇಲೆ ಕಣ್ಣಿಟ್ಟಿದ್ದರು. ಭಾನುವಾರ ಬಿ.ವಿ.ಹಳ್ಳಿ ಬಳಿಯ ಕೆಂಪೀಕಟ್ಟೆ ಬಳಿ ಆನೆ ಕಂಡು ಬಂದಿತ್ತು. ಮೊದಲಿಗೆ ಜೀಪ್‌ನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ವೈದರು ಹಾಗೂ ಶೂಟರ್‌ಗಳು ಒಂದು ಹಂತಕ್ಕೆ ಆನೆ ಸಮೀಪಕ್ಕೆ ಹೋಗಿ ಅರವಳಿಕೆ ಸಿರಂಜ್ ಅನ್ನು ಶೂಟ್ ಮಾಡಿದ್ದಾರೆ.ಸ್ವಲ್ಪ ಸಮಯದಲ್ಲೇ ಆನೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದೆ. ಆನೆ ಪ್ರಜ್ಞೆತಪ್ಪಿ ಬಿದ್ದ ಬಳಿಕ ವೈದ್ಯರ ತಂಡ ಪುಂಡಾನೆಯ ಆರೋಗ್ಯ ತಪಾಸಣೆ ನಡೆಸಿದ್ದು, ಪ್ರಜ್ಞೆ ತಪ್ಪಿದ ಪುಂಡಾನೆಯನ್ನು ಹಗ್ಗ ಹಾಗೂ ಸರಪಳಿಗಳಿಂದ ಬಿಗಿದು, ನೀರು ಸುರಿದು ಆನೆಯ ಮಂಪರು ಇಳಿಸಿದರು. ಎಚ್ಚರಗೊಂಡ ಪುಂಡಾನೆಯನ್ನು ಪಳಗಿದ ಅನೆಗಳಾದ ಸುಗ್ರೀವ, ಈಶ್ವರ, ಕಂಜನ್, ಹರ್ಷ, ಧನಂಜಯ ಮತ್ತು ಅಯ್ಯಪ್ಪ ಆನೆಗಳ ಸಹಕಾರದಿಂದ ಕಾಡಿನಿಂದ ಆಚೆಗೆ ಕರೆತಂದು ಲಾರಿಗೆ ಹತ್ತಿಸಲಾಗಿದೆ.
೯ಆನೆಗಳನ್ನು ಲೀಡ್ ಮಾಡುತ್ತಿದ್ದ ಮಖ್ನಾ:
ಇದೀಗ ಸೆರೆ ಹಿಡಿದಿರುವ ಮಖ್ನಾ ಸುಮಾರು ೯ ಆನೆಗಳನ್ನು ಈ ಪುಂಡಾನೆ ಲೀಡ್ ಮಾಡುತ್ತಿತ್ತು. ಆನೆಗಳನ್ನು ಡ್ರೈವ್ ಮಾಡುವ ಸಂದರ್ಭದಲ್ಲಿ ಈ ಪುಂಡಾನೆ ಹಿಂದಿರುಗಿ ಅರಣ್ಯ ಇಲಾಖೆ ಸಿಬ್ಬಂದಿಯನ್ನೇ ಹೆದರಿಸುತ್ತಿತ್ತು.
ಮತ್ತೊಂದು ಒಂಟಿ ಸಲಗ ಸೆರೆಹಿಡಿಯಲು ಬೇಕಿರುವ ಕ್ರಾಲ್‌ಗಳು ರಿಪೇರಿಯಾಗಬೇಕಿರುವ ಕಾರಣ ಎರಡು ದಿನದ ನಂತರ ಕಾರ್ಯಾಚರಣೆ ನಡೆಸಲಾಗುವುದು.ಡಿಎಫ್‌ಒ ರಾಮಕೃಷ್ಣಪ್ಪ ಮಾರ್ಗದರ್ಶನ, ಚನ್ನಪಟ್ಟಣ ವಲಯ ಅರಣ್ಯಾಧಿಕಾರಿ ಮಲ್ಲೇಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೈದ್ಯರಾದ ಡಾ.ವಸೀಂ, ಡಾ.ಕಿರಣ್ ಕುಮಾರ್, ಗಿರೀಶ್, ರಂಜನ್ ಮುಂತಾದವರು ಭಾಗವಹಿಸಿದ್ದರು.
ಬಾಕ್ಸ್.............ಆನೆ ಸಾಗಿಸುತ್ತಿದ್ದ ಲಾರಿ ತಡೆದು ಆಕ್ರೋಶ
ಒಂದು ಆನೆಯನ್ನು ಸೆರೆ ಹಿಡಿದು ಸ್ಥಳಾಂತರಿಸಿದರೆ ಸಾಲದು, ಎಲ್ಲ ಅನೆಗಳನ್ನು ಹಿಡಿದು ಸ್ಥಳಾಂತರಿಸುವಂತೆ ರಾಮನಗರದ ಹೊಸದೊಡ್ಡಿ ಬಳಿ ಗ್ರಾಮಸ್ಥರು ಆನೆಗಳನ್ನು ಸಾಗಿಸುತ್ತಿದ್ದ ಲಾರಿಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು.ಈ ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ರೈತರು ಬದುಕುವುದು ದುಸ್ತರವಾಗಿದೆ. ವರ್ಷ ಪೂರ್ತಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ಪುಂಡಾನೆಗಳ ಹಿಂಡು ಕ್ಷಣಾರ್ಧದಲ್ಲಿ ನಾಶ ಮಾಡುತ್ತಿವೆ. ಪುಂಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕಿದೆ ಎಂದು ಆಗ್ರಹಿಸಿದರು.
ಪೊಟೋ೧ಸಿಪಿಟಿ೧:ಆನೆ ಸೆರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ.
ಪೊಟೋ೧ಸಿಪಿಟಿ೨:ಅರಣ್ಯ ಇಲಾಖೆ ಸೆರೆಹಿಡಿದಿರುವ ಮಖ್ನಾ ಆನೆ.