ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಂಪುಟಕ್ಕೆ ಹೊಸದಾಗಿ 19 ಮಂದಿ ಸಚಿವರು ಸೇರ್ಪಡೆಯಾಗಿ ಒಂದು ಸ್ಥಾನ ಖಾಲಿ ಉಳಿದಿರುವುದರಿಂದ ಖಾಲಿ ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ಲಾಬಿ ಜೋರು ಪಡೆದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸಂಪುಟಕ್ಕೆ ಹೊಸದಾಗಿ 19 ಮಂದಿ ಸಚಿವರು ಸೇರ್ಪಡೆಯಾಗಿ ಒಂದು ಸ್ಥಾನ ಖಾಲಿ ಉಳಿದಿರುವುದರಿಂದ ಖಾಲಿ ಸ್ಥಾನಕ್ಕಾಗಿ ಆಕಾಂಕ್ಷಿಗಳಿಂದ ಲಾಬಿ ಜೋರು ಪಡೆದಿದೆ.

ಮಹಿಳೆಯರಿಗೆ ಪ್ರಾತಿನಿಧ್ಯ ನೀಡಬೇಕಿರುವುದರಿಂದ ಪ್ರಮುಖವಾಗಿ ಪರಿಷತ್‌ ಸದಸ್ಯರಾದ ಗಾಯತ್ರಿ ಶಾಂತೇಗೌಡ, ಉಮಾಶ್ರೀ, ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್‌, ನಯನಾ ಮೋಟಮ್ಮ, ಇ ಅನ್ನಪೂರ್ಣ ತುಕಾರಾಂ ಸೇರಿ ಆಕಾಂಕ್ಷಿಗಳು ತಮ್ಮ ಪ್ರಯತ್ನ ಮುಂದುವರೆಸಿದ್ದಾರೆ.

ಮತ್ತೊಂದೆಡೆ ಗಾಯತ್ರಿ ಶಾಂತೇಗೌಡ ಅವರಿಗೆ ನೀಡಿದ್ದ ಸ್ಥಾನವನ್ನು ನನಗೆ ಸಚಿವ ಸ್ಥಾನ ಕೊಡಿಸಲು ತಡೆ ಹಿಡಿಯಲಾಗಿದೆ. ಹೀಗಾಗಿ ನನಗೆ ಸಿಗುವ ವಿಶ್ವಾಸವಿದೆ ಎಂದು ಬಸವರಾಜ ಶಿವಣ್ಣನವರ್ ವಿಶ್ವಾಶ ವ್ಯಕ್ತಪಡಿಸಿದ್ದು, ಪ್ರಯತ್ನ ಮುಂದುವರೆಸಿದ್ದಾರೆ.

ಮತ್ತೊಂದೆಡೆ ಕುರುಬ ಸಮುದಾಯದ ಕೋಟಾ ಆಗಿರುವುದರಿಂದ ರಾಘವೇಂದ್ರ ಹಿಟ್ನಾಳ್‌ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿ ಮಾಡಿ ಅವಕಾಶಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ಹೈಕಮಾಂಡ್ ಪಟ್ಟಿಯಲ್ಲಿ ಎಂಎಲ್‌ಸಿ ಗಾಯತ್ರಿ ಶಾಂತೇಗೌಡ ಸೇರಿ 20 ಮಂದಿ ಹೆಸರುಗಳಿದ್ದರೂ ಕೊನೇ ಕ್ಷಣದಲ್ಲಿ ಗಾಯತ್ರಿ ಶಾಂತೇಗೌಡ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಅವಕಾಶ ಸಿಗಲಿಲ್ಲ. ಇದೀಗ ಉಳಿದಿರುವ ಒಂದು ಸ್ಥಾನಕ್ಕಾಗಿ ಅವರು ಗಾಯತ್ರಿ ಮತ್ತೆ ಪ್ರಯತ್ನ ಆರಂಭಿಸಿದ್ದಾರೆ. ಮಂಗಳವಾರ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಕೊಠಡಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಬೆನ್ನಲ್ಲೇ ನಯನಾ ಮೋಟಮ್ಮ, ಅನ್ನಪೂರ್ಣ ಅವರು ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿದ್ದಾರೆ.

ಸಚಿವ ಸ್ಥಾನದ ವಿಶ್ವಾಸವಿದೆ:

ಪರಿಷತ್‌ ಸದಸ್ಯೆ ಉಮಾಶ್ರೀ, ನಾನು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೆ. ಉಪಸಭಾಪತಿ ಸ್ಥಾನವನ್ನು ನೀಡಿದ್ದು ನನಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಿದ್ದೇನೆ. ಪಕ್ಷ ಅವಕಾಶ ಕೊಡುವ ವಿಶ್ವಾಸವಿದೆ ಎಂದಿದ್ದಾರೆ.