ಮಂತ್ರ ಮಾಂಗಲ್ಯ ಮೂಲಕ ಒಂದಾದ ರಮ್ಯಾ- ರಘು

KannadaprabhaNewsNetwork |  
Published : May 11, 2024, 01:34 AM IST
10 | Kannada Prabha

ಸಾರಾಂಶ

ಸಾಲ ಮಾಡಿ ಮದುವೆ ಮಾಡಿದವರು ಕೆಟ್ಟು ಹೋಗುತ್ತಾರೆ. ಯಾರಿಗೋ ತೋರಿಸಲು ದೊಡ್ಡ ಚೌಲ್ಟ್ರಿಯಲ್ಲಿ ಮದುವೆ ಮಾಡಿ ಮೈ ಸುಟ್ಟುಕೊಳ್ಳುತ್ತಾರೆ ಅಂದರೆ ಸಾಲ ಮಾಡುತ್ತಾರೆ. ಇದಕ್ಕಾಗಿ ಆರೋಗ್ಯಕರ ಸಮಾಜಕ್ಕೆ ಪ್ರೇಮ ವಿವಾಹಗಳು, ಅಂತರಜಾತಿ ವಿವಾಹಗಳು ಹೆಚ್ಚಬೇಕು

ಕನ್ನಡಪ್ರಭ ವಾರ್ತೆ ಮೈಸೂರು

14 ವರ್ಷಗಳಿಂದ ಪ್ರೀತಿಸುತ್ತಿದ್ದ ಮೈಸೂರು ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿ ಡಾ.ಬಿ. ರಮ್ಯಾ‌ ಹಾಗೂ ಆರ್. ರಘು ಅವರು ಮಾನವ ಮಂಟಪದ ಆಶ್ರಯದಲ್ಲಿ ನಗರದ ಗೋಕುಲಂನ ಶ್ಯಾಗಲೆ ಹೌಸ್ ನಲ್ಲಿ ಶುಕ್ರವಾರ ಮಂತ್ರ ಮಾಂಗಲ್ಯದ ಮದುವೆಯಾದರು.

ಚಿತ್ರದುರ್ಗದ ಬೋವಿ ಜನಾಂಗದ ರಮ್ಯಾ ಹಾಗೂ ಮೈಸೂರು ತಾಲೂಕಿನ ನಾಗನಹಳ್ಳಿ ಗ್ರಾಮದ ದಲಿತರಾದ ಆರ್. ರಘು ಅವರು ಎಂಎ ಓದುವಾಗಿನಿಂದ ಪ್ರೀತಿಸುತ್ತಿದ್ದರು. ಬಸವ ಜಯಂತಿಯಂದು ಮದುವೆಯಾದ ಅವರಿಗೆ ವಿವಾಹ ಸಂಹಿತೆಯನ್ನು ಉಗ್ರ ನರಸಿಂಹೇಗೌಡ ಬೋಧಿಸಿ, ಸಾಲ ಮಾಡಿ ಮದುವೆ ಮಾಡಿದವರು ಕೆಟ್ಟು ಹೋಗುತ್ತಾರೆ. ಯಾರಿಗೋ ತೋರಿಸಲು ದೊಡ್ಡ ಚೌಲ್ಟ್ರಿಯಲ್ಲಿ ಮದುವೆ ಮಾಡಿ ಮೈ ಸುಟ್ಟುಕೊಳ್ಳುತ್ತಾರೆ ಅಂದರೆ ಸಾಲ ಮಾಡುತ್ತಾರೆ. ಇದಕ್ಕಾಗಿ ಆರೋಗ್ಯಕರ ಸಮಾಜಕ್ಕೆ ಪ್ರೇಮ ವಿವಾಹಗಳು, ಅಂತರಜಾತಿ ವಿವಾಹಗಳು ಹೆಚ್ಚಬೇಕು ಎಂದರು.

ಕುವೆಂಪು ಅವರ ಮಂತ್ರ ಮಾಂಗಲ್ಯ ಮದುವೆಯ ಪ್ರಮಾಣ ವಚನವನ್ನು ಬೋಧಿಸಿದ ಮಾನವ ಮಂಟಪದ ಸಂಚಾಲಕ ಪ್ರೊ. ಕಾಳಚನ್ನೇಗೌಡ ಮಾತನಾಡಿ, ಅಂತರಜಾತಿ ಮದುವೆಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಮೊದಲಿನಷ್ಟು ವಿರೋಧವಿಲ್ಲ. ಸುತ್ತೂರು, ಧರ್ಮಸ್ಥಳ, ಚುಂಚನಗಿರಿಯಲ್ಲಿ ಸರಳವಾಗಿ ಮದುವೆಗಳಾಗುತ್ತಿವೆ. ಸರಳವಾಗಿ ಮದುವೆಯಾದರೆ ಜನರು ಹೀಯಾಳಿಸುತ್ತಾರೆ ಎಂಬ ಯೋಚನೆ ಬಿಡಿ ಎಂದು ಸಲಹೆ ನೀಡಿದರು.

ಲೇಖಕ ಡಾ. ಮುಜಾಫರ್ ಅಸಾದಿ ಮಾತನಾಡಿ, ಇವರಿಬ್ಬರೂ ನನ್ನ ಶಿಷ್ಯರು. ನನ್ನ ಮಾರ್ಗದರ್ಶನದಲ್ಲಿ ರಮ್ಯಾ ಪಿಎಚ್.ಡಿ ಮಾಡಿದ್ದಾರೆ. ಕನ್ನಂಬಾಡಿ ಅಣೆಕಟ್ಟೆಯ ಹಾಗೆ ಗಟ್ಟಿಯಾಗಿರಿ, ಸಮೃದ್ಧಿಯಾಗಿರಿ ಎಂದು ಹಾರೈಸಿದರು.

ಕವಯಿತ್ರಿ ಡಾ. ಲತಾ ಮೈಸೂರು ಮಾತನಾಡಿ, ಮದುವೆಯಾಗುವುದರಿಂದ ದೇಹ, ಮನಸು, ಆತ್ಮ ಒಂದಾಗುತ್ತವೆ. ಇರುವೆಯಿಂದ ಹಿಡಿದು ಎಲ್ಲಾ ಪ್ರಾಣಿಗಳು ತಮಗೆ ಇಷ್ಟವಾದ ಸಂಗಾತಿಗಳೊಂದಿಗೆ ಸೇರಿ ಸಂತಾನೋತ್ಪತ್ತಿ ಮಾಡುತ್ತವೆ. ಆದರೆ, ಪ್ರೀತಿಸಿ ಮದುವೆಯಾಗುವವರ ನಡುವೆ ಜಾತಿ ಗೋಡೆ ಏಕೆ ಎಂದು ಪ್ರಶ್ನಿಸಿದರು.

ಹಿರಿಯ ಲೇಖಕ ಹೊರೆಯಾಲ ದೊರೆಸ್ವಾಮಿ ಮಾತನಾಡಿ, ಸಾಲ ಮಾಡಿ ಓಲೆ ಖರೀದಿಸಿದ ನಂತರ ಓಲೆ ಒತ್ತೆಯಿಟ್ಟು ಬಡ್ಡಿಗೆ ದುಡ್ಡು ಕೊಡುವಂತಾಗಬಾರದು ಅಂದರೆ ಸಾಲ ಮಾಡಿ ಮದುವೆ ಮಾಡುವ ಅಗತ್ಯವಿಲ್ಲ ಎಂದರು.

ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ಭೂಮಿಗೌಡ ಮಾನಾಡಿ, 36 ವರ್ಷಗಳ ಹಿಂದೆ ಸಬಿಹಾ ಅವರನ್ನು ಮದುವೆಯಾಗುವಾಗ ನಮ್ಮ ಊರವರೇ ನೆರವೇರಿಸಿದರು ಎಂದರು.

ಧನಂಜಯ ಎಲಿಯೂರು ಮಾತನಾಡಿ, ಅಸಮಾನತೆಯ ಸಮಾಜದಲ್ಲಿ ಸಮಾನತೆ ಸೃಷ್ಟಿಸಲು ಮೀಸಲಾತಿ ಇದೆ. ಅಂತರಜಾತಿ ಮದುವೆಯಾದವರು ತಮ್ಮ ಮಕ್ಕಳ ಮೀಸಲಾತಿಯನ್ನು ತಾವೇ ನಿರ್ಧರಿಸಬಹುದು ಇಲ್ಲವೆ 18 ವರ್ಷವಾದ ನಂತರ ಮಕ್ಕಳ ನಿರ್ಧಾರಕ್ಕೆ ಬಿಡಬಹುದು ಎಂದರು.

ಮದುವೆಯಾದ ಡಾ. ರಮ್ಯಾ ಅವರ ತಾಯಿ ಶಾಂತಕುಮಾರಿ, ತಂದೆ ಭುವನೇಶ್ ಹಾಗೂ ರಘು ತಾಯಿ ಭಾಗ್ಯ ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ