ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಮಂಗಳವಾರ ಬೆಳಗ್ಗೆಯೇ ಮಲ್ಲಯ್ಯನ ದೇವಸ್ಥಾನದಿಂದ ತೆರೆದ ಬಂಡಿಯಲ್ಲಿ ಸಹಸ್ರಾರು ಭಕ್ತರ ಜಯಘೋಷದೊಂದಿಗೆ ಮೂಲ ದೇವಸ್ಥಾನಕ್ಕೆ ಕರೆತರಲಾಯಿತು. ಕರ್ನಾಟಕ ಸೇರಿ ಮಹಾರಾಷ್ಟ್ರ, ಆಂಧ್ರ, ಗೋವಾ ರಾಜ್ಯಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ವಾಸ್ತವ್ಯ ಹೂಡಿ ವಿವಿಧ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು. ಭವ್ಯ ಬಂಡಿ ಮೆರವಣಿಗೆಯಲ್ಲಿ ವಿರಾಜಮಾನನಾಗಿ ಕಂಗೊಳಿಸಿದ ರಾವುತರಾಯನನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಪೂಜಿಸಿದರು. ಭಂಡಾರ ಎಸೆದು ಏಳುಕೋಟಿ, ಏಳುಕೋಟಿ ಎಂಬ ಘೋಷಣೆಗಳನ್ನು ಕೂಗಿ ಸ್ಮರಿಸಿದರು.ಜಾತ್ರೆಯಲ್ಲಿ ವಿಶೇಷವಾಗಿ ವಗ್ಗೈಯ್ಯಗಳು ಕಂಬಳಿ ಹೊತ್ತು, ಭಂಡಾರದಲ್ಲಿ ಮಿಂದು ರಾವುತರಾಯನ ಬಂಡಿ ಮುಂದೆ ಕುಣಿಯುತ್ತ ಜನರ ಗಮನ ಸೆಳೆದರು. ಪಟ್ಟಣ ಸೇರಿ ಸುತ್ತಲಿನ ಗ್ರಾಮಗಳ ಜನರು ಐದು ದಿನಗಳವರೆಗೆ ಪ್ರತಿದಿನ ಪೂಜೆ ಕಾರ್ಯ, ರಸಮಂಜರಿ, ಕುಸ್ತಿ ಪಂದ್ಯಾವಳಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಜಾತ್ರೋತ್ಸವಕ್ಕೆ ಮೆರುಗು ನೀಡಿದರು. ಜಾತ್ರೋತ್ಸವಕ್ಕೆ ತಹಸೀಲ್ದಾರ್ ನಿಂಗಣ್ಣ ಬಿರಾದಾರ, ಪ.ಪಂ ಅಧಿಕಾರಿ ಅಪ್ರೋಜ ಪಟೇಲ್, ಶ್ರೀ ಮಲ್ಲಯ್ಯ ರಾವುತರಾಯ ದೇವಸ್ಥಾನದ ಆಡಳಿತ ಮಂಡಳಿ, ಪಿಎಸ್ಐ ಸಚಿನ್ ಆಲಮೇಲಕರ ನೇತೃತ್ವದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರು.ಅದ್ಧೂರಿ ಬಂಡಿ ಉತ್ಸವ:
ವಿವಿಧತೆಯಲ್ಲಿ ಏಕತೆ ಸಾರುವ ಭಾವೈಕ್ಯತೆಯ ಭಗವಂತನ ಬಂಡಿ ಉತ್ಸವ ಸಂದರ್ಭದಲ್ಲಿ ಬಂಡಿ ಮೇಲೆ ಬಾಳೆಹಣ್ಣು, ಉತ್ತತ್ತಿ ಎಸೆದು ಭಕ್ತರು ಭಕ್ತಿ ಸಮರ್ಪಿಸಿದರು. ಜಾತ್ರೆಯಲ್ಲಿ ಆಟಿಕೆ ಸಾಮಾನು, ಅಲಂಕಾರಿಕ ವಸ್ತುಗಳ ಅಂಗಡಿಗಳು, ಮಿಠಾಯಿ, ತಿನಿಸುಗಳ ಅಂಗಡಿಗಳನ್ನು ಹಾಕಲಾಗಿತ್ತು. ಮಕ್ಕಳ ಮನರಂಜನೆಯ ಆಟಗಳು ಜಾತ್ರೆಯಲ್ಲಿ ವಿಶೇಷವಾಗಿದ್ದವು. ಮಹಾನವಮಿ ಅಮಾವಾಸ್ಯೆಯಿಂದ ಪ್ರಾರಂಭವಾದ ಜಾತ್ರೆಯ ಚಟುವಟಿಕೆಗಳು ರಾವುತರಾಯ ಮೂಲ ಸ್ಥಾನ ಸೇರುವುದರೊಂದಿಗೆ ಜಾತ್ರೆ ಸಂಪನ್ನಗೊಂಡಿತು.ಬಾಕ್ಸ್ಮಲ್ಲಯ್ಯನ ಕಾರಣಿಕ ನುಡಿ "ಮಳೆ ಸಾಥಿ ಇಸಾಕಿ ಒಂದು ಸರ್ವ ಕೊಡ್ತೀನಿ, ಧರ್ಮ ಅನ್ನುವುದು ಉಳಿಲಿಲ್ಲ, ಕರ್ಮ ಹೆಚ್ಚಾಯಿತು. ಬಿಳಿಕಾಳ ಕಟ್ಟುವಕ್ಕಳಾಯಿತು, ಕುಸಬಿ-ಅಗಸಿ ಬೆನ್ನಹತ್ತಿದವು, ಕಡ್ಲಿ ಸಾಧಾರಣ ಆಯಿತು. ಬಿಳಿಕಾಳ ಮೇಲಾತು, ರೈತಗೆ ಬಾಳ ಕಷ್ಟ ಬಂದದ, ಎಷ್ಟೇ ಕಷ್ಟ ಬಂದ್ರೂ ನನ್ನಂತೆ ನಡದರೆ ಬೈಲ ಮಾಡುತ್ತೀನಿ ಎಂದು ಭವಿಷ್ಯ ನುಡಿಯಲಾಯಿತು. "ಯಾವ ಹಸಿ ನೋಡ್ಕೋತ ಕುಂತಾ ಅವ ಹೋದ, ಕಣ್ಣು ಮುಚ್ಚಿ ಬಿತ್ತಿದವ ಖುಷಿಯಾದ. ಉತ್ತರ ದಿಕ್ಕಿಗೆ ಉರಿ ಹತ್ತೇದ, ಜನರ ಪೀಡಾ ಹೆಚ್ಚಾಯಿತು. ಮಳಿ ಮಳಿ ಅಣ್ಣತಿ ಕರಿತೇಲಿ, ಮಾನವನ ಮುಖ ನೋಡಿ ಮಳಿ ಕೊಡಂಗಿಲ್ಲ, ದನ-ಕರ ಮಾರಿ ನೋಡಿ ಮಳಿ ಕೊಡ್ತೀನಿ " ಎನ್ನಲಾಯಿತು. "ಭಕ್ತಿಲೆ ಭಂಡಾರ ಹಿಡಿದವನ ಬದುಕು ಬಂಗಾರ ಮಾಡತೇನಿ, ಕರ್ಮ ಬಿಟ್ಟು ಧರ್ಮ ಹಿಡಿದು ನಡೆದ್ರಾ ಮಳಿ ಬೆಳಿ ಕೊಡ್ತೀನಿ, ಹತ್ತ್ಯಾಗ್ ಬಂಗಾರದ ಕಡೆ ಒಗದೇನಿ " ಎಂದು ದೈವವಾಣಿ ನುಡಿಯಿತು.