ಅಜೀಜಅಹ್ಮದ ಬಳಗಾನೂರ
ಫೈನಲ್ ತಲುಪಿದ ಆರ್‌ಸಿಬಿ ತಂಡದ ಅಭಿಮಾನಿಗಳ ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ. ಜೂ. 3ರಂದು ನಡೆಯುವ ಫೈನಲ್ ಪಂದ್ಯದ ದಿನದಂದು ಆರ್‌ಸಿಬಿ ಜೆರ್ಸಿ ತೊಟ್ಟು ಕ್ರಿಕೆಟ್ ಪಂದ್ಯ ವೀಕ್ಷಿಸುವ ತವಕದಲ್ಲಿರುವ ಅಭಿಮಾನಿಗಳು ಜೆರ್ಸಿ ಖರೀದಿಗೆ ಮುಂದಾಗುತ್ತಿದ್ದಾರೆ.
10 ಲಕ್ಷಕ್ಕೂ ಅಧಿಕ ಜೆರ್ಸಿ: ಗುರುವಾರ ನಡೆದ ಕ್ವಾಲಿಫೈಯರ್-1ರಲ್ಲಿ ಆರ್‌ಸಿಬಿ ಗೆದ್ದು ಫೈನಲ್‌ಗೆ ಪ್ರವೇಶಿಸುತ್ತಿದ್ದಂತೆ ಉತ್ತರ ಕರ್ನಾಟಕ ಭಾಗದಲ್ಲಿರುವ ಬಟ್ಟೆ ಸಗಟು ವ್ಯಾಪಾರಸ್ಥರಿಗೆ ಡೀಲರ್, ಸಣ್ಣಪುಟ್ಟ ವ್ಯಾಪಾರಸ್ಥರು ತಡರಾತ್ರಿಯಿಂದಲೇ ಕರೆ ಮಾಡಿ ಜೆರ್ಸಿಗಳ ಆರ್ಡರ್ ಕೊಡುತ್ತಿದ್ದಾರೆ. ಹುಬ್ಬಳ್ಳಿ ನಗರದಲ್ಲಿಯೇ 20ಕ್ಕೂ ಅಧಿಕ ಪ್ರಮುಖ ಬಟ್ಟೆ ಡೀಲರ್‌ಗಳಿದ್ದಾರೆ. ಇವರು ಆರ್‌ಸಿಬಿ ಸೇರಿದಂತೆ ಎಲ್ಲ ತಂಡಗಳ ಜೆರ್ಸಿಗಳು ಸೂರತ್, ಮುಂಬೈ, ಬೆಂಗಳೂರು ಸೇರಿ ಪ್ರಮುಖ ನಗರಗಳಿಂದ ಹುಬ್ಬಳ್ಳಿಗೆ ರೈಲು, ಬಸ್ ಮೂಲಕ ತರಿಸುತ್ತಾರೆ. ಈ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಈಗಾಗಲೇ 10 ಲಕ್ಷಕ್ಕೂ ಅಧಿಕ ಆರ್‌ಸಿಬಿ ಜೆರ್ಸಿಗಳನ್ನು ಸಗಟು ವ್ಯಾಪಾರಸ್ಥರು ಬುಕ್ ಮಾಡಿದ್ದಾರೆ.ಹುಬ್ಬಳ್ಳಿಯಿಂದಲೇ ಪೂರೈಕೆ: ಉತ್ತರ ಕರ್ನಾಟಕ ಭಾಗಕ್ಕೆ ವ್ಯಾಪಾರ- ವಹಿವಾಟಿನಲ್ಲಿ ಹುಬ್ಬಳ್ಳಿ ಮುಖ್ಯವಾಗಿರುವ ನಗರ, ಬಹುತೇಕ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿರುವ ಡೀಲರ್‌ಗಳಿಗೆ ಹೆಚ್ಚಾಗಿ ಇಲ್ಲಿಂದಲೇ ಮಾರಾಟ ಮಾಡಲಾಗುತ್ತದೆ. ಉತ್ತರ ಕರ್ನಾಟಕ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಬೀದರ್, ಬಳ್ಳಾರಿ, ವಿಜಯನಗರ, ಕಲಬುರಗಿ, ಯಾದಗಿರಿ, ರಾಯಚೂರು, ಗದಗ, ಧಾರವಾಡ, ಹಾವೇರಿ, ಕೊಪ್ಪಳ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಗೆ ಹುಬ್ಬಳ್ಳಿಯಿಂದಲೇ ಜೆರ್ಸಿಗಳನ್ನು ಪೂರೈಸಲಾಗುತ್ತಿದೆ.
ಲಕ್ಷಕ್ಕೂ ಅಧಿಕ ಜೆರ್ಸಿ ಮಾರಾಟ: ಕಳೆದ ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಕ್ವಾಲಿಫೈಯರ್ ಪಂದ್ಯದ ದಿನದಂದೇ ಉತ್ತರ ಕರ್ನಾಟಕ ಭಾಗದಲ್ಲಿ ಒಂದೇ ದಿನಕ್ಕೆ ಲಕ್ಷಕ್ಕೂ ಅಧಿಕ ಜೆರ್ಸಿಗಳು ಮಾರಾಟವಾಗಿವೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಹೆಚ್ಚಿನ ರೀತಿಯಲ್ಲಿ ಬಗೆಬಗೆಯ ಗುಣಮಟ್ಟದ ಆರ್‌ಸಿಬಿ ಜೆರ್ಸಿಗಳನ್ನು ಆರ್ಡರ್ ನೀಡಿದ್ದು, ಶನಿವಾರವೇ ಹುಬ್ಬಳ್ಳಿಗೆ ಜೆರ್ಸಿ ಬಂದಿದ್ದು, ಬೇಡಿಕೆ ಬಂದಿರುವ ಡೀಲರ್‌ಗಳಿಗೆ ಈಗಾಗಲೇ ಕಳಿಸಲಾಗುತ್ತಿದೆ ಎಂದು ಸಗಟು ವ್ಯಾಪಾರಸ್ಥ ಮೈನುದ್ದೀನ್ ಕನ್ನಡಪ್ರಭಕ್ಕೆ ತಿಳಿಸಿದರು.
ಈಗ ಎಲ್ಲೆಡೆಯೂ ಆರ್‌ಸಿಬಿದೇ ಕ್ರೇಜ್. ಐಪಿಎಲ್ ಆರಂಭವಾದಾಗಿನಿಂದ ನನ್ನ ಅಂಗಡಿಯೊಂದರಲ್ಲೇ 2 ಸಾವಿರಕ್ಕೂ ಅಧಿಕ ಆರ್‌ಸಿಬಿ ಜೆರ್ಸಿ ಮಾರಾಟ ಮಾಡಿದ್ದೇನೆ. ಫೈನಲ್ ತಲುಪುತ್ತಿದ್ದಂತೆ ಸಾವಿರಕ್ಕೂ ಅಧಿಕ ಜೆರ್ಸಿಗಳನ್ನು ಈಗಾಗಲೇ ಬುಕ್ ಮಾಡಿದ್ದಾರೆ ಎಂದು ಗುರುಮಾತಾ ಗಾರ್ಮೆಂಟ್ಸ್ ಮಾಲಿಕ ದತ್ತಾ ಹಬೀಬ್ ಹೇಳಿದರು.