ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಯುವ ಜನತೆ ಇಂದು ಶಿಕ್ಷಣ ಪಡೆಯುವುದು ಮಾತ್ರ ತಮ್ಮ ಕರ್ತವ್ಯ ಎಂದು ಭಾವಿಸಿದ್ದಾರೆ. ಅದರ ಜತೆಗೆ ಆಧ್ಯಾತ್ಮ ಮತ್ತು ಸಾಮಾಜಿಕ ಜವಾಬ್ದಾರಿ ಅರಿತುಕೊಳ್ಳಬೇಕು. ಇಂದಿನ ಯುವಕರು ಶಿಕ್ಷಣದೊಂದಿಗೆ ದೇಶ ಕಟ್ಟುವ ವಿಚಾರ ಮತ್ತು ತತ್ವ ಮೈಗೂಡಿಸಿಕೊಂಡಾಗ ಮಾತ್ರ ಒಬ್ಬ ವ್ಯಕ್ತಿ ಪರಿಪೂರ್ಣನಾಗುತ್ತಾನೆ ಎಂದು ಚಟ್ಟರಕಿಯ ಶಂಕ್ರಯ್ಯ ಹಿರೇಮಠ ಶಾಸ್ತ್ರಿಗಳು ತಿಳಿಸಿದರು.ಬುಧವಾರ ರಾತ್ರಿ ಬನಹಟ್ಟಿ ಹಿರೇಮಠದಲ್ಲಿ ಜರುಗಿದ ಲಿಂ.ಶ್ರೀ ಶಾಂತವೀರ ಶಿವಾಚಾರ್ಯ ಸ್ವಾಮಿಗಳ 33ನೇ ಚಿರಲಿಂಗಾಂಗ ಸಾಮಾರಸ್ಯ ದಿನೋತ್ಸವ ಹಾಗೂ ಆಧ್ಯಾತ್ಮಿಕ ಪ್ರವಚನ, ಬೆಳಕು ಚಿಂತನ ಧಾರ್ಮಿಕ ಕಾರ್ಯಕ್ರಮಗಳ ಪ್ರವಚನ ಸಮಾರೊಪ ಸಮಾರಂಭದಲ್ಲಿ ಪ್ರವಚನ ನೀಡಿ ಅವರು ಮಾತನಾಡಿದರು.
ನಮ್ಮ ಹಿರಿಯರು ನಡೆದು ನುಡಿಯುತ್ತಿದ್ದರು. ಇವತ್ತಿನ ಜನಾಂಗವನ್ನು ಸಮಾಜ ಸಾಗುತ್ತಿರುವ ದಾರಿಯನ್ನು ಗಮನಿಸಿ. ಇಂದಿನವರ ಆಚರಣೆ ಶೂನ್ಯವಾಗಿದೆ. ಅವರ ನಡೆ ಹೇಗಿದೆಯೆಂದರೆ ಗಾಳಿ ಬಂದೆಡೆ ಕೊಡ ಹಿಡಿಯುತ್ತಾರೆ. ಸಮಯಕ್ಕೆ ತಕ್ಕಂತೆ ಬಣ್ಣದ ಮಾತುಗಳನ್ನು ಆಡುವವರೇ ಹೆಚ್ಚಿದ್ದಾರೆ. ಕೆರೆಯಿಂದ ಬಾಟಲಿಗೆ ಬಂದ ಕೂಡಲೇ ಅರಿವನ್ನು ಮರೆತಿದ್ದಾರೆ. ಕುರುಡು ಕಾಂಚಾಣ, ಅಧಿಕಾರದ ಮದವನ್ನು ತಲೆಗೇರಿಸಿಕೊಂಡು ಅಲ್ಪನಾಗಿದ್ದಾನೆ. ಅತೃಪ್ತತೆಯಲ್ಲೆ ಜೀವನವನ್ನು ಸವೆಸುತ್ತಿದ್ದಾನೆ. ಆದ್ದರಿಂದ ಇಂತಹ ಪ್ರವಚನ ಪುರಾಣಗಳಲ್ಲಿ ಭಾಗಿಯಾಗಿ ಅಂತರಂಗವನ್ನು ಶುದ್ಧಿಗೊಳಿಸಿಕೊಳ್ಳಬೇಕು ಎಂದರು.ಸಮಾರಂಭದ ಸಮ್ಮುಖ ವಹಿಸಿದ್ದ ಕೊಣ್ಣೂರ ಹೊರಗಿನಮಠದ ಡಾ. ವಿಶ್ವಪ್ರಭು ಶಿವಾಚಾರ್ಯರು ಮಾತನಾಡಿ, ಗುರು ಜ್ಞಾನಿಯಾದರೆ ಶಿಷ್ಯರು ಸುಜ್ಞಾನಿಯಾಗಬೇಕು. ಗುರು ಮರವಾದರೆ ಶಿಷ್ಯ ಹೆಮ್ಮರವಾಗಬೇಕು. ಹೀಗೆ ಗುರುಶಿಷ್ಯರಲ್ಲಿ ಆರೋಗ್ಯಕರ ಬೆಳವಣಿಗೆಯಾದಾಗ ಮಾತ್ರ ಆಧ್ಯಾತ್ಮದ ಅರಿವನ್ನು ಜನತೆಗೆ ಹಂಚಲು ಸಾಧ್ಯ. ಇಂದು ಮನುಷ್ಯ ಸಾರ್ಥಕತೆ ಅರಿವಿಲ್ಲದೇ ಬದುಕುತ್ತಿದ್ದಾನೆ. ಸರ್ಕಾರ ಕೊಡಮಾಡುವ ಉಚಿತ ಯೋಜನೆಗಳಿಂದ ಸೋಮಾರಿಯಾಗುತ್ತಿದ್ದಾನೆ. ಈ ಬದುಕು ಎಲ್ಲಿಗೆ ಬಂದು ನಿಂತಿದೆ ನೋಡಿ ಎಂದರು.
ಸಮಾರಂಭದಲ್ಲಿ ರಬಕವಿ ಗುರುದೇವ ಬ್ರಹ್ಮಾನಂದ ಆಶ್ರಮದ ಶ್ರೀ ಗುರುಸಿದ್ಧೇಶ್ವರ ಶ್ರೀಗಳು ಮಾತನಾಡಿ, ಕೇವಲ ದೇವಸ್ಥಾನಗಳನ್ನು ನಿರ್ಮಿಸುತ್ತಾ ಹೊದಂತೆಲ್ಲ ಬದುಕು ಸಾರ್ಥಕವಾಗುವುದಿಲ್ಲ, ನೂರು ಗುಡಿಗಳು ಒಂದು ಮಠಕ್ಕೆ ಸಮಾನ ಎಂದು ಹಿಂದಿನ ಹಿರಿಯರು ಹೇಳುತ್ತಾ ಬಂದಿದ್ದಾರೆ. ಆದ್ದರಿಂದ ಇದ್ದ ಒಂದು ಮಠವನ್ನು ತಾವೆಲ್ಲರೂ ದಾನ ಧರ್ಮದ ಮೂಲಕ ಅದನ್ನು ಉಳಿಸಿ ಬೆಳೆಸಿದರೆ ನಗರಗಳಲ್ಲಿ ಆಧ್ಯಾತ್ಮಿಕ ಕೇಂದ್ರಗಳಾದ ಮಠಮಾನ್ಯಗಳು ಉಳಿಯಲು ಸಾದ್ಯ ಎಂದರು.ಜಮಖಂಡಿ ಮುತ್ತಿನಕಂತಿಮಠದ ಶಿವಲಿಂಗ ಪಂಡಿತಾರಾಧ್ಯ ಶ್ರೀಗಳು, ಶ್ರೀ ಮಠದ ಶರಣಬಸವ ಶಿವಾಚಾರ್ಯರು ಆದ್ಯಾತ್ಮವೆಂದರೇನು, ಅದರ ಅರಿವೇಕೆ ಈ ಮನುಜನಿಗೆ ಬೇಕು ಎಂಬ ವಿಷಯದ ಮೇಲೆ ಮಾತನಾಡಿದರು.
ಸಮಾರಂಭದಲ್ಲಿ ಬನಹಟ್ಟಿ ಹಿರಿಯರಾದ ಸಿದ್ದನಗೌಡ ಪಾಟೀಲ, ಶಂಕರ ಜುಂಜಪ್ಪನವರ, ಹುನ್ನೂರಿನ ವಿಶ್ವನಾಥ ಶಾಸ್ತ್ರಿಗಳು, ಜಗದಾಳ ಶಿವಲಿಂಗಯ್ಯ ಹಿರೇಮಠ ಶಾಸ್ತ್ರಿಗಳು, ಪ್ರಕಾಶ ದೇಸಾಯಿ, ಸೋಮವಾರಪೇಠ ದೈವಮಂಡಳಿಯ ಅಧ್ಯಕೆ ಮಲ್ಲಿಕಾರ್ಜುನ ತುಂಗಳ, ಮಂಗಳವಾರ ಪೇಠ ದೈವ ಮಂಡಳಿ ಅಧ್ಯಕ್ಷ ಶ್ರೀಶೈಲ ದಬಾಡಿ, ವಿಶ್ವಜ ಕಾಡದೇವರ, ಸುರೇಶ ಕೋಲಾರ,ಶ್ರೀಪಾದ ಭಾಣಕಾರ, ರಾಜಶೇಖರ ಮಾಲಾಪುರ ಸೇರಿದಂತೆ ಅನೇಕರಿದ್ದರು.