ಶಿಕ್ಷಕರ ನೇಮಕ, ಪ್ರೌಢಶಾಲಾ ಕಟ್ಟಡ ನಿರ್ಮಾಣಕ್ಕೆ ಆಗ್ರಹ

KannadaprabhaNewsNetwork |  
Published : Aug 03, 2026, 02:00 AM IST
ಹಗರಿಬೊಮ್ಮನಹಳ್ಳಿ ತಾಲೂಕಿನ ಮಾದೂರು ಗ್ರಾಮದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಡಾ. ಎಸ್. ರಾಧಾಕೃಷ್ಣನ್ ಶಿಕ್ಷಣ ಪ್ರೇಮಿಗಳ ಸಂಘ ಹಾಗೂ ಎಸ್.ಡಿ.ಎಂ.ಸಿ. ವತಿಯಿಂದ ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಬ್ಬರು ಅತಿಥಿ ಶಿಕ್ಷಕರ ನೇಮಕ ಮಾಡುವ ಜೊತೆಗೆ ಸರ್ಕಾರಿ ಪ್ರೌಢಶಾಲೆಗೆ ಕಾಯ್ದಿರಿಸಿರುವ 2.85 ಎಕರೆ ನಿವೇಶನದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಹಗರಿಬೊಮ್ಮನಹಳ್ಳಿ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಬ್ಬರು ಅತಿಥಿ ಶಿಕ್ಷಕರ ನೇಮಕ ಮಾಡುವ ಜೊತೆಗೆ ಸರ್ಕಾರಿ ಪ್ರೌಢಶಾಲೆಗೆ ಕಾಯ್ದಿರಿಸಿರುವ 2.85 ಎಕರೆ ನಿವೇಶನದಲ್ಲಿ ಪ್ರೌಢಶಾಲಾ ಕಟ್ಟಡ ನಿರ್ಮಿಸುವಂತೆ ಆಗ್ರಹಿಸಿ ಮಾದೂರು ಗ್ರಾಮದ ಡಾ. ಎಸ್. ರಾಧಾಕೃಷ್ಣನ್ ಶಿಕ್ಷಣ ಪ್ರೇಮಿಗಳ ಸಂಘ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರು ಶನಿವಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಕೆ. ಮಹೇಶ್ವರ, ನಮ್ಮ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಂದ ಕಡೆಗಣನೆಗೆ ಒಳಗಾಗಿದೆ. ಮಕ್ಕಳ ಶೈಕ್ಷಣಿಕ ಉನ್ನತಿ ಅತಂತ್ರಕ್ಕೊಳಗಾಗಿದೆ. ಗ್ರಾಮದ ಶಾಲೆಯಲ್ಲಿ ಎಲ್.ಕೆ.ಜಿ.ಯಿಂದ 8ನೇ ತರಗತಿ ವರೆಗೂ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಆದರೆ, ಶಿಕ್ಷಕರ ಕೊರತೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಮಾರಕವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಶಾಲೆಗೆ ಮಂಜೂರಾದ 12 ಶಿಕ್ಷಕರ ಹುದ್ದೆಗಳಿಗೆ ಒಬ್ಬ ಅತಿಥಿ ಶಿಕ್ಷಕ ಸಹಿತ 9 ಶಿಕ್ಷಕರನ್ನು ಮಾತ್ರ ನೇಮಿಸಲಾಗಿದೆ. ಇನ್ನೂ ಮೂರು ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದಿರುವುದು ವಿದ್ಯಾರ್ಥಿಗಳ ಮತ್ತು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಇರುವ 9 ಶಿಕ್ಷಕರಲ್ಲಿ ಒಬ್ಬ ಶಿಕ್ಷಕರು ದೀರ್ಘಾವಧಿಯ ರಜೆಯಲ್ಲಿದ್ದಾರೆ. ಮುಖ್ಯ ಗುರುಗಳು ಆಡಳಿತಾತ್ಮಕ ಕರ್ತವ್ಯ ಹಾಗೂ ಬಿಸಿಯೂಟ ಕಾರ್ಯದಲ್ಲಿರುತ್ತಾರೆ. ವಿದ್ಯಾರ್ಥಿಗಳು ಪಾಠವಿಲ್ಲದೇ ಊಟ ಮಾಡಿ ಮನೆಗೆ ತೆರಳುವಂತಾಗಿದೆ ಎಂದರು.

ಎಸ್.ಡಿ.ಎಂ.ಸಿ. ಅಧ್ಯಕ್ಷ ರವಿಕುಮಾರ್ ಮಾತನಾಡಿ, ಗ್ರಾಮದಲ್ಲಿ ಕಳೆದ ಆರು ವರ್ಷದ ಹಿಂದೆ ಆರಂಭವಾಗಿರುವ ಸರ್ಕಾರಿ ಪ್ರೌಢಶಾಲೆಗೆ 120 ಮಕ್ಕಳು ದಾಖಲಾಗಿದ್ದರೂ ಸ್ವಂತ ಕಟ್ಟಡವಿಲ್ಲದೇ ಪ್ರಾಥಮಿಕ ಶಾಲಾ ಕಟ್ಟಡದಲ್ಲಿಯೇ ಪಾಠ ನಡೆಸಲಾಗುತ್ತಿದೆ. ಪರಿಣಾಮವಾಗಿ ಪ್ರಾಥಮಿಕ ಶಾಲಾ ಮಕ್ಕಳು ಸಹಿತ ಸ್ಥಳ ಬಿಕ್ಕಟ್ಟು ಎದುರಿಸುತ್ತಿದ್ದಾರೆ ಎಂದು ದೂರಿದರು.

ಕೂಡಲೇ ಶಾಲೆಗೆ ಇಬ್ಬರು ಪೂರ್ಣ ಪ್ರಮಾಣದ ಶಿಕ್ಷಕರನ್ನು ನೇಮಿಸುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಕ್ರಮ ಜರುಗಿಸಬೇಕು. ಪ್ರೌಢಶಾಲಾ ಕಟ್ಟಡಕ್ಕೆ ಅಗತ್ಯ ನಿವೇಶನವಿದ್ದರೂ ಅನುದಾನದ ಕೊರತೆ ಗಂಭೀರವಾಗಿದ್ದು, ಶಾಸಕರು ಅಗತ್ಯ ಅನುದಾನ ಒದಗಿಸಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.

ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಎ. ಗಂಗಾಧರ, ಸಂಘದ ಉಪಾಧ್ಯಕ್ಷ ಪಿ.ನಿಂಗಪ್ಪ, ಸದಸ್ಯರಾದ ಎಸ್.ಡಿ. ಪ್ರಕಾಶ್, ಪೂಜಾರ್ ಮಲ್ಲೋಜಿ, ಹೊಟ್ಟಿ ಹನಮವ್ವರ ನಾಗರಾಜ್, ಉಪ್ಪಾರ ಪ್ರಭಾಕರ್, ತಳವಾರ್ ರಾಜೇಶ್, ಈಡಿಗರ ಬಸವರಾಜ್, ಕಲ್ಮನಿ ಶರಣಪ್ಪ, ಈಡಿಗರ ಮಲ್ಲೇಶ್, ಬಾರೀಕರ ನಿಂಗಪ್ಪ ಹಾಗೂ ಮತ್ತಿತರರು ಈ ಸಂದರ್ಭದಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ಪೈಪೋಟಿ, 22 ಆಕಾಂಕ್ಷಿಗಳಿಂದ ಅರ್ಜಿ
ಮಾನವ ಹಕ್ಕುಗಳಿಂದ ಯಾರೂ ವಂಚಿತರಾಗದಿರಲಿ