ಕೆಂಪುಕಲ್ಲು ದರ ಇನ್ನಷ್ಟು ಇಳಿಕೆ: ಜಿಲ್ಲಾಧಿಕಾರಿ ದರ್ಶನ್‌

KannadaprabhaNewsNetwork |  
Published : Dec 06, 2025, 03:15 AM IST
32 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಕೆಂಪುಕಲ್ಲು 65 ರು.ನಿಂದ ಪ್ರಸ್ತುತ 45 ರು.ಗೆ ಇಳಿದಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಇಳಿಕೆಯಾಗಲಿದ್ದು, 40 ರು.ಗಿಂತಲೂ ಕಡಿಮೆ ದರ ಇಳಿಸುವ ಉದ್ದೇಶ ಇದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.

ಮಂಗಳೂರು: ಜಿಲ್ಲೆಯಲ್ಲಿ ಕೆಂಪುಕಲ್ಲು 65 ರು.ನಿಂದ ಪ್ರಸ್ತುತ 45 ರು.ಗೆ ಇಳಿದಿದೆ. ಮುಂದಿನ ದಿನಗಳಲ್ಲಿ ದರ ಇನ್ನಷ್ಟು ಇಳಿಕೆಯಾಗಲಿದ್ದು, 40 ರು.ಗಿಂತಲೂ ಕಡಿಮೆ ದರ ಇಳಿಸುವ ಉದ್ದೇಶ ಇದೆ ಎಂದು ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೆ 30-35 ರು.ಗೆ ದೊರೆಯುತ್ತಿದ್ದ ಕೆಂಪುಕಲ್ಲು ಬಳಿಕ 65 ರು.ಗೆ ಏರಿಕೆಯಾಗಿತ್ತು. ಈ ಸಮಸ್ಯೆ ಬಗೆಹರಿಸಿ, ಕೆಂಪು ಕಲ್ಲು ತೆಗೆಯಲು ಇದುವರೆಗೆ 59 ಪರ್ಮಿಟ್‌ಗಳನ್ನು ನೀಡಲಾಗಿದೆ. ಇನ್ನೂ 12 ಅರ್ಜಿಗಳು ಬಾಕಿ ಉಳಿದಿದ್ದು, ಶೀಘ್ರ ವಿಲೇವಾರಿ ಮಾಡಲಾಗುವುದು ಎಂದರು.

ಅರ್ಜಿಗಳ ಸಂಖ್ಯೆ ಇಳಿಕೆ: ಕೆಂಪುಕಲ್ಲು ತೆಗೆಯಲು ಅರ್ಜಿ ಆಹ್ವಾನ ಮಾಡಿದ್ದರೂ ಇದುವರೆಗೆ ಅರ್ಜಿಗಳ ಸಂಖ್ಯೆ ಕೇವಲ 60ರ ಆಸುಪಾಸಿನಲ್ಲೇ ಇದೆ. ಇನ್ನಷ್ಟು ಜನ ಅರ್ಜಿ ಹಾಕಿದರೆ ಪರ್ಮಿಟ್‌ ನೀಡಲು ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.42 ಮರಳು ಬ್ಲಾಕ್‌ ಗುರುತು:

ಜಿಲ್ಲೆಯಲ್ಲಿ ಈಗಾಗಲೇ 19 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ನಡೆಯುತ್ತಿದೆ. ಇನ್ನೂ 42 ಮರಳು ಬ್ಲಾಕ್‌ಗಳನ್ನು ಗುರುತಿಸಲಾಗಿದ್ದು, ಮರಳುಗಾರಿಕೆಗೆ ಅನುಮೋದನೆ ನೀಡುವ ವಿವಿಧ ಹಂತಗಳಲ್ಲಿದೆ. ಮಾರ್ಚ್‌ ತಿಂಗಳೊಳಗೆ ಈ ಎಲ್ಲ ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಆರಂಭವಾಗುವ ನಿರೀಕ್ಷೆಯಿದೆ. ಇದು ಕಾರ್ಯಗತವಾದರೆ ಮುಂದಿನ 5 ವರ್ಷಗಳ ಕಾಲ ಜಿಲ್ಲೆಯಲ್ಲಿ ಮರಳು ಅಭಾವ ಸಮಸ್ಯೆ ಎದುರಾಗಲ್ಲ ಎಂದು ತಿಳಿಸಿದರು.ಗುಂಡಿ ಮುಚ್ಚಲು 7 ಕೋಟಿ:

ಗುಂಡಿ ಮುಚ್ಚಲು ಈಗಾಗಲೇ ರಸ್ತೆಗಳನ್ನು ಗುರುತಿಸಲಾಗಿದ್ದು, ಮೊದಲ ಹಂತದಲ್ಲಿ 7 ಕೋಟಿ ರು.ಗಳ ತೇಪೆ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ ಎಂದರು.ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಬಾರಿ, ಅಪರ ಜಿಲ್ಲಾಧಿಕಾರಿ ರಾಜು ಕೆ. ಇದ್ದರು.ವಾರದಲ್ಲೊಂದು ದಿನ ಹಳೆ ಡಿಸಿ ಕಚೇರಿಯಲ್ಲಿ ಕರ್ತವ್ಯ

ನಗರದ ಹೊರವಲಯದ ಪಡೀಲ್‌ನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಾರ್ಯ ನಿರ್ವಹಿಸುತ್ತಿದ್ದರೂ ಜಿಲ್ಲಾಧಿಕಾರಿ ದರ್ಶನ್‌ ಎಚ್‌.ವಿ. ಅವರು ವಾರದಲ್ಲೊಂದು ದಿನ ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ ಆದ ಬಳಿಕ ಹಳೆ ಡಿಸಿ ಕಚೇರಿ ಬರಿದಾಗಿ ಒಂದೆರಡು ಕಡೆ ಗಾಜು ಒಡೆದಿದ್ದು, ‘ಬಾಟಲಿ’ಗಳು ಒಳಬರುವುದು ಕಂಡುಬಂದಿದೆ. ಅಲ್ಲದೆ ಹಳೆ ಡಿಸಿ ಕಚೇರಿ ಸುಸ್ಥಿತಿಯಲ್ಲಿರುವುದನ್ನೂ ನೋಡಿಕೊಳ್ಳಬೇಕಾಗಿತ್ತು. ಹೀಗಾಗಿ ವಾರದಲ್ಲೊಂದು ದಿನ ಅಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದಾಗಿ ಜಿಲ್ಲಾಧಿಕಾರಿ ಹೇಳಿದರು. ಹಳೆ ಡಿಸಿ ಕಚೇರಿಯಲ್ಲಿ ಎಸ್‌ಎಎಫ್‌ ಪಡೆ ಕಚೇರಿಗೆ ಸ್ಥಳಾವಕಾಶ ನೀಡಲಾಗಿದೆ. ಉಳಿದಂತೆ ರಾ.ಹೆದ್ದಾರಿ, ಕಾರ್ಮಿಕ ಇಲಾಖೆಯವರು ಸ್ಥಳಾವಕಾಶ ಕೇಳುತ್ತಿದ್ದು, ಈ ನಿಟ್ಟಿನಲ್ಲಿ ಪರಿಶೀಲನೆ ನಡೆದಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಟ್ಲ: 14ರಂದು ಸ್ವರ ಸಿಂಚನ ಸಂಗೀತ ಶಾಲೆ ದಶ ಸಂಭ್ರಮ
ಸಿ ಅಂಡ್‌ ಡಿ, ಸೆಕ್ಷನ್-‌ 4 ಸಮಸ್ಯೆಗೆ ಸರ್ಕಾರದ ಸ್ಪಂದನೆ: ಪ್ರತಿಭಟನೆ ತಾತ್ಕಾಲಿಕವಾಗಿ ಹಿಂಪಡೆದ ರೈತರು