ಕಾರವಾರ: ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಉಂಟಾದ ಬರದಿಂದ ಉಂಟಾದ ಬೆಳೆ ಹಾನಿಗೆ ಜಿಲ್ಲೆಯ ರೈತರಿಗೆ ಇದುವರೆಗೆ ಒಟ್ಟು ₹36.06 ಕೋಟಿ ಪರಿಹಾರ ಮೊತ್ತವು ಡಿಬಿಟಿ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಜಮೆ ಆಗಿದೆ.
ರೈತರ ಬ್ಯಾಂಕ್ ಖಾತೆಯಲ್ಲಿನ ಸಮಸ್ಯೆಗಳಲ್ಲಿ 4000ಕ್ಕೂ ಅಧಿಕ ಪ್ರಕರಣಗಳಲ್ಲಿ ಬ್ಯಾಂಕ್ ಗಳಲ್ಲಿ ಆಧಾರ್ ಸೀಡಿಂಗ್ ಆಗದೇ ಇರುವುದು, 1200ಕ್ಕೂ ಅಧಿಕ ಪ್ರಕರಣಗಳಲ್ಲಿ ಫ್ರುಟ್ಸ್ ತಂತ್ರಾಂಶ ಮತ್ತು ಆಧಾರ್‌ನಲ್ಲಿನ ಹೆಸರುಗಳ ಹೋಲಿಕೆಯಾಗದೇ ಇರುವುದು ಕಂಡುಬಂದಿದೆ. ಈ ಸಮಸ್ಯೆ ಸೇರಿದಂತೆ ಇತರೆ ತಾಂತ್ರಿಕ ಸಮಸ್ಯೆಗಳನ್ನೂ ಬಗೆಹರಿಸಲು ಸಾಧ್ಯವಿದ್ದು, ರೈತರು ಕೂಡಲೇ ತಮ್ಮ ತಾಲೂಕಿನಲ್ಲಿನ ಸಲಹಾ ಕೇಂದ್ರಗಳಿಗೆ ಅಗತ್ಯ ದಾಖಲೆಗಳೊಂದಿಗೆ ಭೇಟಿ ನೀಡಿ, ಇವುಗಳನ್ನು ಸರಿಪಡಿಸಿಕೊಳ್ಳಬಹುದು.ರೈತರ ಖಾತೆಗೆ ಜಮೆ: ಜಿಲ್ಲೆಯ ರೈತರಿಗೆ ಬರ ಪರಿಹಾರದ ಮೊತ್ತವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲಾಗುತ್ತಿದೆ. ಬ್ಯಾಂಕ್ ಖಾತೆಯ ಸಮಸ್ಯೆ ಸೇರಿದಂತೆ ಕೆಲವು ತಾಂತ್ರಿಕ ಸಮಸ್ಯೆಗಳಿಂದ ಕೆಲವು ರೈತರ ಖಾತೆಗಳಿಗೆ ಹಣ ಜಮೆ ಆಗಿಲ್ಲದಿರುವುದು ಗಮಕ್ಕೆ ಬಂದಿದೆ. ಜಿಲ್ಲೆಯ ಯಾವುದೇ ಅರ್ಹ ರೈತರು ಸರ್ಕಾರದ ಬರ ಪರಿಹಾರದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಎಲ್ಲ ತಾಲೂಕು ಕೇಂದ್ರಗಳಲ್ಲಿ ಸಲಹಾ ಕೇಂದ್ರಗಳನ್ನು ತೆರೆಯಲಾಗಿದೆ. ರೈತರು ತಮ್ಮ ಬ್ಯಾಂಕ್ ಪಾಸ್ ಪುಸ್ತಕ ಮತ್ತು ಆಧಾರ್ ಕಾರ್ಡ್‌ನೊಂದಿಗೆ ಈ ಕೇಂದ್ರಗಳಿಗೆ ತೆರಳಿ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲ ಅರ್ಹ ರೈತರು ಬೆಳೆ ಪರಿಹಾರದ ಮೊತ್ತವನ್ನು ತಪ್ಪದೇ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದರು.