ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ನಗರದ ಕೊಲ್ಲಾಪುರದಮ್ಮ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಈ ನೆಲದ ಪ್ರಾಣ ಧರ್ಮ, ಎಲ್ಲಿವರೆಗೆ ಧರ್ಮ ಸುರಕ್ಷಿತವಾಗಿರುತ್ತದೋ ಅಲ್ಲಿಯವರೆಗೂ ದೇಶ ಸುರಕ್ಷಿತವಾಗಿರುತ್ತದೆ ಎಂದರು.
ಈ ನೆಲದ ಧರ್ಮ ಅಳಿದೇ ಹೋಯಿತು ಎಂಬ ಸನ್ನಿವೇಶದಲ್ಲಿ ಹಲವು ಮಹನೀಯರು ಅದರ ಉಳಿವಿಗಾಗಿ ಶ್ರಮಿಸಿದ್ದಾರೆ. ಅವರೆಲ್ಲರೂ ಸದಾ ಸ್ಮರಣೀಯರು. ಧರ್ಮದ ಉಳಿವಿಗಾಗಿ ಹುಟ್ಟಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಶತಮಾನೋತ್ಸವ ಕಂಡಿರುವುದು ಸಂತಸದ ವಿಚಾರ ಎಂದರು.ಹಿಂದೂ ಎಂದು ಹೇಳಿಕೊಳ್ಳಲು ನಾಚಿಕೆ, ಭಯ ಪಡುತ್ತಿದ್ದ ಕಾಲದಲ್ಲಿ ರಾಷ್ಟ್ರದ, ಹಿಂದೂಗಳ ರಕ್ಷಣೆಗಾಗಿ ಹುಟ್ಟಿದ ಆರ್‌ಎಸ್‌ಎಸ್ ಇಂದು ವಿಶ್ವದ ಬೃಹತ್ ಸಂಘಟನೆಯಾಗಿದ್ದು, ಇದರ ಅಡಿಯಲ್ಲಿ ಕೋಟ್ಯಾಂತರ ಮಂದಿ ಕಾರ್ಯನಿರ್ವಹಿಸುತ್ತಾ ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.
ಇಂದು ಭಾರತದಾದ್ಯಂತ ಚಿಕ್ಕ ಚಿಕ್ಕದಾಗಿ ಹಿಂದೂ ಉತ್ಸವಗಳು ನಡೆಯುತ್ತಿದ್ದು, ಇದಕ್ಕೆ ಕಾರಣ ತ್ಯಾಗ, ಬಲಿದಾನಗಳಿಂದ ಗಳಿಸಿದ ಸ್ವಾತಂತ್ರ್ಯ. ಏನಾದರಾಗಲಿ ನಾವು, ನಮ್ಮ ಕುಟುಂಬ ಚೆನ್ನಾಗಿದ್ದರೆ ಸಾಕೆಂಬ ಮನಸ್ಥಿತಿಯಿಂದ ಹೊರಬಂದು ಧರ್ಮದ. ರಾಷ್ಟ್ರದ, ಸಂಸ್ಕೃತಿಯ, ಪರಂಪರೆಯ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು ಎಂದು ಕರೆ ನೀಡಿದರು.ಪಕ್ಕದ ರಾಷ್ಟ್ರಗಳಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಈ ಅರಾಜಕತೆಯನ್ನು ನಮ್ಮ ದೇಶದಲ್ಲೂ ನಡೆಸಲು ಶತ್ರುರಾಷ್ಟ್ರಗಳು ಹವಣಿಸುತ್ತಿವೆ. ದೇಶದ ಒಳಗೂ ಇಂತಹ ಪ್ರಯತ್ನಗಳು ಸದಾ ನಡೆಯುತ್ತಿದ್ದು, ಹಿಂದೂಗಳನ್ನು ಹಣಿಸಲು ತೆರೆಮರೆಯಲ್ಲಿ ಯತ್ನ ರಾಜ್ಯದಲ್ಲೂ ನಡೆಯುತ್ತಿವೆ. ದೇಶದ ಹೊರಗಿನ ಶತ್ರುಗಳಿಗಿಂತ ಒಳಗಿನ ಶತ್ರುಗಳು ಅಪಾಯಕಾರಿ. ಈ ಬಗ್ಗೆ ಹಿಂದೂಗಳು ಎಚ್ಚರಿಕೆ ವಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕುಡಿನೀರು ಕಟ್ಟೆಯ ವಿರಕ್ತ ಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಧರ್ಮೋ ರಕ್ಷತಿ ರಕ್ಷಿತಹಃ ಎಂಬ ಮಾತಿನಂತೆ ನಾವು ಧರ್ಮವನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ, ಸನಾತನ ಹಿಂದೂ ಧರ್ಮದ ಉಳಿವಿಗೆ ಹಿಂದೂಗಳಾದ ನಾವೆಲ್ಲಾ ಒಟ್ಟಾಗಿರಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಪ್‌ಕಾಮ್ಸ್ ಉಪಾಧ್ಯಕ್ಷ ಎಂ.ಎನ್.ರಾಜಶೇಖರ್ ವಹಿಸಿದ್ದರು.