ಕಸ್ತೂರಬಾ ರಸ್ತೆಯಲ್ಲಿ ಅನಧಿಕೃತ ಹಣ್ಣಿನ ಅಂಗಡಿಗಳ ತೆರವು

KannadaprabhaNewsNetwork |  
Published : Nov 21, 2025, 01:15 AM IST
20ಎಚ್ಎಸ್ಎನ್4 :  | Kannada Prabha

ಸಾರಾಂಶ

ಹಲವು ದಿನಗಳಿಂದ ರಸ್ತೆ ಬದಿ ಅನಧಿಕೃತ ವ್ಯಾಪಾರಗಳಿಂದ ಸಾರ್ವಜನಿಕರಿಗೆ ಸಂಚಾರ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಅಧಿಕೃತರಿಗೆ ಸಿಗುತ್ತಿದ್ದ ಹಿನ್ನೆಲೆ ಕ್ರಮ ಜರುಗಿಸಿದರು. ಬೆಳಗ್ಗೆ ಆರಂಭವಾದ ಕಾರ್ಯಾಚರಣೆಯ ವೇಳೆ ಪೌರಕಾರ್ಮಿಕರು, ಸೂಪರ್ವೈಸರ್‌ಗಳು, ಆರೋಗ್ಯ ನಿರೀಕ್ಷಕರು ಮತ್ತು ಪಾಲಿಕೆ ಸಿಬ್ಬಂದಿ ಒಂದಾಗಿ ತಂಡ ರಚಿಸಿ ಫುಟ್ಪಾತ್ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ಅಂಗಡಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಅನಧಿಕೃತ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪಾಲಿಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ಉಂಟಾಯಿತು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಹೃದಯ ಭಾಗವಾದ ಕಸ್ತೂರ ಬಾ ರಸ್ತೆಯಲ್ಲಿ ರಸ್ತೆ ಮತ್ತು ಫುಟ್ಪಾತ್‌ಗಳನ್ನು ಆಕ್ರಮಿಸಿಕೊಂಡು ಅನಧಿಕೃತವಾಗಿ ಹಣ್ಣಿನ ಅಂಗಡಿಗಳನ್ನು ಹಾಕಿಕೊಂಡಿದ್ದ ವ್ಯಾಪಾರಿಗಳ ವಿರುದ್ಧ ಗುರುವಾರ ಬೆಳಿಗ್ಗೆ ಮಹಾನಗರ ಪಾಲಿಕೆ ದೊಡ್ಡ ಮಟ್ಟದ ತೆರವು ಕಾರ್ಯಾಚರಣೆ ನಡೆಸಿತು.

ಹಲವು ದಿನಗಳಿಂದ ರಸ್ತೆ ಬದಿ ಅನಧಿಕೃತ ವ್ಯಾಪಾರಗಳಿಂದ ಸಾರ್ವಜನಿಕರಿಗೆ ಸಂಚಾರ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಅಧಿಕೃತರಿಗೆ ಸಿಗುತ್ತಿದ್ದ ಹಿನ್ನೆಲೆ ಕ್ರಮ ಜರುಗಿಸಿದರು. ಬೆಳಗ್ಗೆ ಆರಂಭವಾದ ಕಾರ್ಯಾಚರಣೆಯ ವೇಳೆ ಪೌರಕಾರ್ಮಿಕರು, ಸೂಪರ್ವೈಸರ್‌ಗಳು, ಆರೋಗ್ಯ ನಿರೀಕ್ಷಕರು ಮತ್ತು ಪಾಲಿಕೆ ಸಿಬ್ಬಂದಿ ಒಂದಾಗಿ ತಂಡ ರಚಿಸಿ ಫುಟ್ಪಾತ್ ಹಾಗೂ ರಸ್ತೆ ಬದಿಯಲ್ಲಿ ಹಾಕಿದ್ದ ಅಂಗಡಿಗಳನ್ನು ತೆರವುಗೊಳಿಸಿದರು. ಈ ಸಂದರ್ಭದಲ್ಲಿ ಅನಧಿಕೃತ ವ್ಯಾಪಾರಿಗಳು ಆಕ್ಷೇಪ ವ್ಯಕ್ತಪಡಿಸಿ ಪಾಲಿಕೆ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ ಘಟನೆ ಉಂಟಾಯಿತು. ಕೆಲವು ವ್ಯಾಪಾರಿಗಳು ತಮ್ಮ ಜೀವನೋಪಾಯ ಕಳೆದುಕೊಳ್ಳುತ್ತಿದ್ದೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದರೆ, ಸಾರ್ವಜನಿಕರು ಸಂಚಾರಕ್ಕೆ ಮಾರ್ಗತಡೆ ಉಂಟಾಗುತ್ತಿತ್ತು ಎಂದು ಪಾಲಿಕೆಯ ಕ್ರಮವನ್ನು ಕೆಲವರು ಸ್ವಾಗತಿಸಿದರು.

ಮಹಾನಗರ ಪಾಲಿಕೆಯ ಪೌರಾಯುಕ್ತ ಕೃಷ್ಣಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು. ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಸ್ತೂರ ಬಾ ರಸ್ತೆಯ ಪುಟ್ಪಾತ್ ಮತ್ತು ಸಾರ್ವಜನಿಕ ಜಾಗವನ್ನು ಅನಧಿಕೃತವಾಗಿ ಹಣ್ಣಿನ ವ್ಯಾಪಾರಿಗಳು ಆಕ್ರಮಿಸಿಕೊಂಡಿದ್ದರು. ಇದು ಕೇವಲ ಸಂಚಾರಕ್ಕೆ ತೊಂದರೆಯಲ್ಲ, ಅಸ್ವಚ್ಛತೆಗೆ ಕಾರಣವಾಗುತ್ತಿತ್ತು. ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಆದೇಶದಂತೆ ಸಾರ್ವಜನಿಕ ಜಾಗದಲ್ಲಿ ವ್ಯಾಪಾರ ಮಾಡುವುದು ನಿಷೇಧ. ನಿಗದಿಪಡಿಸಿದ ಸ್ಥಳಗಳಲ್ಲಿ ಮಾತ್ರ ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.ರಸ್ತೆ ಬದಿ ಹಾಗೂ ಫುಟ್ಪಾತ್‌ನಲ್ಲಿ ಮಳಿಗೆ ಹಾಕಿ ವ್ಯಾಪಾರ ಮಾಡುವುದನ್ನು ಮುಂದುವರಿಸಿದರೆ ಪ್ರಕರಣ ದಾಖಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಫುಟ್ಪಾತ್ ಜಾಗವು ಸಾರ್ವಜನಿಕರ ಮುಕ್ತ ಸಂಚಾರಕ್ಕಾಗಿ ಇರುವುದು. ಅದನ್ನು ಹಣ್ಣಿನ ಅಂಗಡಿಗಳಾಗಿ ಬಳಸುವಂತಿಲ್ಲ. ವ್ಯಾಪಾರಿಗಳಿಗೆ ಬದಲಿಯಾಗಿ ಸರಿಯಾದ ಸ್ಥಳಾವಕಾಶ ಒದಗಿಸಲು ಪಾಲಿಕೆ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ತೆರವು ಕಾರ್ಯಾಚರಣೆ ನಂತರವೂ ಮತ್ತೆ ಅನಧಿಕೃತ ವ್ಯಾಪಾರ ಆರಂಭಿಸಿದರೆ ತೀವ್ರ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪಾಲಿಕೆಯಿಂದ ಸ್ಪಷ್ಟ ಎಚ್ಚರಿಕೆ ನೀಡಿದರು. ಈ ಕ್ರಮದಿಂದ ರಸ್ತೆಯ ಎರಡೂ ಬದಿಗಳ ಸಂಚಾರ ಸುಗಮವಾಗುವ ನಿರೀಕ್ಷೆ ವ್ಯಕ್ತವಾಗಿದೆ.

ಶಾಲೆ, ನರ್ಸಿಂಗ್‌ ಹೋಮ್‌ಗಳಿಂದಲೂ ಅತಿಕ್ರಮ:

ಅಕ್ರಮ ಅತಿಕ್ರಮ ಯಾರು ಮಾಡಿದರೂ ಅದು ತಪ್ಪೆ. ದಿನನಿತ್ಯದ ಹೊಟ್ಟೆಪಾಡಿಗಾಗಿ ಬಿಡಿಗಾಸು ಸಂಪಾದನೆಗಾಗಿ ರಸ್ತೆಬದಿ ಹಣ್ಣಿನ ಅಂಗಡಿ ಹಾಕಿಕೊಂಡಿದ್ದೂ ಕೂಡ ತಪ್ಪೆ. ಹಾಗೆಯೇ ರಸ್ತೆ ಹಾಗೂ ಕನ್ಸರ್ವೆನ್ಸಿ (ಓಣಿ)ಗಳನ್ನು ತಮ್ಮ ಸ್ವಂತ ಆಸ್ತಿ ಎಂಬಂತೆ ದುರ್ಬಳಕೆ ಮಾಡುತ್ತಿರುವ ಕೆಲ ಶಾಲಾ ಕಾಲೇಜುಗಳು ಹಾಗೂ ನರ್ಸಿಂಗ್‌ ಹೋಮ್‌ಗಳು ಮಾಡುತ್ತಿರುವುದು ಕೂಡ ತಪ್ಪೇ.

ನಗರದ ಶಂಕರಮಠ ರಸ್ತೆ ಹಾಗೂ ಸಂಪಿಗೆ ರಸ್ತೆ ರಸ್ತೆಯಲ್ಲಿ ಇರುವ ಬಹುತೇಕ ನರ್ಸಿಂಗ್‌ ಹೋಮ್‌ ನವರು ರಸ್ತೆಯನ್ನೇ ಪಾರ್ಕಿಂಗ್‌ ಮಾಡಿಕೊಂಡಿದ್ದಾರೆ. ನಿಯಮಾನುಸಾರ ತಮ್ಮ ನರ್ಸಿಂಗ್‌ ಹೋಮಿನ ನೆಲಮಾಳಿಗೆಯನ್ನು ತಮ್ಮ ಆಸ್ಪತ್ರೆಗೆ ಬರುವ ರೋಗಿಗಳು ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಬೇಕು. ಆದರೆ, ನೆಲಮಾಳಿಗೆಯನ್ನು ಲ್ಯಾಬ್‌, ಮೆಡಿಕಲ್‌ ಹಾಗೂ ಇನ್ನಿತರೆ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವ ಎಲ್ಲಾ ನರ್ಸಿಂಗ್‌ ಹೋಮ್‌ಗಳು ಕೂಡ ತಮ್ಮ ಆಸ್ಪತ್ರೆ ಮುಂದಿನ ರಸ್ತೆಯನ್ನು ತಮ್ಮ ಸ್ವಂತ ಆಸ್ತಿ ಎನ್ನುವಂತೆ ಬಳಸಿಕೊಳ್ಳುತ್ತಿವೆ. ಪಾದಚಾರಿ ಮಾರ್ಗವನ್ನೇ ಬ್ಯಾರಿಕೇಡ್‌ಗಳನ್ನು ಇಟ್ಟು ವೈದ್ಯರ ಕಾರುಗಳ ನಿಲುಗಡೆಗೆ ಸ್ಥಳ ಮೀಸಲು ಮಾಡಿರುತ್ತಾರೆ. ಸಾರ್ವಜನಿಕರು ಅದರ ಮುಂದೆ ಬಂದು ನಿಂತರೂ ಕೂಡ ಅಲ್ಲಿರುವ ಸೆಕ್ಯೂರಿಟಿ ವಿಷಲ್‌ ಹೊಡೆದು ತೆರವು ಮಾಡಿಸುತ್ತಾರೆ.

ಇನ್ನು ಕನ್ಸರ್ವೆನ್ಸಿ (ಓಣಿ) ಗಳನ್ನು ಕೂಡ ತಮ್ಮದೇ ಆಸ್ತಿ ಎನ್ನುವಂತೆ ಬಳಸಿಕೊಳ್ಳುತ್ತಿದ್ದಾರೆ. ಸಂಪಿಗೆ ರಸ್ತೆಯಿಂದ ಶಂಕರಮಠ ರಸ್ತೆಗೆ ಸಂಪರ್ಕಿಸುವ ಈ ರಸ್ತೆಗಳನ್ನು ಆಸ್ಪತ್ರೆ ಹಾಗೂ ಶಾಲಾ ಕಾಲೇಜಿನವರು ತಮ್ಮ ವಾಹನಗಳ ನಿಲುಗಡೆಗೆ ಪಾರ್ಕಿಂಗ್‌ ಮಾಡಿಕೊಂಡಿದ್ದಾರೆ. ಕೆಲ ನರ್ಸಿಂಗ್‌ ಹೋಮಿನವರಂತೂ ಈ ರಸ್ತೆಯಲ್ಲೇ ಆಕ್ಸಿಜನ್‌ ಹಾಗೂ ಜನರೇಟರ್‌ ಕೊಠಡಿಗಳನ್ನೇ ನಿರ್ಮಿಸಿಕೊಂಡು ಇಡೀ ರಸ್ತೆಯನ್ನೇ ಮುಚ್ಚಿದ್ದಾರೆ.

ಈ ಬಗ್ಗೆ ಆ ವಾರ್ಡ್‌ನ ಕೌನ್ಸಿಲರ್‌ ಗಮನಕ್ಕೆ ಇರಬೇಕಿತ್ತು. ಆದರೆ, ಅವರು ಈ ಬಗ್ಗೆ ಚಕಾರ ಎತ್ತದಿರುವುದನ್ನು ನೋಡಿದರೆ ಅವರ ಬಗ್ಗೆಯೇ ಅನುಮಾನ ಮೂಡುವಂತಾಗಿದೆ. ಹಲವು ವರ್ಷಗಳ ಹಿಂದೆಯೇ ಈ ಕನ್ಸರ್ವೆನ್ಸಿ (ಓಣಿ)ಗಳನ್ನು ಬಾಡಿಗೆ ಆಧಾರದಲ್ಲಿ ನೀಡಲಾಗುವುದು ಎಂದು ಹೇಳಿದ್ದ ನಗರಸಭೆ ಕೂಡ ನಗರಸಭೆಯಿಂದ ಮಹಾನಗರಪಾಲಿಕೆಯಾಗಿ ಮೇಲ್ದರ್ಜೆಗೇರಿದರೂ ಯಾವುದೇ ಕ್ರಮವನ್ನೂ ಕೈಗೊಂಡಿಲ್ಲ.

PREV

Recommended Stories

ಸೈಬರ್‌ ವಂಚಕರಿಗೆ ಹಣ ನೀಡಲುಸ್ನೇಹಿತನ ಮನೆಯಲ್ಲಿ ಚಿನ್ನ ಕದ್ದ..!
ಮತ್ತೆ ಟೋಯಿಂಗ್‌ ಆರಂಭಿಸಲು ಜಿಬಿಎ ನಿರ್ಧಾರ