ಖರ್ಗೆ ಬೇಷರತ್ ಕ್ಷಮೆಗೆ ರೇಣುಕಾಚಾರ್ಯ ತಾಕೀತು

KannadaprabhaNewsNetwork |  
Published : Apr 23, 2026, 01:30 AM IST
22ಕೆಡಿವಿಜಿ2-ದಾವಣಗೆರೆಯಲ್ಲಿ ಬುಧವಾರ ವಿದ್ಯುತ್ ದರ ಹೆಚ್ಚಿಸಿದ ಬಗ್ಗೆ ಹೊನ್ನಾಳಿ ಕ್ಷೇತ್ರದ ವಿವಿಧ ಭಾಗಗಳ ಮನೆಗಳ ವಿದ್ಯುತ್ ಬಿಲ್ ಗಳನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ...................22ಕೆಡಿವಿಜಿ3-ದಾವಣಗೆರೆಯಲ್ಲಿ ಬುಧವಾರ ರಾಜ್ಯ ಸರ್ಕಾರದ ವಿರುದ್ಧ ಮಹಿಳೆಯರು ಅಸಮಾಧಾನ ವ್ಯಕ್ತಪಡಿಸುವ ವೀಡಿಯೋವನ್ನು ಸುದ್ದಿಗೋಷ್ಟಿಯಲ್ಲಿ ಪ್ರದರ್ಶಿಸಿದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. ..................22ಕೆಡಿವಿಜಿ4-ದಾವಣಗೆರೆಯಲ್ಲಿ ಬುಧವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ದೇಶದಲ್ಲಿ ಭಯೋತ್ಪಾದನೆ, ಭಯೋತ್ಪಾದಕರನ್ನು ಮಟ್ಟ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಭಯೋತ್ಪಾದಕನೆಂದ, ಕೆಲ ದಿನಗಳ ಹಿಂದೆ ಸಂಘ ಪರಿವಾರದವರನ್ನು ವಿಷ ಸರ್ಪಕ್ಕೆ ಹೋಲಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆ ಹಿಂಪಡೆದು, ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ದೇಶದಲ್ಲಿ ಭಯೋತ್ಪಾದನೆ, ಭಯೋತ್ಪಾದಕರನ್ನು ಮಟ್ಟ ಹಾಕುತ್ತಿರುವ ಪ್ರಧಾನಿ ನರೇಂದ್ರ ಮೋದಿಗೆ ಭಯೋತ್ಪಾದಕನೆಂದ, ಕೆಲ ದಿನಗಳ ಹಿಂದೆ ಸಂಘ ಪರಿವಾರದವರನ್ನು ವಿಷ ಸರ್ಪಕ್ಕೆ ಹೋಲಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಮ್ಮ ಹೇಳಿಕೆ ಹಿಂಪಡೆದು, ಬೇಷರತ್‌ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಾಕೀತು ಮಾಡಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದಾರು ದಶಕಗಳ ಹಿರಿಯ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆ ಅನುಭವಕ್ಕೆ ನಾವು ಗೌರವಿಸುತ್ತೇವೆ. ಆದರೆ, ಖರ್ಗೆ ಅನಗತ್ಯವಾಗಿ ವಿವಾದಗಳನ್ನು ಮೈಮೇಲೆಳೆದುಕೊಳ್ಳುವ ಕೆಲಸ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಗೆ ಭಯೋತ್ಪಾದಕರಿಗೆ ಹೋಲಿಸಿರುವುದು ಖರ್ಗೆಗೆ ಶೋಭೆ ತರದು ಎಂದರು.

ಕಾಂಗ್ರೆಸ್ಸಿನ ಅನೇಕ ನಾಯಕರು ನರೇಂದ್ರ ಮೋದಿ, ಅಮಿತ್ ಶಾ, ಬಿಜೆಪಿ, ಸಂಘ ಪರಿವಾರದ ಬಗ್ಗೆ ಟೀಕಿಸುವುದನ್ನು ಪ್ರವೃತ್ತಿ ಮಾಡಿಕೊಂಡಿದ್ದಾರೆ. ಸಚಿವರಾದ ಸಂತೋಷ ಲಾಡ್‌, ಪ್ರಿಯಾಂಕ ಖರ್ಗೆ ಸಹ ತಮ್ಮ ಇಲಾಖೆಗಳಿಗೆ ನ್ಯಾಯ ಕೊಡಿಸುವ ಬದಲು, ಬಿಜೆಪಿ ರಾಷ್ಟ್ರೀಯ ನಾಯಕರನ್ನು ಟೀಕಿಸಿ, ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿಗೆ ಖುಷಿಪಡಿಸುವುದಕ್ಕೆ ಸೀಮಿತವಾಗಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಆಕ್ಷೇಪಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 3 ವರ್ಷವಾಗಿದ್ದು, ಏನು ಸಾಧನೆ ಮಾಡಿದೆ? ನಿಮ್ಮ ಸರ್ಕಾರದ ಸಾಧನೆ ಬಗ್ಗೆ ಮಾತನಾಡಿ. ನೀವು ಕೊಟ್ಟ ಯಾವುದೇ ಭರವೆ ಈಡೇರಿಲ್ಲ. ಅಭಿವೃದ್ಧಿ ಕಾರ್ಯಗಳು ಆಗುತ್ತಿಲ್ಲ. ರಾಜ್ಯದ ಜನರ ಕಿವಿಗೆ ಹೂವು, ಕಣ್ಣಿಗೆ ಮಣ್ಣೆರೆಚುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ದೂರಿದರು.

ಕಾಂಗ್ರೆಸ್ ಸರ್ಕಾರವು ದಿಕ್ಕುದೆಸೆ ಇಲ್ಲದೇ ರಾಜ್ಯವನ್ನು ದಿವಾಳಿ ಮಾಡುತ್ತಿದೆ. ಅಭಿವೃದ್ಧಿಗೆ ಹಣ ಹೊಂದಿಸಲಾಗದ ಸ್ಥಿತಿ ಇದೆ. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಭಣಿಸುತ್ತಿದ್ದು, ಸರ್ಕಾರ ಅದನ್ನು ಪರಿಹರಿಸುವಲ್ಲಿ ವಿಫಲವಾಗಿದೆ. ಹೊನ್ನಾಳಿ ಕ್ಷೇತ್ರದಲ್ಲಿ ಎಷ್ಟು ರಸ್ತೆ, ಶಾಲಾ-ಕಾಲೇಜು ಕಟ್ಟಡ ನಿರ್ಮಿಸಿದ್ದೀರಿ? ಜನವಿರೋಧಿಯಾದ ಕಾಂಗ್ರೆಸ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವುದಿಲ್ಲವೆಂಬ ಸತ್ಯ ಅರಿತ ಅಧಿಕಾರಿಗಳು, ಐಎಎಸ್‌ ಅಧಿಕಾರಿಗಳೂ ಸೊಪ್ಪು ಹಾಕುತ್ತಿಲ್ಲ. ಆಂತರಿಕ ಕಚ್ಚಾಟದಿಂದ ನಲುಗುತ್ತಿರುವ ಕಾಂಗ್ರೆಸ್ ಸರ್ಕಾರ ಇನ್ನು ಒಂದು ವರ್ಷ ಅಧಿಕಾರದಲ್ಲಿದ್ದರೇ ಅದೇ ಹೆಚ್ಚು ಎಂದು ರೇಣುಕಾಚಾರ್ಯ ಭವಿಷ್ಯ ನುಡಿದರು.

ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಮಾಜಿ ಮೇಯರ್ ಬಿ.ಜಿ.ಅಜಯಕುಮಾರ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಧನಂಜಯ ಕಡ್ಲೇಬಾಳು, ರಾಜು ವೀರಣ್ಣ, ಪ್ರವೀಣ ಜಾಧವ್, ಪಂಜು ಪೈಲ್ವಾನ್, ರವಿಗೌಡ, ಚೇತನಕುಮಾರ, ಎಂ.ಬಿ.ಬಸವರಾಜ ಕಡ್ಲೇಬಾಳು ಇತರರು ಇದ್ದರು.

ಮೀಸಲಾತಿ ಮಸೂದೆ ಸೋಲಿಸಿ ವಿಪಕ್ಷಗಳ ವಿಕೃತಿ

ಲೋಕಸಭೆ, ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ನೀಡುವ ಮಸೂದೆಯನ್ನು ಸೋಲಿಸಿದ ನಂತರ ಕಾಂಗ್ರೆಸ್ ಮತ್ತು ಇಂಡಿ ಕೂಟ ವಿಜಯೋತ್ಸವ ಆಚರಿಸುತ್ತಿರುವುದು ವಿಕೃತ ಮನಸ್ಸಿನ ಪ್ರತೀಕವಾಗಿದೆ ಎಂದು ಎಂ.ಪಿ.ರೇಣುಕಾಚಾರ್ಯ ಕಿಡಿಕಾರಿದರು.

ಮಹಿಳಾ ಮೀಸಲಾತಿ ಮಸೂದೆ ಸೋಲಿಸಿರುವುದು ಭಾರತ ಮಾತೆಗೆ ಮಾಡಿದ ಅವಮಾನವಾಗಿದೆ. ಮಹಿಳೆಯರ ಬಗ್ಗೆ

ದೊಡ್ಡದಾಗಿ ಮಾತನಾಡುವ ಸೋನಿಯಾ ಗಾಂಧಿ, ಪ್ರಿಯಾಂಕ ಗಾಂಧಿ ಮಹಿಳಾ ಮೀಸಲಾತಿ ಸೋಲಿಸಿ, ಭಾರತ ಮಾತೆಗೆ ಅವಮಾನಿಸಿದ್ದಕ್ಕೆ ಬೇಷರತ್ ಕ್ಷಮೆ ಕೇಳಲಿ ಎಂದರು.

ಡಾ.ಪ್ರಭಾ ಮಹಿಳಾ ಮೀಸಲು ಮಸೂದೆ ಬೆಂಬಲಿಸಬೇಕಿತ್ತು

ದಾವಣಗೆರೆ ಸಂಸದ ಡಾ.ಪ್ರಭಾ ಮಲ್ಲಿಕಾರ್ಜುನ ಓರ್ವ ಮಹಿಳೆಯಾಗಿ ಮಹಿಳಾ ಮೀಸಲಾತಿ ಮಸೂದೆಗೆ ಬೆಂಬಲ ನೀಡಬೇಕಾಗಿತ್ತು. ನರೇಂದ್ರ ಮೋದಿ ಪಕ್ಷಾತೀತವಾಗಿ ಮಸೂದೆಗೆ ಬೆಂಬಲಿಸುವಂತೆ ಮನವಿ ಮಾಡಿದ್ದರು. ಆದರೆ, ಎಸ್ಐಆರ್‌ಗೆ ವಿರೋಧ ಸೇರಿದಂತೆ ಪ್ರತಿಯೊಂದಕ್ಕೂ ಕಾಂಗ್ರೆಸ್ ಸೇರಿದಂತೆ ಇಂಡಿ ಕೂಟದ ವಿಪಕ್ಷಗಳು ವಿರೋಧಿಸುತ್ತಿವೆ. ದೇಶದ ಜನತೆ, ವಿಶೇಷವಾಗಿ ಮಹಿಳೆಯರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಎಂ.ಪಿ.ರೇಣುಕಾಚಾರ್ಯ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳಿಗೆ ಆಟೋಟದ ಜೊತೆ ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಕೆ.ಎಸ್.ಆನಂದ್‌
ಹಳೆಯ ನೆನಪು ಮರು ಕಳಿಸಿದ ಸ್ನೇಹ ಸಮ್ಮಿಲನ: ಕೆ.ಎಸ್.ಮನೋಹರ್