ಗದಗ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಸಂಪತ್ತನ್ನು ಸೃಷ್ಟಿಸುವ ಕಾರ್ಮಿಕರನ್ನು ಸಂಪೂರ್ಣವಾಗಿ ಗುಲಾಮರನ್ನಾಗಿಸಲು 29 ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿ 4 ಕಾರ್ಮಿಕ ಸಂಹಿತೆಗಳನ್ನಾಗಿ ತರುತ್ತಿರುವುದು ಕಾರ್ಪೋರೇಟ್ ಕಂಪನಿಗಳ ಮತ್ತು ಬಂಡವಾಳಗಾರರ ಪರವಾಗಿ ಕೆಲಸ ಮಾಡುತ್ತಿರುವುದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ಕಾರ್ಮಿಕ ಮುಖಂಡ ಮಹೇಶ ಹಿರಮೇಠ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಸಾರ್ವಜನಿಕ ಸ್ವತ್ತುಗಳಾದ ವಿದ್ಯುತ್, ದೂರಸಂಪರ್ಕ, ಕಲ್ಲಿದ್ದಲು, ಗಣಿಗಾರಿಕೆ, ರೈಲ್ವೆ, ಹೆದ್ದಾರಿಗಳು, ಬಂದರುಗಳು, ಹಡಗುಕಟ್ಟೆಗಳು, ನಗರಾಭಿವೃದ್ಧಿ, ತೈಲ ಮುಂತಾದವುಗಳನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲಾಗಿದೆ. ದೇಶದ ಸೇವಾ ವಲಯಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಕನಿಷ್ಠ ವೇತನ ಖಾತರಿ ಪಡಿಸುವ ಕಾಯ್ದೆ ಜಾರಿಗೆ ಬರಬೇಕಿದೆ. ಆದರೆ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತರುವ ಮುಖಾಂತರ ರೈತರಿಗೆ ಅನ್ಯಾಯ ಎಸಗಲಾಗುತ್ತಿದ್ದು, ಮೇಕ್ ಇನ್ ಇಂಡಿಯಾ ಹೆಸರಿನಲ್ಲಿ ಕಾರ್ಮಿಕರನ್ನು ಸಂಘಟಿತಗೊಳ್ಳದಂತೆ ಹುನ್ನಾರ ಮಾಡುತ್ತಿರುವ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ತಾಳುತ್ತಿದೆ ಎಂದು ಆಕ್ರೋಶ ಹೊರಹಾಕಿದರು. ಸಿಐಟಿಯು ಜಿಲ್ಲಾ ಮುಖಂಡ ಯಶೋಧ ಬೆಟಗೇರಿ ಮಾತನಾಡಿ, ಕಾರ್ಮಿಕ ವಿರೋಧಿಯಾಗಿ ಪ್ರಕಟಿಸಿರುವ ಕರಡು ನಿಯಮಗಳನ್ನು ಕೂಡಲೇ ವಾಪಸ್ ಪಡೆಯಬೇಕು. ಆ ಮೂಲಕ ರಾಜ್ಯದಲ್ಲಿನ ಕಾರ್ಮಿಕರ ಸಂವಿಧಾನಬದ್ಧ ಹಕ್ಕುಗಳನ್ನು ರಕ್ಷಣೆ ಮಾಡಬೇಕು ಎಂದರು. ನರೇಗಾ ಕಾಯ್ದೆಯಡಿಯಲ್ಲಿ ಖಾತರಿ ಪಡಿಸಲಾದ ಕೆಲಸ, ಕೆಲಸದ ಹಕ್ಕನ್ನು ಕಸಿದುಕೊಳ್ಳುವುದರ ಜತೆಗೆ ಗ್ರಾಮೀಣ ಶ್ರಮಜೀವಿಗಳ ಕೊಂಡುಕೊಳ್ಳುವ ಸಾಮರ್ಥ್ಯ ಕಡಿಮೆ ಮಾಡುವುದು ಮತ್ತು ಕೃಷಿ ಕಾರ್ಮಿಕರ ಮತ್ತು ಇತರೆ ಗ್ರಾಮೀಣ ಕಾರ್ಮಿಕರ ವೇತನವನ್ನು ನಿಗ್ರಹಿಸುತ್ತಿದೆ. ವಿದ್ಯುತ್ ಶಕ್ತಿಯನ್ನು ಖಾಸಗೀಕರಿಸಿ ವಿದ್ಯುತ್ ಪ್ರಸರಣ, ವಿತರಣಾ ವ್ಯವಸ್ಥೆಯ ಅನುಷ್ಠಾನ ಮತ್ತು ನಿರ್ವಹಣೆಯನ್ನು ಖಾಸಗಿ ಬಂಡವಾಳಗಾರರಿಗೆ ಕೊಡುವ ಮುಖಾಂತರ ಇದುವರೆಗೂ ವಿದ್ಯುತ್ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸಬ್ಸಿಡಿ ದರದಲ್ಲಿ ಸಿಗುತ್ತಿದ್ದ ಪ್ರಮುಖ ಸೇವೆಯಿಂದ ಸರ್ಕಾರ ತನ್ನ ಸಾಮಾಜಿಕ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುತ್ತಿದೆ ಎಂದರು.
ಈ ವೇಳೆ ಗ್ರಾಮ ಪಂಚಾಯಿತಿ ನೌಕರರ ಮುಖಂಡ ಬಸವರಾಜ ಮುಳಗುಂದಿ, ಅಂಗನವಾಡಿ ಸುಮಾ ಛಲವಾದಿ, ರುದ್ರಪ್ಪ ಕಂದಗಲ್ಲ, ಅಜಯ ಹಿರೇಮಠ, ಮಾರುತಿ ಚಿಟಗಿ, ಎಸ್ಎಫ್‌ಐ ಮುಖಂಡ ಗಣೇಶ ರಾಠೋಡ ಮಾತನಾಡಿದರು. ಮುಖಂಡರು ಕ್ರಾಂತಿಗೀತೆ ಹಾಡಿದರು. ಸುಶೀಲಾ ಛಲವಾದಿ ಮಾತನಾಡಿದರು.ಹೊರಗುತ್ತಿಗೆ ನೌಕರರ ಸಂಘದ ಪ್ರವೀಣ, ಶಹನಾಜ ಸೇರಿದಂತೆ ಬಿಸಿಯೂಟ ನೌಕರರ ಸಂಘ, ಆಶಾ ನೌಕರರ ಸಂಘ, ಕಟ್ಟಡ ಕಾರ್ಮಿಕರ, ಗ್ರಾಪಂ ನೌಕರರು, ಅಂಗನವಾಡಿ, ವಿದ್ಯಾರ್ಥಿ- ಯುವಜನ ಸಂಘಟನೆ, ಮಾಜಿ ದೇವದಾಸಿ ಮಹಿಳಾ ಸಂಘಟನೆ, ಕೆಪಿಆರ್‌ಎಸ್ ಸೇರಿದಂತೆ ಸಾಮೂಹಿಕ ಸಂಘಟನೆ ಮುಖಂಡರು ಪಾಲ್ಗೊಂಡಿದ್ದರು.