ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಸಲು ಸಾಧ್ಯವಿಲ್ಲ

KannadaprabhaNewsNetwork |  
Published : Jan 29, 2025, 01:34 AM IST
ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ಮಂಗಳವಾರ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಯಿತು. | Kannada Prabha

ಸಾರಾಂಶ

ಭದ್ರಾವತಿ: ಲೋಕಾಯುಕ್ತ ವತಿಯಿಂದ ಆಯೋಜಿಸಲಾಗುವ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಈ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕೈಗೊಂಡ ಕ್ರಮಗಳನ್ನು ತಿಳಿಸಲಾಗುವುದು. ಹೊಸದಾಗಿ ಸಲ್ಲಿಕೆಯಾದ ಎಲ್ಲಾ ಅಹವಾಲುಗಳನ್ನು ತಕ್ಷಣ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಶಿವಮೊಗ್ಗ-೧ರ ಪೊಲೀಸ್ ನಿರೀಕ್ಷಕ ಎಚ್.ಎಸ್.ಸುರೇಶ್ ಹೇಳಿದರು.

ಭದ್ರಾವತಿ: ಲೋಕಾಯುಕ್ತ ವತಿಯಿಂದ ಆಯೋಜಿಸಲಾಗುವ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಈ ಹಿಂದೆ ಸಲ್ಲಿಕೆಯಾಗಿರುವ ಅರ್ಜಿಗಳ ಕುರಿತು ಕೈಗೊಂಡ ಕ್ರಮಗಳನ್ನು ತಿಳಿಸಲಾಗುವುದು. ಹೊಸದಾಗಿ ಸಲ್ಲಿಕೆಯಾದ ಎಲ್ಲಾ ಅಹವಾಲುಗಳನ್ನು ತಕ್ಷಣ ಪರಿಶೀಲಿಸಲು ಸಾಧ್ಯವಿಲ್ಲ ಎಂದು ಲೋಕಾಯುಕ್ತ ಶಿವಮೊಗ್ಗ-೧ರ ಪೊಲೀಸ್ ನಿರೀಕ್ಷಕ ಎಚ್.ಎಸ್.ಸುರೇಶ್ ಹೇಳಿದರು.

ಮಂಗಳವಾರ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾರ್ವಜನಿಕ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.ಕೆಲವೊಂದು ಅಹವಾಲುಗಳನ್ನು ಸ್ಥಳದಲ್ಲಿಯೇ ಪರಿಹರಿಸಬಹುದು. ಆದರೆ ಎಲ್ಲಾ ಅಹವಾಲುಗಳನ್ನು ಸ್ವೀಕರಿಸಿದ ತಕ್ಷಣ ಬಗೆಹರಿಸುವುದು ಅಸಾಧ್ಯವಾಗಿದ್ದು, ಅಹವಾಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಕಾಲಾವಕಾಶ ಅಗತ್ಯವಿದೆ. ಒಟ್ಟಾರೆ ಎಲ್ಲಾ ಅಹವಾಲುಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದರು. ಈ ಹಿಂದಿನ ಸಭೆಯಲ್ಲಿ ಲೋಕಾಯುಕ್ತಕ್ಕೆ ಸಲ್ಲಿಕೆಯಾದ ಒಟ್ಟು ೧೧ ಅಹವಾಲುಗಳು ಹಾಗೂ ಕೈಗೊಂಡ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿದರು. ಹೊಸದಾಗಿ ಸಲ್ಲಿಕೆಯಾದ ಅಹವಾಲುಗಳಲ್ಲಿ ಪ್ರಮುಖವಾಗಿ ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಗೌಡ ಅವರು, ಜನ್ನಾಪುರ ಫಿಲ್ಟರ್ ಶೆಡ್ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಸಮುದಾಯ ಭವನ ನಿರ್ಮಿಸಿ, ದುರ್ಬಳಕೆ ಮಾಡಿಕೊಳ್ಳುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕಳೆದ ಸುಮಾರು ೧ ವರ್ಷದಿಂದ ನಿರಂತರವಾಗಿ ಹೋರಾಟ ನಡೆಸಿಕೊಂಡು ಬರುವ ಜೊತೆಗೆ ಅಗತ್ಯ ದಾಖಲೆಗಳೊಂದಿಗೆ ಹಲವಾರು ಬಾರಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದೂರಿದರು. ನಗರಸಭೆ ಅಧಿಕಾರಿಗಳು ಪ್ರತಿಕ್ರಿತಿಸಿ, ಈ ಸಂಬಂಧ ಈಗಾಗಲೇ ನೋಟಿಸ್ ನೀಡಲಾಗಿದೆ ಎಂದು ಉತ್ತರಿಸಿದರು.

ಈ ನಡುವೆ ಮತ್ತೊಮ್ಮೆ ಮೇಲ್ಮನವಿ ಸಲ್ಲಿಸುವಂತೆ ಶಶಿಕುಮಾರ್ ಗೌಡರವರಿಗೆ ಸೂಚಿಸಲಾಗಿದೆ. ಒಂದು ವೇಳೆ ಕಾಲ ಮಿತಿಯೊಳಗೆ ಯಾವುದೇ ಪ್ರಕ್ರಿಯೆ ನಡೆಯದಿದ್ದಲ್ಲಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ನಿರೀಕ್ಷಕ ಸುರೇಶ್ ಎಚ್ಚರಿಸಿದರು. ಕೆಆರ್‌ಎಸ್ ಪಕ್ಷದ ತಾಲೂಕು ಅಧ್ಯಕ್ಷ, ಸಾಮಾಜಿಕ ಹೋರಾಟಗಾರ ತೀರ್ಥೇಶ ಮಾತನಾಡಿ, ತಾಲೂಕಿನಲ್ಲಿ ಅಕ್ರಮ ಮರಳುಗಾರಿಕೆ ಹೆಚ್ಚಾಗಿದೆ. ಈ ಬಗ್ಗೆ ಹಲವಾರು ಬಾರಿ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.

ನಿರೀಕ್ಷಕ ಸುರೇಶ್ ಮಾತನಾಡಿ, ಮರಳುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆಗೆ ಇದೆ. ಈ ಹಿನ್ನಲೆಯಲ್ಲಿ ಯಾವುದೇ ಒತ್ತಡಗಳಿಗೆ ಮಣಿಯದೆ ಕ್ರಮ ಕೈಗೊಳ್ಳುವಂತೆ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಒಟ್ಟು ೭ ಅಹವಾಲುಗಳನ್ನು ಸಲ್ಲಿಸಲಾಯಿತು.

ತಹಸೀಲ್ದಾರ್ ಪರುಸಪ್ಪ ಕುರುಬರ, ಪೇಪರ್‌ಟೌನ್ ಠಾಣೆ ನಿರೀಕ್ಷಕಿ ನಾಗಮ್ಮ ಉಪಸ್ಥಿತರಿದ್ದರು.

ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ