ಕನ್ನಡಪ್ರಭವಾರ್ತೆ ತಿಪಟೂರು
ಸಾರ್ವಜನಿಕರ, ರೈತರ, ನಾಗರೀಕರ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ತಿಂಗಳಲ್ಲಿ ಎರಡು ದಿನ ನಗರಸಭೆ ಮತ್ತು ತಾಲೂಕು ಆಡಳಿತಸೌಧದಲ್ಲಿ ನಾನೇ ಖುದ್ದು ಜನರಿಂದ ಕುಂದುಕೊರತೆಗಳನ್ನು ಸ್ವೀಕರಿಸಲಿದ್ದೇನೆ ಎಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.ನಗರದ ನಗರಸಭೆ ಕಾರ್ಯಾಲಯದಲ್ಲಿ ಮಂಗಳವಾರ ಇ-ಆಸ್ತಿ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಗರದ ನಾಗರೀಕರು ಇ-ಆಸ್ತಿ ಮತ್ತು ಇ-ಸ್ವತ್ತನ್ನು ಮಾಡಿಸಿಕೊಳ್ಳಲು ಪರದಾಡುವಂತಾಗಿದ್ದು ಕಡಿಮೆ ಅವಧಿಯಲ್ಲಿ ಕೆಲಸ ಕಾರ್ಯಗಳು ಮುಗಿಸಿಕೊಡಬೇಕು ಮತ್ತು ಅಲೆದಾಟವನ್ನು ತಪ್ಪಿಸಬೇಕೆಂಬ ಉದ್ದೇಶದಿಂದ ನಗರಸಭೆಯಲ್ಲಿ ಪ್ರತಿ ಮಂಗಳವಾರ ಇ-ಆಸ್ತಿ ಆಂದೋಲವನ್ನು ಹಮ್ಮಿಕೊಳ್ಳಲಾಗುತ್ತಿದೆ. ಹತ್ತು ದಿನಗಳೊಳಗೆ ಇ-ಆಸ್ತಿಯನ್ನು ಮಾಡಿಸಿಕೊಡುವಂತೆ ಸೂಚಿಸಲಾಗಿದ್ದು ಒಂದು ವೇಳೆ ಕೆಲವರ ಇ-ಆಸ್ತಿ ಮಾಡುವಲ್ಲಿ ಬೇರೆ ಬೇರೆ ಸಮಸ್ಯೆಗಳಿದ್ದರೆ ಮಾಡಲು ಸಾಧ್ಯವೇ ಎಂಬುದನ್ನು ನಿರ್ಧರಿಸಿ ತಕ್ಷಣವೇ ನಿಮಗೆ ತಿಳಿಸಲಾಗುವುದು. ಪ್ರತಿ ಮಂಗಳವಾರ ನಾನೇ ಖುದ್ದು ನಗರಸಭೆಗೆ ಬರುತ್ತೇವೆ. ನಗರಕ್ಕೆ ಸಂಬಂದಪಟ್ಟ ಸಮಸ್ಯೆಗಳಿದ್ದರೂ ಪರಿಹರಿಸಲಾಗುವುದು. ಅಲ್ಲದೆ ಗ್ರಾಮೀಣ ಪ್ರದೇಶದ ಜನರ ಸಮಸ್ಯೆಗಳಿಗಾಗಿ ತಿಂಗಳ ಮೊದಲ ಶನಿವಾರ ತಾಲೂಕು ಆಡಳಿತ ಸೌಧದಲ್ಲಿ ನಾನು ಸಾರ್ವಜನಿಕರಿಗಾಗಿ ಸಮಯವನ್ನು ಮೀಸಲಿಟ್ಟಿದ್ದು ರೈತರು, ಸಾರ್ವಜನಿಕರು ಅಂದು ಕಚೇರಿಗೆ ಭೇಟಿ ಮಾಡಿ ನಿಮ್ಮ ಕುಂದುಕೊರೆತಗಳಿದ್ದರೆ ನನ್ನ ಬಳಿ ಹೇಳಿಕೊಳ್ಳಬಹುದು. ಜನರಿಂದ ಜನರಿಗಾಗಿ ಇರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮ ಜನಪ್ರತಿನಿಧಿಯಾಗಿ ಕರ್ತವ್ಯ ನಿರ್ವಹಿಸಲಿದ್ದೇನೆ ಎಂದರು. ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ಇ-ಆಸ್ತಿ ಮಾಡಿಸಿಕೊಳ್ಳುವ ಬಗ್ಗೆ ಜನರಿಂದ ಸಾಕಷ್ಟು ದೂರುಗಳು ಬರುತ್ತಿದ್ದವು. ಅದಕ್ಕಾಗಿಯೇ ನಗರಸಭೆಯಲ್ಲಿ ಪ್ರತಿ ಮಂಗಳವಾರ ಇ-ಆಸ್ತಿ ಆಂದೋಲನವನ್ನು ನಡೆಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಇ-ಆಸ್ತಿ ಮಾಡಿಸಿಕೊಡಲಾಗುವುದು. ಜನನ ಮತ್ತು ಮರಣ ಪತ್ರ ಸೇರಿದಂತೆ ನಾಗರೀಕರಿಗೆ ಬೇಕಾದ ಸೌಲಭ್ಯವನ್ನು ಸಕಾಲಕ್ಕೆ ಒದಗಿಸಿಕೊಡಲಾಗುವುದು. ಜೊತೆಗೆ ನಗರದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ನಮ್ಮ ಬಳಿ ದೂರು ನೀಡಬಹುದು ಎಂದರು.ಈ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ಖಾತೆದಾರರಿಗೆ ಇ-ಸ್ವತ್ತು ನೀಡಲಾಯಿತು. ನಗರಸಭೆ ಸದಸ್ಯ ಎಂ.ಎಸ್. ಯೋಗೀಶ್, ಮುಖಂಡ ಲೋಕ್‌ನಾಥ್ ಸಿಂಗ್ ಸೇರಿದಂತೆ ನಾಗರೀಕರು ಭಾಗವಹಿಸಿದ್ದರು.