ಕಾಮಗಾರಿ ಪೂರ್ಣಗೊಳಿಸಲು ಹಾವೇರಿಯ ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳ ಆಗ್ರಹ

KannadaprabhaNewsNetwork |  
Published : Jun 13, 2025, 03:24 AM IST
ಹಾವೇರಿಯ ಶ್ರೀಕಂಠಪ್ಪ ಬಡಾವಣೆಯ ನಿವಾಸಿಗಳು ನಗರಸಭೆ ಪೌರಾಯಕ್ತರಿಗೆ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ಅಪೂರ್ಣಗೊಂಡ ಕಾಮಗಾರಿಯಿಂದುಂಟಾದ ಸಮಸ್ಯೆಯ ಕುರಿತು ಈಗಾಗಲೇ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.

ಹಾವೇರಿ: ನಗರದ ಶ್ರೀಕಂಠಪ್ಪ ಬಡಾವಣೆಯಲ್ಲಿ ಅಪೂರ್ಣಗೊಂಡ ಚರಂಡಿ, ರಸ್ತೆ ಹಾಗೂ ಸಿಡಿ ಕಾಮಗಾರಿಯಿಂದಾಗಿ ಇಲ್ಲಿನ ನಿವಾಸಿಗಳು ತುಂಬಾ ಸಂಕಷ್ಟವನ್ನೆದುರಿಸುತ್ತಿದ್ದಾರೆ. ವಿಳಂಬ ಮಾಡದೇ ಕಾಮಗಾರಿಯನ್ನು ಪೂರ್ಣಗೊಳಿಸಿ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಒತ್ತಾಯಿಸಿ ಬಡಾವಣೆಯ ನಿವಾಸಿಗಳು ನಗರಸಭೆ ಪೌರಾಯಕ್ತರಿಗೆ ಮನವಿ ಸಲ್ಲಿಸಿದರು. ನಗರಸಭೆಯ 31ನೇ ವಾರ್ಡ್ ವ್ಯಾಪ್ತಿಯ ಶ್ರೀಕಂಠಪ್ಪ ಬಡಾವಣೆಯಲ್ಲಿ ಎರಡು ಕಾಲೇಜು ಹಾಸ್ಟೆಲ್ ಹಾಗೂ ಒಂದು ಶಾಲೆ ಇದೆ. ಇಲ್ಲಿನ ನಿವಾಸಿಗಳು ಚರಂಡಿ ಹಾಗೂ ರಸ್ತೆ ಸಮಸ್ಯೆಗಳನ್ನು ಅನುಭವಿಸುತ್ತಿದ್ದು, ಈ ಸಮಸ್ಯೆ ಪರಿಹರಿಸುವಂತೆ ಕಳೆದ ಹತ್ತಾರು ವರ್ಷಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಅದಕ್ಕಾಗಿ ಶಾಸಕರು, ನಗರಸಭೆ, ಲೋಕಾಯುಕ್ತರು, ಮಾನವ ಹಕ್ಕುಗಳ ಆಯೋಗದ ಗಮನಕ್ಕೂ ತರಲಾಗಿದೆ.ನಗರೋತ್ಥಾನ ಯೋಜನೆಯಡಿ ಕೆಲ ತಿಂಗಳುಗಳ ಹಿಂದೆ ಚರಂಡಿ ದುರಸ್ತಿ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿ ಆರಂಭವಾಗಿತ್ತು. ಇದೀಗ ಇದ್ದಕ್ಕಿದ್ದಂತೆ ಕಾಮಗಾರಿ ಅರ್ಧಂಬರ್ಧ ಆಗಿದ್ದರಿಂದ ಚರಂಡಿ ತ್ಯಾಜ್ಯದ ನೀರು ಮುಂದಕ್ಕೆ ಹೋಗದೇ ಇರುವುದರಿಂದಾಗಿ ವಿಪರೀತ ಹೊಲಸು ವಾಸನೆಯಿಂದಾಗಿ ಜನರು ಬದುಕುವುದು ಅಸಹನೀಯವಾಗಿದೆ.

ಈ ಅಪೂರ್ಣಗೊಂಡ ಕಾಮಗಾರಿಯಿಂದುಂಟಾದ ಸಮಸ್ಯೆಯ ಕುರಿತು ಈಗಾಗಲೇ ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಚರಂಡಿ ನೀರು ರಾಜಕಾಲುವೆಗೆ ಸೇರುವಂತಾಗಲು ರಾಜ್ಯ ಹೆದ್ದಾರಿ ಪಕ್ಕದ ದೊಡ್ಡ ಚರಂಡಿಯನ್ನು ದುರಸ್ತಿ ಮಾಡಿಸುವುದು ಹಾಗೂ ಅಪೂರ್ಣವಾಗಿರುವ ಕೆಲಸಗಳನ್ನು ಒಂದು ವಾರದೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಅನಿವಾರ್ಯವಾಗಿ ನಿವಾಸಿಗಳು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.

ಆಯುಕ್ತರಾದ ಗಂಗಾಧರ ಬೆಲ್ಲದ ಮನವಿ ಸ್ವೀಕರಿಸಿ, ಕೂಡಲೇ ಚರಂಡಿ ನೀರು ಸರಾಗವಾಗಿ ಹರಿದುಹೋಗುವಂತೆ ಜೆಸಿಬಿಯಿಂದ ಕೆಲಸ ಮಾಡಿಸಲಾಗುವುದು ಎಂದು ಭರವಸೆ ನೀಡಿದರು. ಅಪೂರ್ಣಗೊಂಡ ಕಾಮಗಾರಿಯನ್ನು ಪೂರ್ಣಗೊಳಿಸಲು ಹಾಗೂ ಹೊಳೆ ನೀರಿನ ಸೌಲಭ್ಯವನ್ನು ಒದಗಿಸಲು ಹಂತ- ಹಂತವಾಗಿ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭದಲ್ಲಿ ಬಸವರಾಜ ಪೂಜಾರ, ಶಂಕ್ರಣ್ಣ ಮಾಳಮ್ಮನವರ, ಲಕ್ಷ್ಮಿಪ್ರಭ ಎಸ್. ಹುಲ್ಲೂರು, ಅನಿತಾ ಬಿ. ಸೂರಣಗಿ, ಸುರೇಶ ದು. ವಡ್ಡರ, ವಿವೇಕ ಎಸ್. ಹುಲ್ಲೂರು ಇದ್ದರು.ವಿಚಾರಸಂಕಿರಣ ಇಂದು

ಹಾವೇರಿ: ಪಂ. ಪುಟರಾಜ ಗವಾಯಿಗಳ ಅಭಿಮಾನಿ ಬಳಗದ ವತಿಯಿಂದ ಜೂ. 13ರಂದು ಬೆಳಗ್ಗೆ 10.30ಕ್ಕೆ ಹಿರಿಯ ಲೇಖಕ ಸತೀಶ ಕುಲಕರ್ಣಿ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವ ಕುರಿತು ವಿಚಾರಸಂಕಿರಣ ಸ್ಥಳೀಯ ಅಶ್ವಿನಿ ನಗರದ ಜಿಲ್ಲಾ ಸರ್ಕಾರಿ ನಿವೃತ್ತರ ಭವನದಲ್ಲಿ ಆಯೋಜಿಸಲಾಗಿದೆ.

ಜುಲೈ ತಿಂಗಳಿನಲ್ಲಿ ಸಾಹಿತಿ ಸತೀಶ ಕುಲಕರ್ಣಿ ಅವರಿಗೆ 75 ವರ್ಷ ತುಂಬಲಿದ್ದು, ಅದರ ಪೂರ್ವಭಾವಿಯಾಗಿ ವಿಚಾರಸಂಕಿರಣ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಬೀದಿಕಲಾ ಬಳಗದ ಅಧ್ಯಕ್ಷ ಗದಗಯ್ಯ ಹಿರೇಮಠ ಉದ್ಘಾಟಿಸುವರು. ವಿಶೇಷ ಉಪನ್ಯಾಸವನ್ನು ನಿವೃತ್ತ ಪ್ರ‍್ರಾಚಾರ್ಯ ಪಿ.ಸಿ. ಹಿರೇಮಠ ನೀಡುವರು. ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಬಿ. ಅಣ್ಣಿಗೇರಿ ಅಧ್ಯಕ್ಷತೆ ವಹಿಸುವರು ಎಂದು ಜಿ.ಎಂ. ಓಂಕಾರಣ್ಣನವರ ಮತ್ತು ಅನಿತಾ ಹರನಗಿರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ