- ಹೊನ್ನಾಳಿ ಹಿರೇಕಲ್ಮಠದಲ್ಲಿ 4 ದಿನಗಳ ರಾಜ್ಯಮಟ್ಟದ ಕೃಷಿಮೇಳ ಹಿನ್ನೆಲೆ ಪೂರ್ವಭಾವಿ ಸಭೆ । ಕರಪತ್ರ ಬಿಡುಗಡೆ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಸದುದ್ದೇಶದ ಸಂಕಲ್ಪಗಳು ದೇವರ ಆಶೀರ್ವಾದದಿಂದ ಯಶಸ್ವಿಯಾಗಿ ಈಡೇರುತ್ತವೆ. ಜನಸೇವೆ ಲಿಂಗೈಕ್ಯ ಗುರುಗಳ ಪ್ರೇರಣೆಯಾಗಿದ್ದು, ಯಾವಾಗಲೂ ಶುಭಸೂಚಕವಾಗಿರುತ್ತದೆ. ಸಮಯ ಕಡಿಮೆ ಎಂಬ ಭಾವನೆ ಇಲ್ಲದೇ ನಾವೆಲ್ಲರೂ ಕೂಡ ದೃಢ ಸಂಕಲ್ಪದಿಂದ 4 ದಿನಗಳ ರಾಜ್ಯಮಟ್ಟದ ಕೃಷಿ ಮೇಳವನ್ನು ಹಿರೇಕಲ್ಮಠದಲ್ಲಿ ನಡೆಸಲು ಕೆಲಸ ಮಾಡೋಣ ಎಂದು ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮಿಜಿ ನುಡಿದರು.ಹೊನ್ನಾಳಿ ಹಿರೇಕಲ್ಮಠದ ಹಿಂದಿನ ಲಿಂಗೈಕ್ಯ ಗುರುಗಳಾದ ಶ್ರೀ ಮೃತ್ಯುಂಜಯ ಶಿವಾಚಾರ್ಯ ಸ್ವಾಮೀಜಿ ಅವರ 56ನೇ ಹಾಗೂ ಲಿಂ.ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಅವರ 11ನೇ ಪುಣ್ಯಸ್ಮರಣೆ ಅಂಗವಾಗಿ ಪಟ್ಟಣದ ಹಿರೇಕಲ್ಮಠದಲ್ಲಿ ಫೆ.27, 28 ರಿಂದ ಹಾಗೂ ಮಾರ್ಚ್ 1 ಮತ್ತು 2ರಂದು ಒಟ್ಟು 4 ದಿನಗಳ ರಾಜ್ಯಮಟ್ಟದ ಕೃಷಿಮೇಳ ನಡೆಸುವ ಕುರಿತು ಹಿರೇಕಲ್ಮಠದಲ್ಲಿ ಸೋಮವಾರ ನಡೆದ ಪೂರ್ವಭಾವಿ ಸಭೆ ಹಾಗೂ ಕೃಷಿಮೇಳದ ಕರಪತ್ರ ಬಿಡುಗಡೆ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಇಂದು ಸೋಮವಾರ, ಶಾಸಕ ಡಿ.ಜಿ.ಶಾಂತನಗೌಡ ನೇತೃತ್ವದಲ್ಲಿ ತಾಲೂಕುಮಟ್ಟದ ನಾಯಕರು, ಅಧಿಕಾರಿಗಳ ಪೂರ್ವಭಾವಿ ಸಭೆ ಕರೆಯಲಾಗಿದೆ. ಸೋಮವಾರ ಮಧ್ಯಾಹ್ನ ದಾವಣಗೆರೆಗೆ ತೆರಳಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಗ್ರವಾಗಿ ಚರ್ಚಿಸಲಾಗುವುದು ಎಂದು ತಿಳಿಸಿದರು.
ಬಯಲುಸೀಮೆ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ವಿಶೇಷವಾಗಿ ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಗಳು ಸೇರಿದತೆ ಎಲ್ಲ ಇಲಾಖೆಗಳ ಅಧಿಕಾರಿಗಳ ಸಹಕಾರದಿಂದ ನಾವೆಲ್ಲರೂ ಸೇರಿ ಕಾರ್ಯಕ್ರಮ ಮಾಡೋಣ ಎಂದರು.
ಕಾಂಗ್ರೆಸ್ ರಾಜ್ಯ ಒಬಿಸಿ, ಉಪಾಧ್ಯಕ್ಷ ಎಚ್.ಎ., ಉಮಾಪತಿ ಮಾತನಾಡಿ, ಶ್ರೀ ಮಠದ ವತಿಯಿಂದ ಈಗಾಗಲೇ ಎರಡು ಬಾರಿ ರಾಜ್ಯಮಟ್ಟದ ಕೃಷಿ ಮೇಳ ಯಶಸ್ವಿಯಾಗಿ ಮಾಡಲಾಗಿದೆ. ಕೃಷಿ ಮೇಳಗಳಿಂದ ಅನ್ನದಾತ ರೈತರಿಗೆ ಹೊಸ ತಂತ್ರಜ್ಞಾನದ ಕೃಷಿ ಸಲಕರಣೆಗಳು, ಕೃಷಿ ಪದ್ಧತಿಗಳ ಪರಿಚಯವಾಗುತ್ತದೆ. ರೈತರ ಹಿತದೃಷ್ಠಿಯಿಂದ ಕೃಷಿ ಮೇಳ ಜ್ಞಾನಾರ್ಜನೆಯ ವೇದಿಕೆಯಾಗಲಿದೆ ಎಂದು ಹೇಳಿದರು.
- - -
ಹೊನ್ನಾಳಿ ಹಿರೇಕಲ್ಮಠದಲ್ಲಿ ಫೆ.27ರಿಂದ ಮಾ.2ರವರೆಗೆ ನಡೆಯಲಿರುವ ರಾಜ್ಯಮಟ್ಟದ ಕೃಷಿ ಮೇಳ ಕುರಿತಂತೆ ಒಡೆಯರ್ ಡಾ.ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಶಾಸಕ ಡಿ.ಜಿ.ಶಾಂತನಗೌಡ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಹಾಗೂ ಕೃಷಿ ಮೇಳದ ಕರಪತ್ರ ಬಿಡುಗಡೆಗೊಳಿಸಲಾಯಿತು.