ಜನರ ಅರ್ಜಿಗಳಿಗೆ ತಕ್ಷಣ ಪರಿಹಾರ ನೀಡಿ: ಡಿಸಿ ಶಿಲ್ಪಾ ಶರ್ಮಾ

KannadaprabhaNewsNetwork |  
Published : Aug 08, 2024, 01:32 AM IST
ಚಿತ್ರ 7ಬಿಡಿಆರ್59ಎ | Kannada Prabha

ಸಾರಾಂಶ

ಬೀದರ್‌ನ ತಾಲೂಕು ಪಂಚಾಯಿತಿ ಸಭಾಂಗಣಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಬುಧವಾರ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಬೀದರ್‌

ಜನಸ್ಪಂದನದಲ್ಲಿ ಸಾರ್ವಜನಿಕರಿಂದ ಬಂದ ಅರ್ಜಿಗಳಿಗೆ ತಕ್ಷಣ ಪರಿಹಾರ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿಬೇಕೆ ವಿನಾಃ ಕಾರಣ ವಿಳಂಬ ಮಾಡಬಾರದು ಎಂದು ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅಧಿಕಾರಿಗಳಿಗೆ ಹೇಳಿದರು.

ಅವರು ಬುಧವಾರ ಬೀದರ್‌ ತಾಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಜನ ಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ತಕ್ಷಣ ಬಗೆಹರಿಯದ ಕೆಲವು ಸಮಸ್ಯೆಗಳಿಗೆ ಹತ್ತು ದಿನಗಳಲ್ಲಿ ಪರಿಹಾರ ನೀಡಬೇಕು. ಹಾಗೇನಾದರು ಸಮಸ್ಯೆಗಳಿದ್ದರೆ ಅವರಿಗೆ ಹಿಂಬರಹ ನೀಡಿ, ಆದರೆ ಅನಾವಶ್ಯಕವಾಗಿ ಜನರು ಕಚೇರಿಗಳಿಗೆ ಅಲೆಯುವಂತೆ ಮಾಡಬಾರದು ಎಂದರು.

ಮಳೆಗಾಲ ಇರುವುದರಿಂದ ರಸ್ತೆ ಚರಂಡಿಗಳಲ್ಲಿ ನೀರು ನಿಂತು ಜನರಿಗೆ ಸಮಸ್ಯೆಗಳಾಗುತ್ತವೆ, ಹಾಗಾಗಿ ಮುಂಜಾಗ್ರತೆ ವಹಿಸುವಂತೆ ನಗರಸಭೆ ಆಯುಕ್ತರಿಗೆ ಸೂಚನೆ ನೀಡಿದರು. ಜನಸ್ಪಂದನದಲ್ಲಿ ಬಂದ ಒಟ್ಟು 31 ಅರ್ಜಿಗಳಿಗೆ ಪ್ರಥಮ ಆದ್ಯತೆ ನೀಡಬೇಕೆಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ ಮಾತನಾಡಿ, ತಮ್ಮ ಕಚೇರಿಗೆ ಜನರು ಬಂದಾಗ ಅವರಿಗೆ ಸರಿಯಾಗಿ ಸ್ಪಂದನೆ ಮಾಡಿ ಅಲ್ಲಿಯೆ ಸಮಸ್ಯೆ ಬಗೆಹರಿಸಿದರೆ ಜನರು ಇಲ್ಲಿಗೆ ಬರುವುದಿಲ್ಲ. ತಾಲೂಕು ಮಟ್ಟದ ಅಧಿಕಾರಿಗಳಿಗೆ ಫಿಲ್ಡ್ ಲೇವಲ್ ಎಲ್ಲಾ ಮಾಹಿತಿ ಗೊತ್ತಿರುತ್ತದೆ. ಜನರಿಗೆ ಸಕಾರಾತ್ಮಕವಾಗಿ ಸ್ಪಂದನೆ ಮಾಡುವ ಮೂಲಕ ಅವರ ಸಮಸ್ಯೆಗಳಿಗೆ ಪರಿಹಾರ ನೀಡಬೇಕೆಂದರು.

ಜನರು ವಿವಿಧ ಸಮಸ್ಯೆಗಳ ಅರ್ಜಿಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು. ಗೋರನಳ್ಳಿ ಬಿ. ಗ್ರಾಮದ ಅಲ್ಲಫ್ರಭು ನಗರದಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ರಸ್ತೆಯಲ್ಲಿ ನೀರು ಬರುತ್ತಿದ್ದು ಅದನ್ನು ಸರಿಪಡಿಸುವಂತೆ ರಾಘು ಪ್ರೀಯಾ ಮನವಿ ಸಲ್ಲಿಸಿದರು.

ಆನ್‌ಲೈನ್‌ನಲ್ಲಿ ₹6 ಲಕ್ಷ ಮೋಸ, ನ್ಯಾಯಕ್ಕೆ ಮನವಿ:

ಆನ್‌ಲೈನ್‌ನಲ್ಲಿ ಮೋಸವಾಗಿ ₹6 ಲಕ್ಷ ಹಣ ಕಳೆದುಕೊಂಡಿದ್ದು ನನಗೆ ನ್ಯಾಯ ಒದಗಿಸಿಕೊಡುವಂತೆ ಈಶ್ವರ ನಾಗಪ್ಪ ಪರೀಟ್ ಮನವಿ ಸಲ್ಲಿಸಿದರು. ಇದಕ್ಕೆ ಕ್ರಮ ವಹಿಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರ ಹೇಳಿದರು.

ಕಮಲನಗರ ತಾಲೂಕಿನ ಚಿಕ್ಲಿ (ಯು) ಗ್ರಾಮ ಪಂಚಾಯತಿ ಪಿಡಿಒ ವಿಜಯಕುಮಾರ ಧೂಳಪ್ಪ ಇವರ ಮೇಲೆ ಲೋಕಾಯುಕ್ತ ಪ್ರಕರಣ ಬಾಕಿ ಇದ್ದರು ಮುಂಬಡ್ತಿ ನೀಡಲಾಗಿದೆ. ಇದನ್ನು ರದ್ದುಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗುಲಾಂ ದಸ್ತಗೀರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಕೋಳಾರ (ಕೆ). ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಕಲಿ ಡಿಜಿಟಲ್ ಖಾತೆ ಮಾಡಿ ಸಾರ್ವಜನಿಕರಿಗೆ ನಿವೇಶನ ಮಾರಾಟ ಮಾಡುತ್ತಿದ್ದಾರೆ ಎಂದು ದೂರು ಸಲ್ಲಿಸಿದರು. ರೇಷನ್ ಕಾರ್ಡ ಸಮಸ್ಯೆ, ಪಹಣಿ ತಿದ್ದುಪಡಿ ಸೇರಿ ಇತರೆ ವಿವಿಧ ಸಮಸ್ಯೆಗಳ ಅರ್ಜಿ ಸ್ವೀಕರಿಸಿದರು.

ಜನ ಸ್ಪಂದನ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ, ಬೀದರ ಸಹಾಯಕ ಆಯುಕ್ತರಾದ ಲವೀಶ ಒರಡಿಯಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ಬೀದರ ತಾಲ್ಲೂಕು ತಹಶಿಲ್ದಾರ ಡಿ.ಜಿ. ಮಹತ್, ಬೀದರ ತಾ.ಪಂ ಅಧಿಕಾರಿ ಕಿರಣ್ ಪಾಟೀಲ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ