ಮದ್ದೂರು: ಹಾಲು ಉತ್ಪಾದಕರ ಸಹಕಾರ ಸಂಘಗಳ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದಾಗಿ ಮನ್ಮುಲ್ ನೂತನ ನಿರ್ದೇಶಕ ಎಸ್. ಪಿ.ಸ್ವಾಮಿ ಮಂಗಳವಾರ ಹೇಳಿದರು.
ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ನಿವೃತ್ತಿ ಪರಿಹಾರ ಧನವನ್ನು ಒಕ್ಕೂಟ ಪ್ರಸ್ತುತ 5 ಲಕ್ಷ ರು. ನೀಡುತ್ತಿದೆ. ಅದನ್ನು ಕನಿಷ್ಠ 7 ಲಕ್ಷ ರು. ಗಳಿಗೆ ಏರಿಕೆ ಮಾಡುವಂತೆ ಸಂಘಗಳ ಕಾರ್ಯದರ್ಶಿಗಳು ಬೇಡಿಕೆ ಇಟ್ಟಿದ್ದಾರೆ. ನಿವೃತ್ತಿ ಪರಿಹಾರ ಧನ ಏರಿಕೆ ಸಂಬಂಧ ತಾವು ಹಾಲು ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರ ಕಳೆದ 9 ತಿಂಗಳಿಂದ ಹಾಲು ಉತ್ಪಾದಕರಿಗೆ ನೀಡುತ್ತಿದ್ದ ಪ್ರತಿ ಲೀಟರ್ ಗೆ 5 ರು. ಗಳ ಪ್ರೋತ್ಸಾಹ ಧನದಲ್ಲಿ ಸಂಘಗಳ ಕಾರ್ಯದರ್ಶಿಗಳ ಹತ್ತು ಪೈಸೆ ಇನ್ಸೆಂಟಿವ್ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಕಾರ್ಯದರ್ಶಿಗಳು ಅಹವಾಲು ಸಲ್ಲಿಸಿದ್ದಾರೆ. ಈ ಬಗ್ಗೆಯೂ ಸಹ ಆಡಳಿತ ಮಂಡಳಿಯೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡುವುದಾಗಿ ನಿರ್ದೇಶಕ ಆಶ್ವಾಸನೆ ನೀಡಿದರು. ಗೋಪನಹಳ್ಳಿ ಹಾಲು ಉತ್ಪಾದಕರ ಸಂಘದ ಕೆಂಪರಾಜು, ಬೀದರ ಹೊಸಹಳ್ಳಿಯ ಎಚ್.ಎಸ್.ಮರಿಗೌಡ, ಬೊಪ್ಪಸಮುದ್ರ ದ ಎಂ. ಮಾದಯ್ಯ, ಮೆಳ್ಳಹಳ್ಳಿಯ ವೆಂಕಟಾಚಲಯ್ಯ, ಇದ್ದರು.