ವೆಂಕಟೇಶ್ ಕಲಿಪಿ
ಒಂದು ವರ್ಷದಿಂದ ಕಾಣೆ ಆಗಿರುವ ವ್ಯಕ್ತಿಗೆ ಸೇರಿದ ನಿವೇಶನದ ಕಬಳಿಕೆಗೆ ನಡೆಯುತ್ತಿರುವ ಯತ್ನ ತಡೆಯಲು ಆತನ ಸಂಬಂಧಿ ದಾಖಲಿಸಿದ ದಾವೆ ಪರಿಗಣಿಸಿರುವ ಸಿವಿಲ್ ಕೋರ್ಟ್, ದಾವೆದಾರರು ನಿವೇಶನದ ಮಾಲೀಕರು ಅಥವಾ ಅವರ ಕಾನೂನುಬದ್ಧ ಉತ್ತರಾಧಿಕಾರಿ ಆಗದಿದ್ದರೂ ಮೂರನೇ ವ್ಯಕ್ತಿಯ ಕಬಳಿಕೆಯಿಂದ ನಿವೇಶನವನ್ನು ಪಾರು ಮಾಡಲು ಏಕಪಕ್ಷೀಯ ನಿರ್ಬಂಧಕಾಜ್ಞೆ ನೀಡಿ ಅಪರೂಪದ ಆದೇಶ ಹೊರಡಿಸಿದೆ.
ಬೆಂಗಳೂರು ದಕ್ಷಿಣ ತಾಲೂಕಿನ ಬೇಗೂರು ಹೋಬಳಿಯ ಹರಳಕುಂಟೆ ಗ್ರಾಮದಲ್ಲಿ ನಿವೇಶನ ಸಂಖ್ಯೆ 205ರಲ್ಲಿನ 1050 ಅಡಿಗಳ ವಿಸ್ತೀರ್ಣದ ನಿವೇಶನವನ್ನು ಆಶ್ರಯ ಯೋಜನೆಯಡಿ ಸರ್ಕಾರ ಸುಗುಣ ಎಂಬುವರಿಗೆ 1991-92ರಲ್ಲಿ ‘ಕರ್ನಾಟಕ ಆಶ್ರಯ ಯೋಜನೆ’ಯಡಿ ಮಂಜೂರು ಮಾಡಿತ್ತು. ಈ ಸ್ವತ್ತನ್ನು 2019ರಲ್ಲಿ ಮಗ ವಿನಯ್ ಕುಮಾರ್‌ಗೆ ಸುಗುಣ ದಾನಪತ್ರ ಕ್ರಯ ಮಾಡಿಸಿದ್ದರು. ಅದನ್ನು ಕಬಳಿಸಲು ಮೂರನೇ ವ್ಯಕ್ತಿಗಳು ಪ್ರಯತ್ನಿಸಿದ್ದು, ಅದಕ್ಕೆ ನಿರ್ಬಂಧ ಹೇರುವಂತೆ ಕೋರಿ ವಿನಯ್ ಅವರ ದೊಡ್ಡಮ್ಮನ ಪುತ್ರಿ ಕೆ.ಮಧು ದಾವೆ ಸಲ್ಲಿಸಿದ್ದಾರೆ.ಈ ದಾವೆ ವಿಚಾರಣೆ ನಡೆಸಿದ ನಗರದ ಪ್ರಧಾನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ, ದಾವೆಯು ಅಂತಿಮ ವಿಲೇವಾರಿ ಬಾಕಿಯಿರುವಾಗ ಪ್ರತಿವಾದಿ (ಮೂರನೇ ವ್ಯಕ್ತಿ) ಆತನ ಏಜೆಂಟ್, ಸಹಾಯಕರು, ಕಾನೂನುಬದ್ಧ ಉತ್ತರಾಧಿಕಾರಿಗಳು, ಪ್ರತಿನಿಧಿಗಳು, ಜಿಪಿಎ ಹೊಂದಿರುವವರು, ಅವರ ಮೂಲಕ ಅಥವಾ ಅವರ ಅಡಿ ಹಕ್ಕು ಸಾಧಿಸುವ ಯಾವುದೇ ವ್ಯಕ್ತಿಗಳು ಮುಂದಿನ ವಿಚಾರಣೆಯ ದಿನಾಂಕದವರೆಗೆ ದಾವೆಯಲ್ಲಿ ಹೆಸರಿಸಲಾಗಿರುವ ಸ್ವತ್ತಿನ ಸ್ವಾಧೀನಾನುಭವ ಮತ್ತು ಅನುಭೋಗದಲ್ಲಿ ಮಧ್ಯಪ್ರವೇಶಿಸಬಾರದು ಎಂದು ತಾತ್ಕಾಲಿಕ ನಿರ್ಬಂಧಕಾಜ್ಞೆ ಹೊರಡಿಸಿದೆ.
ಇದಕ್ಕೂ ಮುನ್ನ ನ್ಯಾಯಾಧೀಶರು, ವಿನಯ್ ಕುಮಾರ್‌ಗೆ ಸೇರಿದ ಸ್ವತ್ತು ರಕ್ಷಣೆ ಮಾಡಲು ಆದೇಶಿಸುವಂತೆ ದಾವೆದಾರರು ಕೋರಿದ್ದಾರೆ. ಆದರೆ, ದಾವೆದಾರರು ಸ್ವತ್ತಿನ ಮಾಲೀಕರಲ್ಲ. ಮಾಲೀಕರ ಕಾನೂನುಬದ್ಧ ಉತ್ತರಾಧಿಕಾರಿಯೂ ಅಲ್ಲ. ಇಂಥ ಪರಿಸ್ಥಿತಿಯಲ್ಲಿ ದಾವೆದಾರರ ಮನವಿ ಪರಿಗಣಿಸಿ ಏಕಪಕ್ಷೀಯ ಆದೇಶ ಮಾಡಲು ಹೇಗೆ ಅವಕಾಶವಿದೆ ಎಂದು ಕೇಳಿದರು.
ಮತ್ತೊಂದೆಡೆ ದಾವೆದಾರರು ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಹೈಕೊರ್ಟ್ ಸಹ ವಿನಯ್ ಪತ್ತೆಗೆ ಸೂಚಿಸಿದೆ. ಈ ಮಧ್ಯೆ ಮೂರನೇ ವ್ಯಕ್ತಿಗಳು ಆತನ ಸ್ವತ್ತಿನ ಕಬಳಿಕೆಗೆ ಯತ್ನಿಸುತ್ತಿದ್ದಾರೆ. ನಿವೇಶನಕ್ಕೆ ಬಂದು ಜಾಗ ಖಾಲಿ ಮಾಡುವಂತೆ ದಾವೆದಾರರಿಗೆ ತಾಕೀತು ಮಾಡಿದ್ದಾರೆ. ಇದರಿಂದ ತಾತ್ಕಾಲಿಕ ನಿರ್ಬಂಧಕಾಜ್ಞೆ ಹೊರಡಿಸಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಸಂಬಂಧಪಟ್ಟ ಎಲ್ಲಾ ದಾಖಲೆ ಸಲ್ಲಿಸಿದರು.
-ಬಾಕ್ಸ್-
ದಾವೆ ಕೋರ್ಟ್ ಪರಿಗಣನೆ