ಕನ್ನಡಪ್ರಭ ವಾರ್ತೆ ಬೆಳಗಾವಿವಿಜಯದಶಮಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವತಿಯಿಂದ ಭಾನುವಾರ ನಗರದಲ್ಲಿ ನಡೆದ ಭವ್ಯ ಪಥಸಂಚಲನ ಗಮನಸೆಳೆಯಿತು. ಸಾವಿರಾರು ಗಣವೇಷಧಾರಿ ಸ್ವಯಂಸೇವಕರು ಬ್ಯಾಂಡ್ ನಿನಾದದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ವಿಜಯದಶಮಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ವತಿಯಿಂದ ಭಾನುವಾರ ನಗರದಲ್ಲಿ ನಡೆದ ಭವ್ಯ ಪಥಸಂಚಲನ ಗಮನಸೆಳೆಯಿತು. ಸಾವಿರಾರು ಗಣವೇಷಧಾರಿ ಸ್ವಯಂಸೇವಕರು ಬ್ಯಾಂಡ್ ನಿನಾದದೊಂದಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಶಿಸ್ತುಬದ್ಧವಾಗಿ ಹೆಜ್ಜೆ ಹಾಕಿದರು.ನಗರದ ಸರ್ಕಾರಿ ಸರ್ದಾರ್ಸ್ ಪ್ರೌಢಶಾಲೆ ಮೈದಾನದಿಂದ ಆರಂಭವಾದ ಪಥಸಂಚಲನವು ಕಾಲೇಜು ರಸ್ತೆ, ರಾಣಿ ಚನ್ನಮ್ಮ ವೃತ್ತ, ಶನಿವಾರ ಕೂಟ್, ಕಾಕತಿವೇಸ್, ಗಣಪತಿ ಗಲ್ಲಿ, ನರಗುಂದಕರ ಭಾವೆ ಚೌಕ, ಶನಿಮಂದಿರ ರಸ್ತೆ, ಕುಲಕರ್ಣಿ ಗಲ್ಲಿ, ಟಿಳಕ ಚೌಕ, ರಾಮಲಿಂಗಖಿಂಡ ಗಲ್ಲಿ ಹಾಗೂ ಧರ್ಮವೀರ ಸಂಭಾಜಿ ವೃತ್ತದ ಮೂಲಕ ಸಾಗಿ ಲಿಂಗರಾಜ ಕಾಲೇಜು ಮೈದಾನ ತಲುಪಿತು.ಹೆಡಗೆವಾರ್, ಗೋಲವಲಕರ್ ಭಾವಚಿತ್ರಗಳಿದ್ದ ಜೀಪ್ ಮುಂಚೂಣಿ: ಪಥಸಂಚಲನದ ಮುಂಚೂಣಿಯಲ್ಲಿ ಅಲಂಕರಿಸಿದ ಜೀಪ್ನಲ್ಲಿ ಆರ್ಎಸ್ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡಗೆವಾರ್ ಹಾಗೂ ಮಾಧವ ಸದಾಶಿವ ಗೋಲವಲಕರ್ ಅವರ ಭಾವಚಿತ್ರಗಳನ್ನು ಇರಿಸಲಾಗಿತ್ತು. ಜೀಪ್ ಹಿಂದೆ ಸಾಲಾಗಿ ಸಾಗಿದ ಸ್ವಯಂಸೇವಕರು ಏಕರೂಪದ ಗಣವೇಷ ಧರಿಸಿ, ಬ್ಯಾಂಡ್ ನಿನಾದಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳು ಹಾಗೂ ಜನನಿಬಿಡ ರಸ್ತೆಗಳಲ್ಲಿ ಪಥಸಂಚಲನ ಸಾಗುತ್ತಿದ್ದಂತೆ ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸಾರ್ವಜನಿಕರು ವೀಕ್ಷಿಸಿದರು. ಹಲವೆಡೆ ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಯಂಸೇವಕರಿಗೆ ಗೌರವ ಸಲ್ಲಿಸಲಾಯಿತು.ಮಹಾನ್ ನಾಯಕರ ವೇಷದಲ್ಲಿ ಪುಟಾಣಿಗಳ ಮೆರಗು: ವಿವಿಧ ಮಹಾನ್ ನಾಯಕರ ವೇಷಭೂಷಣ ಧರಿಸಿದ್ದ ಪುಟಾಣಿ ಮಕ್ಕಳು ಪಥಸಂಚಲನದ ಮತ್ತೊಂದು ಆಕರ್ಷಣೆಯಾಗಿದ್ದರು. ವಿಶೇಷ ವೇಷಗಳಲ್ಲಿ ಕಾಣಿಸಿಕೊಂಡ ಮಕ್ಕಳನ್ನು ಸಾರ್ವಜನಿಕರು ಕುತೂಹಲದಿಂದ ವೀಕ್ಷಿಸಿದರು.ಆಂಬ್ಯುಲೆನ್ಸ್ಗೆ ದಾರಿ, ಪೊಲೀಸರಿಂದ ಬಿಗಿ ಬಂದೋಬಸ್ತ್: ಪಥಸಂಚಲನದ ವೇಳೆ ಧರ್ಮವೀರ ಸಂಭಾಜಿ ವೃತ್ತದ ಸಮೀಪ ತುರ್ತು ಸೇವೆಯಲ್ಲಿದ್ದ ಆಂಬ್ಯುಲೆನ್ಸ್ ಸಂಚಾರಕ್ಕೆ ಸ್ವಯಂಸೇವಕರು ದಾರಿ ಮಾಡಿಕೊಟ್ಟರು. ಪಥಸಂಚಲನ ಸುಗಮವಾಗಿ ನಡೆಯಲು ನಗರದ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.ದೇಶಭಕ್ತಿ ಕಲಿಸುವ ಅಗತ್ಯ:ಪಥಸಂಚಲನದ ಬಳಿಕ ಲಿಂಗರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಭಾರ ಕುಲಪತಿ ಪ್ರೊ.ಮಲ್ಲಿಕಾರ್ಜುನ ಅಳಗವಾಡಿ, “ಆರ್ಎಸ್ಎಸ್ ಜಾತಿ, ಮತಗಳನ್ನು ಬದಿಗಿಟ್ಟು ದೇಶಕ್ಕಾಗಿ ದುಡಿಯುವ ಸಂಘಟನೆಯಾಗಿದೆ. ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಮಕ್ಕಳಿಗೆ ದೇಶಭಕ್ತಿಯನ್ನು ಕಲಿಸುವ ಅಗತ್ಯವಿದೆ. ಆರ್ಎಸ್ಎಸ್ ಈ ಕಾರ್ಯ ಮಾಡುತ್ತಿದೆ” ಎಂದರು.ಕಾರ್ಯಕ್ರಮದಲ್ಲಿ ಆರ್ಎಸ್ಎಸ್ನ ಕರ್ನಾಟಕ ಉತ್ತರ ಪ್ರಾಂತದ ಸಹ ಬೌದ್ಧಿಕ ಪ್ರಮುಖ ರಾಮಚಂದ್ರ ಏಡಕೆ, ಪ್ರಾಂತ ಕಾರ್ಯವಾಹ ರಾಘವೇಂದ್ರ ಕಾಗವಾಡ, ವಿಶ್ವ ಹಿಂದೂ ಪರಿಷತ್ ಪ್ರಮುಖ ಕೃಷ್ಣಭಟ್, ಶಾಸಕ ಅಭಯ ಪಾಟೀಲ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಮಾಜಿ ಶಾಸಕ ಸಂಜಯ ಪಾಟೀಲ ಹಾಗೂ ವಿಧಾನ ಪರಿಷತ್ನ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.