ಕನ್ನಡಪ್ರಭ ವಾರ್ತೆ ಬೆಳಗಾವಿಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸ್ವಾಭಿಮಾನ ಹಾಗೂ ತ್ಯಾಗದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದಲ್ಲಿ ‘ಫ್ರೀಡಂ ಪಾರ್ಕ್’ ನಿರ್ಮಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಯೋಜನೆಗೆ ಅನುದಾನ ಒದಗಿಸಿ, ತಕ್ಷಣವೇ ಸರ್ಕಾರದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದರು.
ಕನ್ನಡಪ್ರಭ ವಾರ್ತೆ ಬೆಳಗಾವಿ
ಕಿತ್ತೂರು ರಾಣಿ ಚನ್ನಮ್ಮನ ಶೌರ್ಯ, ಸ್ವಾಭಿಮಾನ ಹಾಗೂ ತ್ಯಾಗದ ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಕಿತ್ತೂರು ಕೋಟೆ ಆವರಣದಲ್ಲಿ ₹40 ಕೋಟಿ ವೆಚ್ಚದಲ್ಲಿ ‘ಫ್ರೀಡಂ ಪಾರ್ಕ್’ ನಿರ್ಮಿಸಲಾಗುವುದು. ಮುಂದಿನ ಬಜೆಟ್ನಲ್ಲಿ ಯೋಜನೆಗೆ ಅನುದಾನ ಒದಗಿಸಿ, ತಕ್ಷಣವೇ ಸರ್ಕಾರದ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಘೋಷಿಸಿದರು.ಕಿತ್ತೂರಿನಲ್ಲಿ ಭಾನುವಾರ ನಡೆದ ಐತಿಹಾಸಿಕ ಕಿತ್ತೂರು ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹೆಸರನ್ನು ‘ಕಿತ್ತೂರು ರಾಣಿ ಚನ್ನಮ್ಮ ರಸ್ತೆ ಸಾರಿಗೆ ಸಂಸ್ಥೆ’ ಎಂದು ಮರುನಾಮಕರಣ ಮಾಡುವುದಾಗಿಯೂ ತಿಳಿಸಿದರು.ಚನ್ನಮ್ಮನ ಇತಿಹಾಸ ಮುಂದಿನ ಪೀಳಿಗೆಗೆ ಪರಿಚಯವಾಗಲಿ: ಕಿತ್ತೂರು ರಾಣಿ ಚನ್ನಮ್ಮ ಕನ್ನಡ ನಾಡಿನ ದಿಟ್ಟ ಹೋರಾಟಗಾರ್ತಿ. ಕಿತ್ತೂರು ಶೌರ್ಯದ ಕಥೆ ಹೇಳುವ ನೆಲವಾಗಿದ್ದು, ಚನ್ನಮ್ಮನ ಧೈರ್ಯ ಕೇವಲ ಇತಿಹಾಸವಲ್ಲ; ಅದು ಪ್ರತಿಯೊಂದು ಪೀಳಿಗೆಗೂ ಸ್ವಾಭಿಮಾನದ ಪಾಠವಾಗಿದೆ. ಅವರ ಸಾಹಸ ಎಲ್ಲರಿಗೂ ಸ್ಫೂರ್ತಿಯಾಗಿದ್ದು, ತ್ಯಾಗ ಅಜರಾಮರವಾಗಿದೆ ಎಂದು ಹೇಳಿದರು.ಕಿತ್ತೂರು ಕೋಟೆ ಕೇವಲ ಐತಿಹಾಸಿಕ ಸ್ಮಾರಕವಾಗಿ ಉಳಿಯದೆ, ಇತಿಹಾಸವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಮುಖ ಪ್ರವಾಸಿ ಕೇಂದ್ರವಾಗಬೇಕು ಎಂಬುದು ಶಾಸಕ ಬಾಬಾಸಾಹೇಬ ಪಾಟೀಲ ಅವರ ಆಶಯವಾಗಿದೆ. ಕೋಟೆ ಆವರಣದಲ್ಲಿ ಇತಿಹಾಸವನ್ನು ದೃಶ್ಯಕಾವ್ಯದ ರೂಪದಲ್ಲಿ ಅನಾವರಣಗೊಳಿಸುವ ‘ಫ್ರೀಡಂ ಪಾರ್ಕ್’ ನಿರ್ಮಾಣಕ್ಕೆ ₹40 ಕೋಟಿ ಅಗತ್ಯವಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.₹520 ಕೋಟಿ ನೀರಾವರಿ ಯೋಜನೆಗೆ ಅನುದಾನ: ಕಿತ್ತೂರು ಭಾಗದ ರೈತರ ನೀರಾವರಿ ಸಮಸ್ಯೆ ಪರಿಹರಿಸಲು ₹520 ಕೋಟಿ ವೆಚ್ಚದ ಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಗೆ ಅಗತ್ಯ ಅನುದಾನ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.ತಾವು ನೀರಾವರಿ ಸಚಿವರಾಗಿದ್ದ ಸಂದರ್ಭದಲ್ಲಿ ಈ ಭಾಗದ ರೈತರು ಯೋಜನೆಗೆ ಮನವಿ ಸಲ್ಲಿಸಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ ಯೋಜನೆಗೆ ಮಂಜೂರಾತಿ ನೀಡಲಾಗಿದೆ ಎಂದು ಸ್ಮರಿಸಿದರು.ಇದಲ್ಲದೆ, ಕಿತ್ತೂರು ಕ್ಷೇತ್ರದಲ್ಲಿ ಸುಮಾರು ₹1,000 ಕೋಟಿ ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಲೋಕೋಪಯೋಗಿ ಇಲಾಖೆಯಡಿ ಸುಮಾರು ₹300 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ನೂರು ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಹಾಗೂ ಪ್ರವಾಸಿ ಕೇಂದ್ರಗಳ ಅಭಿವೃದ್ಧಿಗೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಜನರ ಬದುಕಿನಲ್ಲಿ ಅಭಿವೃದ್ಧಿಯ ಬೆಳಕು ಮೂಡಲಿ: ಕಿತ್ತೂರು ಉತ್ಸವದ ಸಂದರ್ಭದಲ್ಲಿ ಬೆಳಗಿಸಿದ ದೀಪ ಕೇವಲ ವೇದಿಕೆಗೆ ಸೀಮಿತವಾಗಬಾರದು; ಜನರ ಬದುಕಿನಲ್ಲಿಯೂ ಅಭಿವೃದ್ಧಿಯ ಬೆಳಕು ಮೂಡಿಸಬೇಕು. ಕಿತ್ತೂರಿನ ಸರ್ವಾಂಗೀಣ ಅಭಿವೃದ್ಧಿಯೇ ಸರ್ಕಾರದ ಉದ್ದೇಶವಾಗಿದೆ ಎಂದರು.ಜನರ ಮನೆಬಾಗಿಲಿಗೆ ತೆರಳಿ ಸ್ಥಳೀಯವಾಗಿಯೇ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಇಲಾಖೆಯನ್ನು ಆರಂಭಿಸಲಾಗಿದೆ. ಶಾಸಕರು ತಿಂಗಳಿಗೆ ಎರಡು ಬಾರಿ ಕ್ಷೇತ್ರದ ಪಂಚಾಯಿತಿ ಹಾಗೂ ಹೋಬಳಿ ಮಟ್ಟಕ್ಕೆ ತೆರಳಿ ಜನರ ಅಹವಾಲು ಆಲಿಸಬೇಕು. ಆಸ್ತಿ, ದಾಖಲೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ ಎಂದರು.ಮಹಿಳೆಯರಿಗೆ ಚನ್ನಮ್ಮ ಆದರ್ಶ: ರಾಣಿ ಚನ್ನಮ್ಮ ತ್ಯಾಗ, ಹೋರಾಟ ಮತ್ತು ಧೈರ್ಯದ ಪ್ರತೀಕ. ಅವರ ಬದುಕು ಇಂದಿನ ಮಹಿಳೆಯರಿಗೆ ಮಾದರಿಯಾಗಬೇಕು. ಮಹಿಳೆಯರು ಉದ್ಯಮಿಗಳಾಗಿ, ಸ್ವಾವಲಂಬಿಗಳಾಗಿ ಬೆಳೆಯಬೇಕು ಎಂದು ಹೇಳಿದರು.ಸರ್ಕಾರದ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತಿದೆ. ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ ಹಾಗೂ ಶಕ್ತಿ ಯೋಜನೆಗಳ ಪ್ರಯೋಜನ ಜನರಿಗೆ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರ ಖಾತೆಗೆ ನೇರವಾಗಿ ಹಣ ಜಮೆ ಮಾಡುವ ಮೂಲಕ ಕುಟುಂಬಗಳ ಆರ್ಥಿಕ ಸ್ಥಿತಿಗೆ ನೆರವಾಗಲಾಗುತ್ತಿದೆ ಎಂದರು.ಕಿತ್ತೂರು ರಾಣಿ ಚನ್ನಮ್ಮನ ಪರಂಪರೆ ಕರ್ನಾಟಕದ ಹೆಣ್ಣುಮಕ್ಕಳು ಮತ್ತು ಯುವಕರಲ್ಲಿ ಶೌರ್ಯ ಹಾಗೂ ಸ್ವಾಭಿಮಾನದ ರೂಪದಲ್ಲಿ ಮುಂದುವರಿಯಬೇಕು. ಬಸವಣ್ಣನ ಕಾಯಕ, ದಾಸೋಹ, ಸಮಾನತೆ ಮತ್ತು ಮಾನವೀಯತೆಯ ಸಂದೇಶವನ್ನು ಪಾಲಿಸಬೇಕು. ದ್ವೇಷದಿಂದ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ; ಪ್ರೀತಿಯಿಂದ ಜನರನ್ನು ಒಗ್ಗೂಡಿಸಿದಾಗ ಮಾತ್ರ ಸಮಾಜದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ ಎಂದು ಹೇಳಿದರು.ಜನರು ನೀಡಿರುವ ಅಧಿಕಾರದ ಋಣ ತೀರಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವುದು ತಮ್ಮ ಕರ್ತವ್ಯವಾಗಿದೆ. ಕಿತ್ತೂರು ಕ್ಷೇತ್ರದ ಶಾಸಕರು ರೂಪಿಸುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಇಡೀ ಸರ್ಕಾರ ಬೆಂಬಲವಾಗಿ ನಿಲ್ಲಲಿದೆ. ಕಿತ್ತೂರು ರಾಣಿ ಚನ್ನಮ್ಮ ಎಲ್ಲರ ಬದುಕಿಗೂ ಮಾದರಿಯಾಗಲಿ ಎಂದು ಆಶಿಸಿದರು.ಕಿತ್ತೂರು ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ಕಾದ್ರೋಳಿ ಸೀಮಿಮಠದ ಡಾ. ಫಾಲಾಕ್ಷ ಶಿವಯೋಗೇಶ್ವರ ಸ್ವಾಮೀಜಿ, ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಹಾಗೂ ನಿಚ್ಚಣಿಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.ಕಿತ್ತೂರು ಶಾಸಕ ಬಾಬಾಸಾಹೇಬ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಸವಿತಾ ಬೆನ್ನಾಡಿ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ, ಶಾಸಕರಾದ ಮಹಾಂತೇಶ ಕೌಜಲಗಿ, ಅಶೋಕ ಪಟ್ಟಣ, ಆಸೀಫ್ ಸೇಠ್, ಲಕ್ಷ್ಮೀ ಹೆಬ್ಬಾಳಕರ, ಎನ್.ಎಚ್. ಕೋನರಡ್ಡಿ, ವಿಶ್ವಾಸ ವೈದ್ಯ, ಮೋಹನ ಲಿಂಬಿಕಾಯಿ ಹಾಗೂ ಚನ್ನರಾಜ ಹಟ್ಟಿಹೊಳಿ ಉಪಸ್ಥಿತರಿದ್ದರು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಹಾನಗಲ್ ಸ್ವಾಗತಿಸಿದರು.ಚನ್ನಮ್ಮನ ಹೆಸರಿನಲ್ಲಿ ಸಾರಿಗೆ ಸಂಸ್ಥೆ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಕಿತ್ತೂರು ರಾಣಿ ಚನ್ನಮ್ಮನ ಹೆಸರು ಮರುನಾಮಕರಣ ಮಾಡುವುದು ಕಿತ್ತೂರಿನ ಇತಿಹಾಸ ಮತ್ತು ಚನ್ನಮ್ಮನ ಪರಂಪರೆಗೆ ಸಲ್ಲಿಸುವ ಗೌರವವಾಗಿದೆ. ಅಧಿಕಾರವೆಂದರೆ ಕೇವಲ ಹುದ್ದೆಯಲ್ಲ; ಜನರ ಸೇವೆ ಮಾಡಲು ದೊರೆತ ಅವಕಾಶ. ಕಿತ್ತೂರಿಗೆ ಬಂದಾಗ ಈ ನಾಡಿಗೆ ಏನಾದರೂ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.