ಆವರಗೊಳ್ಳ ಬಳಿ ಪುನರ್ವಸತಿ ಸ್ಥಳದಲ್ಲಿ ಶಾಸಕ ಶಾಮನೂರು ಭರವಸೆ । ಹೆಗಡೆ ನಗರದಲ್ಲಿದ್ದರೆಂಬ ದಾಖಲೆಗಳ ನೀಡದ್ದಕ್ಕೆ ಕೆಲವರಿಗೆ ವಿಳಂಬ
ವರ್ತುಲ ರಸ್ತೆ ಒತ್ತುವರಿ ಮಾಡಿಕೊಂಡಿದ್ದ ರಾಮಕೃಷ್ಣ ಹೆಗಡೆ ನಗರ ನಿವಾಸಿಗಳಿಗೆ ಪಾಲಿಕೆಯಿಂದ ಪ್ರತ್ಯೇಕ ವಸತಿಗೆ ವ್ಯವಸ್ಥೆ ಕಲ್ಪಿಸಿರುವ ಸ್ಥಳಕ್ಕೆ ಶುಕ್ರವಾರ ಶಾಸಕ, ಮಾಜಿ ಸಚಿವ ಡಾ.ಶಾಮನೂರು ಶಿವಶಂಕರಪ್ಪ ಅಧಿಕಾರಿಗಳ ಸಮೇತ ಭೇಟಿ ನೀಡಿ, ಜನರ ಅಹವಾಲು ಆಲಿಸಿದರು.
ಇಲ್ಲಿನ ವರ್ತುಲ ರಸ್ತೆಯ ಹೆಗಡೆ ನಗರದಿಂದ ಆವರಗೊಳ್ಳ ಸಮೀಪದ ದೊಡ್ಡಬಾತಿ ಸರ್ವೇ ನಂಬರ್ ವ್ಯಾಪ್ತಿಯ ಪ್ರದೇಶಕ್ಕೆ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ, ಆಯುಕ್ತೆ ರೇಣುಕಾ, ಪಾಲಿಕೆ ಸದಸ್ಯ ಎ.ಬಿ.ರಹೀಂ ಇತರರ ಸಹಿತ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಅಲ್ಲದೇ, ಸ್ಥಳಾಂತರಗೊಂಡ ಕುಟುಂಬಗಳಿಗೆ ಊಟ ಬಡಿಸಿದರು.ಈ ವೇಳೆ ಮಾತನಾಡಿದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ರಾಮಕೃಷ್ಣ ಹೆಗಡೆ ನಗರದಲ್ಲಿ ವರ್ತುಲ ರಸ್ತೆಯ ಜಾಗದಲ್ಲಿದ್ದ ಮನೆಗಳನ್ನು ತೆರವು ಮಾಡಿಸಿ, ಅಲ್ಲಿದ್ದ ಜನರಿಗೆ ಪರ್ಯಾಯವಾಗಿ ಇಲ್ಲಿನ ಆವರಗೊಳ್ಳ ಸಮೀಪದ ಕೇಂದ್ರೀಯ ವಿದ್ಯಾಲಯ ಹಿಂಭಾಗದ ಪ್ರದೇಶದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿ, ಹಕ್ಕುಪತ್ರ ನೀಡಲಾಗಿದೆ ಎಂದರು. ಹೆಗಡೆ ನಗರದಲ್ಲಿದ್ದವರು ಸೂಕ್ತ ದಾಖಲೆಗಳ ನೀಡದ್ದಕೆ ಕೆಲವರಿಗೆ ವಿಳಂಬವಾಗಿದೆ. ಸದ್ಯ 100 ಕುಟುಂಬಗಳಿಗೆ ಇನ್ನು 15-20 ದಿನಗಳಲ್ಲಿ ಹಕ್ಕುಪತ್ರ ನೀಡಲಿದ್ದೇವೆ. ಈಗಾಗಲೇ ಸರ್ಕಾರಕ್ಕೆ ಕಳಿಸಲಾಗಿದ್ದು, ಸರ್ಕಾರದಿಂದ ಬರುತ್ತಿದ್ದಂತೆಯೇ ನೂರು ಕುಟುಂಬಕ್ಕೆ ಹಕ್ಕುಪತ್ರ ನೀಡಲಿದ್ದೇವೆ. ಹೆಗಡೆ ನಗರದಲ್ಲಿ ನಿಜವಾಗಲೂ ವಾಸವಿದ್ದ ಕುಟುಂಬಗಳಿಗೆ ಹಕ್ಕುಪತ್ರ ಸಿಗಲಿದೆ ಎಂದು ತಿಳಿಸಿದರು.
ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ಭಾಗಕ್ಕೆ ಉತ್ತಮ ರಸ್ತೆ ನಿರ್ಮಿಸಲು 1 ಕೋಟಿ ರು. ವೆಚ್ಚದ ಕಾಮಗಾರಿ ಕೈಗೊಳ್ಳಲಾಗುವುದು. ಬೆಸ್ಕಾಂನಿಂದ ಸದ್ಯ ವಿದ್ಯುದೀಪದ ವ್ಯವಸ್ಥೆ ಮಾಡಲಾಗಿದೆ. ಸ್ಥಳಾಂತರಗೊಂಡ ಕುಟುಂಬಗಳು ವಾಸಿಸುತ್ತಿರುವ ಪ್ರದೇಶದಲ್ಲಿ ಯಾವುದೇ ಸಮಸ್ಯೆ, ಅಹವಾಲು ಇದ್ದರೆ, ತಕ್ಷಣವೇ ಪಾಲಿಕೆ, ಜಿಲ್ಲಾಡಳಿತದಿಂದ ಸಮಸ್ಯೆ ಪರಿಹರಿಸುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಹಿರಿಯ ಶಾಸಕ ಶಾಮನೂರು ಸೂಚಿಸಿದರು.ಹೊಸ ಜಾಗದಲ್ಲಿ ಮೂಲಸೌಕರ್ಯ ವ್ಯವಸ್ಥೆ
ಡಾ.ಶಾಮನೂರು ಶಿವಶಂಕರಪ್ಪ, ಶಾಸಕ