ಫಕೃದ್ದೀನ್ ಎಂ.ಎನ್.
ನವಲಗುಂದ: ಅಭಿವೃದ್ಧಿ ಕಾಮಗಾರಿಗೆಂದು ಹಲವು ಕಡೆಗಳಲ್ಲಿ ಪ್ರಮುಖ ರಸ್ತೆಗಳನ್ನು ಅಗೆಯಲಾಗಿದೆ. ಅಗೆದ ರಸ್ತೆಯನ್ನು ಕಾಮಗಾರಿ ಪ್ರಗತಿ ನೆಪದಲ್ಲಿ 2-3 ತಿಂಗಳುಗಟ್ಟಲೇ ಹಾಗೆ ಬಿಡಲಾಗಿದೆ. ಇಂತಹ ಕಾಮಗಾರಿಯಿಂದಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.ಹುಬ್ಬಳ್ಳಿ- ಸೊಲ್ಲಾಪುರ ಮುಖ್ಯರಸ್ತೆಯಿಂದ ಗೌಡ್ರ ಪ್ಲಾಟ್ ರಸ್ತೆಯ ತಿರುವಿನಲ್ಲಿ ಕಳೆದ ಹಲವು ತಿಂಗಳ ಹಿಂದೆ ಕಾಮಗಾರಿ ಕೈಗೊಳ್ಳಲಾಗಿತ್ತು. ಎಷ್ಟೋ ತಿಂಗಳು ಗತಿಸಿದರೂ ಗುಂಡಿ ಮುಚ್ಚದೆ ಹಾಗೇ ಬಿಟ್ಟು ಹೋಗಿದ್ದಾರೆ.
ಗ್ರಾಮ ಚಾವಡಿಯಿಂದ ಹಳ್ಳದ ಓಣಿ, ಅಂಬೇಡ್ಕರ್ ನಗರ ಮುಖ್ಯರಸ್ತೆಯಲ್ಲೂ ಇದೇ ಪರಿಸ್ಥಿತಿ ಇದ್ದು, ಸ್ಥಳೀಯರು ರೋಸಿ ಹೋಗಿದ್ದಾರೆ. ಹಲವಾರು ತಿಂಗಳ ಹಿಂದೆ ಈ ಮುಖ್ಯರಸ್ತೆಯಲ್ಲಿ ಚರಂಡಿ ಕಾಮಗಾರಿಗೆಂದು ಅಗೆದು ಅರ್ಧಂಬರ್ಧ ಕಾಮಗಾರಿ ಮಾಡಿ ಅದರ ಮೇಲೆ ಬ್ಯಾರಿಕೇಡ್‌ಗಳನ್ನು ಇಟ್ಟು ಕಾಲ್ಕಿತ್ತಿದ್ದಾರೆ.ಈ ಕುರಿತು ಸಂಬಂಧಿಸಿದ ಇಲಾಖೆಯವರಿಗೆ ಸ್ಥಳೀಯರು ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆಯಿಲ್ಲ. ತಿಂಗಳಾನುಗಟ್ಟಲೆ ಒಂದು ಸಣ್ಣ ಕಾಮಗಾರಿ ಮುಕ್ತಾಯಗೊಳಿಸದ ಪುರಸಭೆಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.
ಇನ್ನು ಪಟ್ಟಣದ ಬಹುತೇಕ ಕಡೆ ರಸ್ತೆಗಳ ಮಧ್ಯದಲ್ಲಿಯೇ ಚರಂಡಿಯಲ್ಲಿ ತಗ್ಗುಗುಂಡಿಗಳು ಬಿದ್ದಿದ್ದು, ಅಲ್ಲಿ ಬ್ಯಾರಿಕೇಡ್ ಇಟ್ಟು ಮುಚ್ಚಲಾಗಿದೆ. ಇನ್ನು ಕೆಲವು ಕಡೆ ಹಾಗೇ ಬಿಡಲಾಗಿದ್ದು, ಜನರು ಸಂಕಷ್ಟಪಡುವಂತಾಗಿದೆ.ಪಟ್ಟಣದ ಮುಖ್ಯರಸ್ತೆಯಾಗಿರುವ ಎಸ್.ಪಿ. ಪೆಟ್ರೋಲ್ ಪಂಪ್ ತಿರುವಿನಲ್ಲಿ ನೀರಿನ ಕಾಮಗಾರಿಗೆಂದು ಹಲವು ತಿಂಗಳಿಂದ ಅಗೆದು ಬ್ಯಾರಿಕೇಡ್ ಇಟ್ಟು ಹೋದವರು ಮರಳಿ ಬಂದೇ ಇಲ್ಲ. ಇನ್ನು ಗ್ರಾಮ ಚಾವಡಿ ಹತ್ತಿರ ಅಗೆದು ಬಿಟ್ಟಿದ್ದರಿಂದ ನೀರಿನ ಹರಿವು ಹೆಚ್ಚಾದಾಗ ರಸ್ತೆಯ ಮೇಲೆಲ್ಲ ಚರಂಡಿ ನೀರು ಹರಿಯುತ್ತಿರುತ್ತದೆ. ಹಲವು ಬಾರಿ ಮನವಿ ಮಾಡಿ ಬೇಸತ್ತಿದ್ದು, ಅದ್ಯಾವಾಗ ಬಂದು ಕಾಮಗಾರಿ ಮುಕ್ತಾಯಗೊಳಿಸುತ್ತಾರೋ ಗೊತ್ತಿಲ್ಲ ಎಂದು ಪುರಸಭೆ ಮಾಜಿ ಸದಸ್ಯೆ ಗೀತಾ ಜನ್ನರ್ ಹೇಳಿದರು.
ಎರಡು ಬದಿಯ ಚರಂಡಿಯನ್ನು ಒಂದಕ್ಕೆ ಸೇರಿಸಿದ್ದರಿಂದ ನೀರು ಸರಿಯಾಗಿ ಹೋಗದೆ ಕೆಟ್ಟ ವಾಸನೆ ಬರುತ್ತಿದೆ. ಸಂಜೆಯಾದರೆ ಸಾಕು ಸೊಳ್ಳೆಕಾಟ ಹೆಚ್ಚಾಗುತ್ತದೆ. ಮನೆಯಲ್ಲಿ ಕುಳಿತಾಗ ಚರಂಡಿಯಿಂದ ಕೆಟ್ಟ ವಾಸನೆ ಬರುತ್ತದೆ. ಸೊಳ್ಳೆ ಕಾಟ ತಡೆಯಲು ಆಗುವುದಿಲ್ಲ. ಪುರಸಭೆಯ ಮುಖ್ಯಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ, ಆದರೂ ಇಲ್ಲಿಯ ವರೆಗೆ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯ ಮಾಬುಸಾಬ ಯರಗುಪ್ಪಿ ಹೇಳಿದರು.