ಆರ್. ತಾರಾನಾಥ್
ಚಿಕ್ಕಮಗಳೂರುಕಳೆದ ಒಂದು ದಶಕಗಳಿಂದ ಅತಿವೃಷ್ಟಿ , ಅನಾವೃಷ್ಟಿ, ಕೂಲಿ ಕಾರ್ಮಿಕರ ಕೊರತೆ, ತೋಟಗಳ ನಿರ್ವಹಣೆಗೆ ಹಣಕಾಸಿನ ಕೊರತೆ ಎದುರಿಸುತ್ತಿರುವ ಕಾಫಿ ಬೆಳೆಗಾರರಿಗೆ 2024 ಲಕ್ಕಿ ಈಯರ್.ಕಾಫಿಯ ಇತಿಹಾಸದಲ್ಲಿ ಯಾವ ವರ್ಷದಲ್ಲೂ ಕೇಳರಿಯದ ಬೆಲೆ ತಲುಪಿದ್ದು, ಇದಕ್ಕೆ ಈ ವರ್ಷದಲ್ಲಿ ಭಾರೀ ಪ್ರಮಾಣದಲ್ಲಿ ಏರಿಕೆಯಾದ ಬೆಲೆ ಕಾರಣ. ತಮ್ಮ ಜೀವಮಾನದಲ್ಲಿ ಯಾವ ವರ್ಷದಲ್ಲೂ ಕೂಡ ಈ ರೀತಿಯಲ್ಲಿ ಬೆಲೆ ಏರಿಕೆಯಾಗಿಲ್ಲ ಎಂದು ಕಾಫಿ ಬೆಳೆಗಾರರಾದ ಬಿ.ಸಿ. ಅರವಿಂದ್ ಹೇಳುತ್ತಿದ್ದಾರೆ.50 ಕೆ.ಜಿ. ಅರೇಬಿಕಾ ಪಾರ್ಚ್‌ಮೆಂಟ್‌ಗೆ 15,750 ರು., ಅರೇಬಿಕಾ ಚೆರ್ರಿಗೆ 8960 ರು., ರೋಬಸ್ಟಾ ಪಾರ್ಚ್‌ಮೆಂಟ್‌ಗೆ 16,050 ರು., ರೋಬಸ್ಟಾ ಚೆರ್ರಿಗೆ 9940 ರು.ಕಳೆದ 2019-20 ರಲ್ಲಿ ರೋಬಸ್ಟಾ ಚೆರ್ರಿಯ ಬೆಲೆ 3,500 ರುಪಾಯಿ ಇತ್ತು. 2023-24 ರಲ್ಲಿ 6,500 ಇದ್ದು, ಈ ವರ್ಷದಲ್ಲಿ 9940 ರು.ಗಳಿಗೆ ಮುಟ್ಟಿದೆ. ಲೋಕಸಭಾ ಚುನಾವಣೆ ಮತದಾನ ನಡೆದು ಫಲಿತಾಂಶ ಪ್ರಕಟಗೊಂಡ ಬಳಿಕ ರೋಬಸ್ಟಾ ಕಾಫಿಯ ದರ ಇನ್ನಷ್ಟು ಏರಿಕೆಯಾಗಬಹುದೆಂದು ಕಾಫಿ ಬೆಳೆಗಾರರು ಹೇಳುತ್ತಿದ್ದಾರೆ.
ಯಾಕಿಷ್ಟು ದರ ?: ಕರ್ನಾಟಕ ರಾಜ್ಯದಲ್ಲಿ ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಸುಮಾರು 3.40 ಹೆಕ್ಟೇರ್ ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ. ನೀರಿನ ತೇವಾಂಶ ಹೆಚ್ಚಿರುವ ಪ್ರದೇಶಗಳಲ್ಲಿ ಅರೇಬಿಕಾ ಪಾರ್ಚ್‌ಮೆಂಟ್ ಬೆಳೆಯುತ್ತಿದ್ದರೆ, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ರೋಬಸ್ಟಾ ಬೆಳೆಯಲಾಗುತ್ತಿದೆ. ಈ ಮೂರು ಜಿಲ್ಲೆಗಳಲ್ಲಿ ರೋಬಸ್ಟಾ ಅತಿ ಹೆಚ್ಚಿನ ಪ್ರದೇಶದಲ್ಲಿ ಅಂದರೆ, ಶೇ. 60 ರಷ್ಟು ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ.ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯುವ ವಿಯಟ್ನಾಂ ಹಾಗೂ ಇಡೋನೇಷಯದಲ್ಲಿ ಈ ಬಾರಿ ಫಸಲು ಕೈ ಕೊಟ್ಟಿದೆ. ಹವಮಾನದ ವೈಪರಿತ್ಯದಿಂದ ಇಳುವರಿಯಲ್ಲಿ ಶೇ. 20 ರಿಂದ 30 ರಷ್ಟು ಕುಂಠಿತವಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕಾಫಿ ಉತ್ಪಾದನೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಗುರಿ ಮುಟ್ಟಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕಾಫಿ ಸಿಗದೆ ಹೋಗಬಹುದೆಂಬ ಕಾರಣಕ್ಕಾಗಿ ಉದ್ಯಮಿಗಳು ಕಾಫಿ ಖರೀದಿಸಿ ದಾಸ್ತಾನು ಮಾಡುವ ಸಾಧ್ಯತೆ ಹೆಚ್ಚಿದೆ.
ಬೇಡಿಕೆ ಮತ್ತು ಉತ್ಪಾದನೆಯಲ್ಲಿ ವ್ಯತ್ಯಾಸ ಕಂಡು ಬಂದಿದ್ದರಿಂದ ಬೆಲೆ ಏರಿಕೆಯಾಗಿದೆ ಎಂದು ಕಾಫಿ ಮಂಡಳಿ ಅಧಿಕಾರಿಗಳು ಹೇಳಿದ್ದಾರೆ.ನಮ್ಮ ದೇಶದಲ್ಲಿ ಬೆಳೆಯುವ ಕಾಫಿಯಲ್ಲಿ ಶೇ. 70 ರಷ್ಟು ಕಾಫಿ ಯುರೋಪ್ ದೇಶಗಳಿಗೆ ರಫ್ತು ಆಗುತ್ತದೆ. ಇದರ ಜತೆಗೆ ರಷ್ಯಾಕ್ಕೂ ಕೂಡ ರಫ್ತು ಆಗುತ್ತಿದೆ.
ಫಸಲು ಕೈಯಲ್ಲಿ ಇಲ್ಲ : ರೋಬಸ್ಟಾ ಕಾಫಿಗೆ ಬಂಪರ್ ಬೆಲೆ ಇದೆ. ಆದರೆ, ಕೆಲವು ರೈತರ ಪಾಲಿಗೆ ಕನ್ನಡಿಯೊಳಗಿನ ಗಂಟಾಗಿದೆ. ಫೆಬ್ರವರಿ ತಿಂಗಳಲ್ಲಿ ಕಾಫಿ ಕೊಯ್ಲು ಆರಂಭವಾಗಿದ್ದು, ಮೇ ತಿಂಗಳ ಕೊನೆಯಲ್ಲಿ ಮುಕ್ತಾಯವಾಗಲಿದೆ.
ಈಗಾಗಲೇ ಶೇ. 70 ರಷ್ಟು ಬೆಳೆಗಾರರು ತಮ್ಮಲ್ಲಿರುವ ಕಾಫಿ ಮಾರಾಟ ಮಾಡಿದ್ದಾರೆ. ದರದಲ್ಲಿ ದಿನೇ ದಿನೇ ಏರಿಕೆ ಯಾಗುತ್ತಿರುವುದರಿಂದ ಶೇ. 30 ರಷ್ಟು ಬೆಳೆಗಾರರು ತಮ್ಮಲ್ಲಿರುವ ಕಾಫಿಯನ್ನು ಮಾರುಕಟ್ಟೆಗೆ ತರುತ್ತಿಲ್ಲ. ಲೋಕಸಭಾ ಚುನಾವಣೆ ನಂತರ ದರ ಏರಿಕೆಯಲ್ಲಿ ಇನ್ನಷ್ಟು ಹೆಚ್ಚಳವಾಗುವ ನಿರೀಕ್ಷೆಯನ್ನು ಹೊಂದಿ ದಾಸ್ತಾನು ಮಾಡಿದ್ದಾರೆ.---- ಬಾಕ್ಸ್---
ಕಾಫಿ ಧಾರಣೆ (50 ಕೆಜಿ ಚೀಲಕ್ಕೆ)ಅರೇಬಿಕಾ ಪಾರ್ಚ್‌ಮೆಂಟ್- 15,750
ಅರೇಬಿಕಾ ಚೆರ್ರಿ- 8960
ರೋಬಸ್ಟಾ ಪಾರ್ಚ್‌ಮೆಂಟ್- 16,050
ರೋಬಸ್ಟಾ ಚೆರ್ರಿ- 9940