ಗಜೇಂದ್ರಗಡ: ದಕ್ಷಿಣಕಾಶಿ ಕಾಲಕಾಲೇಶ್ವರ ದೇವಸ್ಥಾನಕ್ಕೆ ಶಾಸಕರ ಮುತುರ್ವಜಿಯಿಂದ ರೋಪ್ ವೇ ಬಂದಿದ್ದು ದೇವಸ್ಥಾನದ ಅಸಂಖ್ಯಾತ ಭಕ್ತರು ಹಾಗೂ ಪ್ರವಾಸಿಗರ ಬೇಡಿಕೆ ಈಡೇರಿದಂತಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಶಶಿಧರ ಹೂಗಾರ ಹೇಳಿದರು.
ಸಮೀಪದ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣದ ಅಂತಿಮ ಹಂತದ ಪರಿಶೀಲನೆ ಹಿನ್ನೆಲೆ ಗುರುವಾರ ಸಂಜೆ ಕಾಲಕಾಲೇಶ್ವರ ಗ್ರಾಮದ ರುದ್ರಪಾದದ ಗುಡ್ಡದ ಮೇಲೆ ಶಾಸಕ ಜಿ.ಎಸ್. ಪಾಟೀಲ ಭೇಟಿ ಬಳಿಕ ಮಾತನಾಡಿದರು.ತಾಲೂಕಿನಲ್ಲಿ ಅನೇಕ ಐತಿಹಾಸಿಕ ಸ್ಥಳಗಳು ಹಾಗೂ ಪ್ರವಾಸಿ ತಾಣಗಳಿದ್ದು ಅವುಗಳು ಪ್ರಚಾರದ ಕೊರತೆಯಿಂದ ಸೂಡಿಯ ಜೋಳು ಕಳಸ, ಇಟಗಿ ಭೀಮಾಂಬಿಕಾ ದೇವಸ್ಥಾನ, ಗಜೇಂದ್ರಗಡ ಕೋಟೆ ಸೇರಿ ಅನೇಕ ಸ್ಥಳಗಳಲ್ಲಿ ಈಗಾಗಲೇ ಕನ್ನಡ ಸೇರಿ ಬೇರೆ ಭಾಷೆಗಳ ಚಲನಚಿತ್ರ ಹಾಗೂ ಕಿರುಚಿತ್ರಗಳು ನಿರ್ಮಾಣ ಹಾಗೂ ನಿರ್ದೇಶನ ನಡೆದಿದೆ. ಹೀಗಾಗಿ ಈ ಭಾಗದಲ್ಲಿ ಐತಿಹಾಸಿಕ ದೇವಸ್ಥಾನಗಳು ಹಾಗೂ ಪ್ರವಾಸಿತಾಣಗಳನ್ನು ಮುನ್ನೆಲೆಗೆ ತರುವ ಮೂಲಕ ಈ ಭಾಗದಲ್ಲಿ ಉದ್ಯೋಗ ಸೃಷ್ಟಿ ಜತೆಗೆ ಅಭಿವೃದ್ಧಿ ಕಾರ್ಯಗಳು ಸರಾಗವಾಗಿ ನಡೆಯಲಿದೆ ಎನ್ನುವ ಆಶಯಕ್ಕೆ ಪೂರಕವಾಗಿ ಶಾಸಕ ಜಿ.ಎಸ್.ಪಾಟೀಲ ಅವರು ಸರ್ಕಾರಕ್ಕೆ ಕಾಲಕಾಲೇಶ್ವರ ದೇವಸ್ಥಾನಕ್ಕೆ ಪ್ರಾಥಮಿಕ ಹಂತದಲ್ಲೆ ರೋಪ್ ವೇ ನಿರ್ಮಾಣಕ್ಕೆ ಅನುಮೋಧನೆ ತಂದಿದ್ದು ಖುಷಿ ತಂದಿದೆ ಎಂದರು.ಗಜೇಂದ್ರಗಡ ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಮಾತನಾಡಿ, ತಾಲೂಕಿನಲ್ಲಿನ ಅದರಲ್ಲೂ ಗಜೇಂದ್ರಗಡ ಪಟ್ಟಣವು ೧೮ ಮಠ, ೧೮ ಮಸೀದಿ ಹಾಗೂ ೧೮ ಬಾವಿಗಳನ್ನು ಹೊಂದಿದೆ ಐತಿಹ್ಯದ ಜತೆಗೆ ಅನೇಕ ಪ್ರವಾಸಿ ತಾಣಗಳು ಸೇರಿ ಕಾಲಕಾಲೇಶ್ವರ ದೇವಸ್ಥಾನಕ್ಕೆ ರೋಪ್ ವೇ ನಿರ್ಮಾಣದಿಂದ ತಾಲೂಕಿನಲ್ಲಿ ಪ್ರವಾಸೋದ್ಯಮ ಮುನ್ನಲೆಗೆ ಬರಲಿದೆ. ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿರುವ ಶಾಸಕ ಜಿ.ಎಸ್.ಪಾಟೀಲ ಅವರು ಮುತುರ್ವಜಿ ಹಾಗೂ ಕೆರೆ ತುಂಬಿಸುವುದು, ಎಂಜಿನಿಯರಿಂಗ್ ಕಾಲೇಜು ಪ್ರಾರಂಭ ಸೇರಿ ಅನೇಕ ಜನಪರ ಕಾರ್ಯಕ್ರಮಗಳು ನಡೆಯಲಿವೆ."ರುದ್ರಪಾದದ ಗುಡ್ಡದ ಮೇಲೆ ೨೧ ಎಕರೆ ಎಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಜಾಗ, ಕಾಲಕಾಲೇಶ್ವರ ದೇವಸ್ಥಾನದ ಇತಿಹಾಸ ಹಾಗೂ ಐತಿಹ್ಯವನ್ನು ಪ್ರವಾಸಿಗರಿಗೆ ತಿಳಿಸಲು ಮೂಜಿಯಂ ಸ್ಥಾಪನೆ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಲು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.ಈ ವೇಳೆ ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೇರ್ಮನ್ ಮುದಿಯಪ್ಪ ಮುಧೋಳ, ರೋಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರಣ್ಣ ಶೆಟ್ಟರ, ಗಜೇಂದ್ರಗಡ ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ಚಂಬಣ್ಣ ಚವಡಿ, ಐ.ಎಸ್.ಪಾಟೀಲ, ಬಿ.ಎಸ್.ಶೀಲವಂತರ, ಮುತ್ತಣ್ಣ ತಳವಾರ ಸೇರಿ ಅಧಿಕಾರಿಗಳು ಇದ್ದರು.