ಕನ್ನಡಪ್ರಭ ವಾರ್ತೆ ಆಲಮಟ್ಟಿ
ದಿನನಿತ್ಯವೂ 5 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಲಮಟ್ಟಿಯ ವಿವಿಧ ಉದ್ಯಾನ ವೀಕ್ಷಣೆಗೆ ಆಗಮಿಸುತ್ತಿದ್ದು, ವಾಹನಗಳ ಪಾರ್ಕಿಂಗ್ ದೊಡ್ಡ ತಲೆನೋವಾಗಿದೆ. ವಾಹನಗಳ ಸಮರ್ಪಕ ಹೋಗಲು ಹರಸಾಹಸ ಪಡಬೇಕಾಗಿದೆ. ರಾಜ್ಯದ ನಾನಾ ಕಡೆಯಿಂದ ಬೆಳಿಗ್ಗೆಯಿಂದಲೇ ಆಲಮಟ್ಟಿಯತ್ತ ಪ್ರವಾಸಿಗರು ಮುಖ ಮಾಡುತ್ತಿದ್ದಾರೆ. ಸಂಜೆ 4 ರ ನಂತರವಂತೂ ಆ ಸಂಖ್ಯೆ ಇನ್ನೂ ದುಪ್ಪಟ್ಟಾಗುತ್ತದೆ.
ಸಂಗೀತ ಕಾರಂಜಿ, ಮೊಘಲ್ ಉದ್ಯಾನ, ಲೇಸರ್ ಫೌಂಟೇನ್, ವಿಜ್ಞಾನ ಪಾರ್ಕ್ ಒಳಗೊಂಡ 77 ಎಕರೆ ಪ್ರವಾಸಿ ಸಮುಚ್ಛಯದ ಉದ್ಯಾನಕ್ಕೆ ಭೇಟಿ ನೀಡುವವರ ಸಂಖ್ಯೆಯಂತೂ ಹೆಚ್ಚಿದೆ.ರಾಕ್ ಉದ್ಯಾನ, ಸಂಗೀತ ಕಾರಂಜಿ ಬಳಿ ಉದ್ಯಾನದ ಪ್ರವೇಶ ದರದ ಟಿಕೆಟ್ ಪಡೆಯಲು ಹರಸಾಹಸ ಪಡಬೇಕಾಗಿದೆ. ಅದಕ್ಕಾಗಿ ಹೆಚ್ಚಿನ ಟಿಕೆಟ್ ಕೌಂಟರ್ ವ್ಯವಸ್ಥೆಯಿದ್ದರೂ, ನಿಯಂತ್ರಣಕ್ಕೆ ಬರುತ್ತಿಲ್ಲ.
1000 ಜನ ವೀಕ್ಷಿಸುವ ಅವಕಾಶವಿರುವ ಲೇಸರ್ ಫೌಂಟೇನ್‌ನ ಒಂದೇ ಪ್ರದರ್ಶನ ನಿತ್ಯ 7.20ಕ್ಕೆ ಆರಂಭಗೊಳ್ಳುತ್ತಿತ್ತು. ಆದರೆ ಕಳೆದ 15 ದಿನಗಳಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಿದ ಕಾರಣ ನಿತ್ಯ ಮೂರು ಪ್ರದರ್ಶನ ಮಾಡಲಾಗುತ್ತಿದೆ.
ಸಂಗೀತ ಕಾರಂಜಿ ಬಳಿ ಪಾರ್ಕಿಂಗ್ ಸಮಸ್ಯೆ ಹೆಚ್ಚಿದ್ದು, ಪ್ರದರ್ಶನದಿಂದ ಹೊರಬರುವಾಗ ಪ್ರವಾಸಿಗರನ್ನು ಹಾಗೂ ವಾಹನಗಳಳ ಸುಲಭ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಾರ್ಕಿಂಗ್ ಶುಲ್ಕ ವಿಧಿಸಿದರೂ ವಾಹನಗಳ ಸಂಚಾರಕ್ಕೆ ಸಂಚಕಾರ ಬಂದಿದೆ. ಸ್ಥಳೀಯ ಆಲಮಟ್ಟಿಯ ಪೊಲೀಸರು ಸುಲಭ ಸಂಚಾರ ವ್ಯವಸ್ಥೆಗೆ ಅನುಕೂಲ ಮಾಡುತ್ತಿಲ್ಲ ಎಂಬ ದೂರು ಹೆಚ್ಚುತ್ತಿವೆ.
ಸಾಲು ರಜೆಯ ಹಿನ್ನೆಲೆಯಲ್ಲಿ ಡಿ.23, 24, 25 ಕೇವಲ ಮೂರೇ ದಿನಗಳಲ್ಲಿ ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ 44,000 ದಾಟಿದೆ ಎಂದು ಅಧಿಕಾರಿಗಳು ತಿಳಿಸಿದರು.
ಇನ್ನೂ ಬೀದಿ ಬದಿ ವ್ಯಾಪಾರಸ್ಥರು ಕೂಡಾ ಫುಲ್ ಖುಷ್ ಆಗಿದ್ದಾರೆ. ಇನ್ನೂ ಆಲಮಟ್ಟಿಯ ಸುತ್ತಲಿನ ಲಾಡ್ಜ್ ಗಳು ಭರ್ತಿಯಾಗಿದ್ದು, ಹೋಟೆಲ್, ಡಾಬಾಗಳು ತುಂಬಿ ತುಳುಕುತ್ತಿವೆ.
---
ಮಕ್ಕಳು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯ ವೀಕ್ಷಣೆಗೆ ಆಲಮಟ್ಟಿಗೆ ಬರುತ್ತಿದ್ದಾರೆ. ಸಂಗೀತ ಕಾರಂಜಿ ನೋಡಿದ ನಂತರ ರಾತ್ರಿ 9 ಗಂಟೆಯಾಗುತ್ತದೆ. ಆದರೆ ಇಲ್ಲಿ ವಸತಿಗೆ ಯಾವುದೇ ವ್ಯವಸ್ಥೆಯಿಲ್ಲ. ಹೀಗಾಗಿ ಅಕ್ಕಪಕ್ಕದ ಶಾಲೆ, ದೇವಸ್ಥಾನಗಳೇ ವಸತಿ ತಾಣಗಳಾಗಿವೆ. ಕೆಬಿಜೆಎನ್‌ಎಲ್ ತಕ್ಷಣ ಯಾತ್ರಿ ನಿವಾಸ ನಿರ್ಮಾಣದತ್ತ ಆಸಕ್ತಿ ತೋರಬೇಕು. ಪ್ರವಾಸಿಗರ ಮೂಲಭೂತ ಸೌಕರ್ಯಗಳ ಕೊರತೆ ನಿವಾರಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಮನವಿ ಮಾಡಿದರು.