ಕನ್ನಡಪ್ರಭ ವಾರ್ತೆ ಬೆಳಗಾವಿ
ಯುವಕರ ಗುಂಪು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಬೆಳಗ್ಗೆಯಿಂದಲೇ ಅನಗೋಳದ ಡಿವಿಎಸ್ ವೃತ್ತದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. 21 ಅಡಿ ಎತ್ತರದ ಸಂಭಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.
ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಜ.5ರಂದು ದಿನಾಂಕ ನಿಗದಿ ಮಾಡಲಾಗಿತ್ತು. ಶಾಸಕ ಅಭಯ ಪಾಟೀಲ ಮತ್ತು ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ್ ಸೇರಿದಂತೆ ಪಾಲಿಕೆ ಸದಸ್ಯರು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಸಂಭಾಜಿ ಮಹಾರಾಜರ ಪ್ರತಿಮೆ ಮತ್ತು ಭವನದ ಕಾಮಗಾರಿ ಪೂರ್ಣಗೊಂಡಿಲ್ಲ. ಹಾಗಾಗಿ, ಕಾರ್ಯಕ್ರಮ ಮುಂದೂಡಬೇಕೆಂದು ಕೆಲವರು ಆಗ್ರಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಕೂಡ ಕಾಮಗಾರಿ ಅರ್ಧವಾಗಿರುವುದರಿಂದ ತರಾತುರಿಯಲ್ಲಿ ಪ್ರತಿಮೆ ಅನಾವರಣ ಮಾಡುವುದು ಸರಿಯಲ್ಲ. ಮೇಯರ್ ಅವರ ಅಧಿಕಾರವಧಿ ಇನ್ನೂ ಇದೆ. ಅವರ ಅವಧಿಯಲ್ಲೇ ಕಾಮಗಾರಿ ಪೂರ್ಣಗೊಂಡ ನಂತರ ಉದ್ಘಾಟನೆ ಕಾರ್ಯಕ್ರಮ ಮಾಡಲಾಗುವುದು ಎಂದು ಹೇಳಿದ್ದರು.ಹೀಗಾಗಿ ಪ್ರತಿಮೆ ಅನಾವರಣ ಕಾರ್ಯಕ್ರಮ ಗೊಂದಲದ ಗೂಡಾಗಿತ್ತು. ಈ ಸಂಬಂಧ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಶಾಸಕ ಅಭಯ ಪಾಟೀಲ ಸೇರಿದಂತೆ ಸ್ಥಳೀಯರ ಜೊತೆಗೆ ಸಭೆ ನಡೆಸಿ, ಮನವೊಲಿಸಿ, ಕಾರ್ಯಕ್ರಮ ಮುಂದೂಡುವ ಪ್ರಯತ್ನ ಮಾಡಿದ್ದರು. ಆದರೆ, ಶಾಸಕ ಅಭಯ ಪಾಟೀಲ ಸೇರಿದಂತೆ ಪಾಲಿಕೆ ಆಡಳಿತಾರೂಢ ಪಕ್ಷದ ಸದಸ್ಯರೆಲ್ಲರೂ ಪ್ರತಿಮೆ ಅನಾವರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದು, ಪ್ರತಿಮೆ ಅನಾವರಣ ಮಾಡಿಯೇ ಮಾಡುತ್ತೇವೆ ಎಂದು ಪಟ್ಟು ಹಿಡಿದರು.
ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸಲು ಸಿದ್ಧತೆಯ ಪರಿಶೀಲನೆಗೆ ಆಗಮಿಸಿದ ಮೇಯರ್ ಸವಿತಾ ಕಾಂಬಳೆ ಮತ್ತು ಉಪಮೇಯರ್ ಆನಂದ ಚವ್ಹಾಣ ಅವರಿಗೆ ಪಾಲಿಕೆ ಉಪ ಆಯುಕ್ತೆ ಲಕ್ಷ್ಮಿ ನಿಪ್ಪಾಣಿಕರ ತಡೆದ ಪ್ರಸಂಗವೂ ನಡೆಯಿತು. ಈ ವೇಳೆ ಮೇಯರ್ ಸವಿತಾ ಕಾಂಬಳೆ ಅವರು ಗರಂ ಆದರು. ಪ್ರತಿಮೆ ಸುತ್ತಲೂ ಇರುವ ಕಟ್ಟಿಗೆ ಹಾಗೂ ಹಸಿರು ಪರದೆ ಬಿಚ್ಚಬೇಕು. ಇಲ್ಲದಿದ್ದರೆ ನಾನೇ ತೆರಳಿ ಪರದೆ ಬಿಚ್ಚಲೇ ಎಂದು ಪ್ರಶ್ನಿಸಿದರು. ಸ್ಥಳಕ್ಕೆ ಆಗಮಿಸುವಂತೆ ಮೇಲಧಿಕಾರಿಗಳಿಗೆ ತಿಳಿಸುವಂತೆ ಪಟ್ಟು ಹಿಡಿದರು. ಇದಕ್ಕೆ ಪ್ರತ್ಯುತ್ತರ ನೀಡದೇ ನಿಪ್ಪಾಣಿಕರ ಮೌನವಹಿಸಿದರು. ಬಳಿಕ ಮೇಯರ್ ಸಮ್ಮುಖದಲ್ಲಿ ಪ್ರತಿಮೆ ಸುತ್ತಲೂ ಹಾಕಿದ್ದ ಬಟ್ಟೆ ತೆರವುಗೊಳಿಸಲಾಯಿತು.
ಮತ್ತೊಂದೆಡೆ ಶಾಸಕ ಅಭಯ ಪಾಟೀಲ ಬೆಂಬಲಿಗರು ಶೋಭಾಯಾತ್ರೆ ಮೂಲಕ ಆಗಮಿಸಿ, ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಗೊಳಿಸುವ ಮೂಲಕ ಗೊಂದಲಗಳಿಗೆ ತೆರೆ ಬಿದ್ದಿತು. ಶೋಭಾಯಾತ್ರೆಯಲ್ಲಿ ಕೇಸರಿ ಬಾವುಟ ರಾರಾಜಿಸಿದವು.
ಭವ್ಯ ಶೋಭಾಯಾತ್ರೆ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣಕ್ಕೆ ಅನುಮತಿ ನಿರಾಕರಿಸಿದ ಜಿಲ್ಲಾಡಳಿತಕ್ಕೆ ಸೆಡ್ಡು ಹೊಡೆದು ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ ಅನಗೋಳದ ನಾಕಾದಿಂದ ಭವ್ಯ ಶೋಭಾಯಾತ್ರೆ ನಡೆಸಿದರು.