ಸನಾತನ ಹಿಂದೂ ಧರ್ಮದ ಮೇಲೆ ಹಲವು ದಾಳಿ ನಡೆದರೂ ಏನೂ ಮಾಡಲು ಸಾಧ್ಯವಾಗಿಲ್ಲ.
ಕೋಣಾರದಲ್ಲಿ ಅದ್ಧೂರಿ ಯುಗಾದಿ ಉತ್ಸವ ಆಚರಣೆ
ಕನ್ನಡಪ್ರಭ ವಾರ್ತೆ ಭಟ್ಕಳ
ಸನಾತನ ಹಿಂದೂ ಧರ್ಮದ ಮೇಲೆ ಹಲವು ದಾಳಿ ನಡೆದರೂ ಏನೂ ಮಾಡಲು ಸಾಧ್ಯವಾಗಿಲ್ಲ. ಆಚರಣೆ, ಸಂಸ್ಕೃತಿಯಿಂದ ಸನಾತನ ಹಿಂದೂ ಧರ್ಮ ಜೀವಂತವಾಗಿದ್ದು, ಹಿಂದೂಗಳು ಸಂಘಟಿತರಾಗುವುದರ ಮೂಲಕ ಹಿಂದೂ ಧರ್ಮ ಉಳಿಸಿಕೊಳ್ಳಬೇಕು ಎಂದು ವಾಗ್ಮಿ ಹಾರಿಕಾ ಮಂಜುನಾಥ ಹೇಳಿದರು.
ಭಾನುವಾರ ಸಂಜೆ ಕೋಣಾರದಲ್ಲಿ ಯುಗಾದಿ ಉತ್ಸವ ಸಮಿತಿಯಿಂದ ಏರ್ಪಡಿಸಲಾದ ಯುಗಾದಿ ಉತ್ಸವ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಹಿಂದೂಗಳು ಜಾತಿಗಿಂತ ಧರ್ಮಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು. ಜಾತಿಯನ್ನು ಮನೆಗೆ ಸೀಮಿತಗೊಳಿಸಿ ಹೊರಗೆ ನಾವೆಲ್ಲರೂ ಹಿಂದೂ ಎಂದು ಸಾರಬೇಕು. ಧರ್ಮವೇ ಇಲ್ಲದಿದ್ದರೆ ಜಾತಿ ಹೇಗೆ ಉಳಿದೀತು ಎಂದ ಅವರು, ಮನೆ ಮನೆಗಳಲ್ಲಿಯೂ ಹಿಂದೂ ಧರ್ಮದ ಜಾಗೃತಿ, ಆಚಾರ ವಿಚಾರ, ಸಂಸ್ಕೃತಿ ಬೆಳಗಬೇಕು. ನಮ್ಮ ಮಕ್ಕಳಿಗೆ ಸನಾತನ ಧರ್ಮದ ಮಹತ್ವ, ಸಂಸ್ಕೃತಿ, ಆಚಾರ ವಿಚಾರದ ಬಗ್ಗೆ ತಿಳುವಳಿಕೆ ಮೂಡಿಸಬೇಕು. ಪ್ರತಿ ಮನೆಯಲ್ಲೂ ಮಕ್ಕಳಿಗೆ ಸನಾತನ ಧರ್ಮದ ಪಾಠ ಆಗಬೇಕು. ಈ ಕಾರ್ಯವನ್ನು ಮನೆಯ ಹಿರಿಯರು ಮಾಡಬೇಕು. ಮಕ್ಕಳಿಗೆ ಚಿಕ್ಕವರಿರುವಾಗಲೇ ಧರ್ಮದ ಬಗ್ಗೆ ಜಾಗೃತಿ ಮೂಡಿಸಿದರೆ ಅವರು ಎಂದಿಗೂ ಹಾದಿ ತಪ್ಪುವುದಿಲ್ಲ. ಶಿಕ್ಷಣದ ಜತೆಗೆ ನಮ್ಮ ಸಂಸ್ಕೃತಿಯೂ ಅವರಿಗೆ ಕಲಿಸಬೇಕು. ನಮ್ಮ ಹಿಂದೂ ಧರ್ಮದ ಬಗ್ಗೆ ನಾವೇ ಕಿಳರಿಮೆ ಹೊಂದಿದರೆ ಬೇರೆ ಯಾರು ಬಂದು ಧರ್ಮ ಉಳಿಸುತ್ತಾರೆ. ಹೀಗಾಗಿ ನಮ್ಮ ಧರ್ಮವನ್ನು ನಾವೇ ಉಳಿಸಿ, ರಕ್ಷಿಸಿಕೊಳ್ಳುವುದು ಅಗತ್ಯವಿದೆ ಎಂದರು.
ಕಾಶ್ಮೀರದಲ್ಲಿ ಹಿಂದೂಗಳಲ್ಲಿ ಸಂಘಟನೆ, ಧರ್ಮ ಜಾಗೃತಿ ಇಲ್ಲದಿರುವುದರಿಂದ ಅಲ್ಲಿನ ಹಿಂದೂಗಳ ಪರಿಸ್ಥಿತಿ ಹೇಗಾಗಿದೆ ಎಂದು ನಾವು ಕಣ್ಣಾರೆ ನೋಡುತ್ತಿದ್ದೇವೆ. ಕಾಶ್ಮೀರದ ಹಿಂದೂ ಪರಿಸ್ಥಿತಿ ನಮಗೆ ಬಾರದೇ ಇರಲು ಮಕ್ಕಳಿಗೆ ಸನಾತನ ಧರ್ಮದ ಆಚಾರ, ವಿಚಾರ, ಸಂಸ್ಕೃತಿ ಮತ್ತು ಧರ್ಮದ ಬಗ್ಗೆ ತಿಳಿಸಬೇಕು ಎಂದ ಅವರು, ಹಿಂದೂಗಳಿಗೆ ಭಾರತ ಮಾತ್ರ ದೇಶವಾಗಿದೆ. ಭಾರತದಲ್ಲಿ ಹಿಂದೂಗಳಿಗೆ ತೊಂದರೆ ಆದರೆ ಅವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದ ಅವರು, ಇದಕ್ಕಾಗಿ ಸನಾತನ ಹಿಂದೂ ಧರ್ಮದ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಹೇಳಿದರು.
ಸನಾತನ ಧರ್ಮ ಉಳಿದರೆ ಭಾರತವೂ ಸುರಕ್ಷಿತವಾಗಿರುತ್ತದೆ. ಸನಾತನ ಹಿಂದೂ ಧರ್ಮಕ್ಕೆ ಬೇರೆ ಧರ್ಮಗಳಿಂದ ಏನೂ ಮಾಡಲು ಸಾಧ್ಯವಾಗಲಿಲ್ಲ. ಆದರೆ ಹಿಂದೂ ಧರ್ಮದಲ್ಲಿದ್ದ ಧರ್ಮ ವಿರೋಧಿಗಳಿಂದಲೇ ಧರ್ಮಕ್ಕೆ ತೊಂದರೆ ಆಗುತ್ತಿದೆ. ಇದು ನಿಲ್ಲಬೇಕು. ಹಿಂದೂಗಳು ಸಂಘಟಿತರಾಗಿ ಸನಾತನ ಹಿಂದೂ ಧರ್ಮದ ರಕ್ಷಣೆಗೆ ಮುಂದಾಗಬೇಕು. ಮನೆಮನೆಗಳಲ್ಲಿ ಈ ಕುರಿತು ಜಾಗೃತಿ ಆಗಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಮುಖಂಡ ರಾಮಕೃಷ್ಣ ಶೆಟ್ಟಿ ಮಾತನಾಡಿ, ಧರ್ಮ ಜಾಗೃತಿಗೋಸ್ಕರ ಯುಗಾದಿ ಉತ್ಸವ ಮಾಡಲಾಗಿದೆ. ಮನೆಮನೆ ಭೇಟಿ, ಶೋಭಾಯಾತ್ರೆ, ಹಿಂದೂ ಸಮಾವೇಶ ಮುಂತಾದ ಕಾರ್ಯಕ್ರಮ ನಡೆಸಿ ಜಾಗೃತಿಗೊಳಿಸಲಾಗಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷ ನಾರಾಯಣ ಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಸಮಿತಿಯ ಕಾರ್ಯದರ್ಶಿ ರಾಧಾಕೃಷ್ಣ ಉಪಾಧ್ಯಾಯ ಇದ್ದರು. ವೇ.ಮೂ. ಯೋಗೇಶ ಹೆಬ್ಬಾರ ಮತ್ತು ವಿನಯ ಉಪಾಧ್ಯಾಯ ವೇದಘೋಷ ಮಾಡಿದರು. ಶ್ರೀಶ ಹೆಬ್ಬಾರ ಶಂಕನಾದಗೈದರು. ಸುಷ್ಮಾ ಗಣೇಶ ಹೆಬ್ಬಾರ ಪ್ರಾರ್ಥಿಸಿದರು. ಶ್ರೀಕರ ಹೆಬ್ಬಾರ ದೇಶಭಕ್ತಿಗೀತೆ ಹಾಡಿದರು. ಹಿರಿಯ ಮುಖಂಡ ಗೋವಿಂದ ನಾಯ್ಕ ಸ್ವಾಗತಸಿದರೆ, ವಿನಾಯಕ ಭಟ್ಟ ತೆಕ್ಕನಗದ್ದೆ ನಿರೂಪಿಸಿದರು. ಸುಬ್ರಹ್ಮಣ್ಯ ಮಧ್ಯಸ್ಥ ವಂದಿಸಿದರು. ಕಾರ್ಯಕ್ರಮದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.