ಸೌಕರ್ಯ ಕೊರತೆಯಿಂದ ಪಾಳು ಬಿದ್ದ ಸಂಡೂರು ಕ್ರೀಡಾಂಗಣ

KannadaprabhaNewsNetwork |  
Published : Sep 25, 2026, 02:30 AM IST
ಸಂಡೂರಿನ ಕಪ್ಪಲಕುಂಟೆ ರಸ್ತೆಯಲ್ಲಿರುವ ಕ್ರೀಡಾಂಗಣದ ಮೆಟ್ಟಿಲುಗಳ ಮೇಲಿನ ಹೊದಿಕೆ ಗಾಳಿ ಮಳೆಗೆ ಕಿತ್ತು ಹೋಗಿರುವುದು.   | Kannada Prabha

ಸಾರಾಂಶ

ಮೇಲೊದಿಕೆ ಇಲ್ಲದ್ದರಿಂದ ಬಿಸಿಲು ಮಳೆಗೆ ಇಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ಇದೆ. ಇಲ್ಲಿ ಶೌಚಾಲಯಗಳ ಕೊರತೆ ಇದೆ

ವಿ.ಎಂ. ನಾಗಭೂಷಣ ಸಂಡೂರು

ಪಟ್ಟಣದ ಕಪ್ಪಲಕುಂಟೆ ರಸ್ತೆಯಲ್ಲಿ ಎನ್‌ಎಂಡಿಸಿ (ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್) ಸಂಸ್ಥೆಯ ೨೦೧೫-೧೬ನೇ ಸಾಲಿನ ಸಿ.ಎಸ್.ಆರ್ ಅನುದಾನ ₹೨ ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ತಾಲೂಕು ಕ್ರೀಡಾಂಗಣ ಮೂಲಸೌಕರ್ಯಗಳ ಕೊರತೆಯಿಂದ ಪಾಳು ಬಿದ್ದಿದೆ.

ಸ್ಟೇಡಿಯಂನಲ್ಲಿ ಪ್ರೇಕ್ಷಕರು ಕುಳಿತು ಆಟ ವೀಕ್ಷಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದ್ದ ಮೆಟ್ಟಿಲುಗಳ ಮೇಲೆ ಹಾಕಿದ್ದ ಶೀಟು ಒಂದೆರಡು ವರ್ಷಗಳ ಹಿಂದೆ ಬೀಸಿದ ಗಾಳಿಗೆ ಕಿತ್ತು ಹೋಗಿವೆ. ಶೀಟುಗಳು ಹಾರಿ ಹೋದ ಮೇಲೆ ಉಳಿದಿರುವ ಫ್ರೇಮ್‌ಗಳು ಪಳೆಯುಳಿಕೆಗಳಂತೆ ತಮ್ಮ ದುಸ್ಥಿತಿ ಸಾರುತ್ತಿವೆ.

ಮೇಲೊದಿಕೆ ಇಲ್ಲದ್ದರಿಂದ ಬಿಸಿಲು ಮಳೆಗೆ ಇಲ್ಲಿನ ಮೆಟ್ಟಿಲುಗಳ ಮೇಲೆ ಕುಳಿತುಕೊಳ್ಳಲು ಆಗದ ಪರಿಸ್ಥಿತಿ ಇದೆ. ಇಲ್ಲಿ ಶೌಚಾಲಯಗಳ ಕೊರತೆ ಇದೆ. ನೀರಿನ ಟ್ಯಾಂಕ್‌ ಇಡಲಾಗಿದೆಯಾದರೂ ಅವುಗಳಿಗೆ ನೀರಿನ ಸರಬರಾಜು ಇರುವುದಿಲ್ಲ. ಕ್ರೀಡಾಂಗಣ ನೋಡಿಕೊಳ್ಳುವವರನ್ನು ನೇಮಿಸದ ಕಾರಣ ಕ್ರೀಡಾಂಗಣದ ಸುತ್ತ ಗಿಡಗಂಟಿಗಳು ಬೆಳೆಯ ತೊಡಗಿವೆಯಲ್ಲದೆ, ಅನೈತಿಕ ಚಟುವಟಿಕೆಗಳಿಗೆ ದಾರಿ ಮಾಡಿಕೊಡುತ್ತಿವೆ.

ಈ ಸ್ಟೇಡಿಯಂನಲ್ಲಿ ಮೂಲ ಸೌಕರ್ಯಗಳ ಕೊರತೆ ಇರುವ ಕಾರಣ, ಇಲ್ಲಿ ಕ್ರೀಡಾಕೂಟ ನಡೆಸಲು ಸಾಧ್ಯವಾಗುತ್ತಿಲ್ಲ. ನಡೆಸಿದರೆ ಅಗತ್ಯ ಮೂಲ ಸೌಕರ್ಯ ತಾತ್ಕಾಲಿಕವಾಗಿಯಾದರೂ ಒದಗಿಸಬೇಕಿದೆ.

ಶೌಚಾಲಯ ಮತ್ತಿತರ ಅಗತ್ಯತೆಗಳಿಗೆ ಹತ್ತಿರದ ಶಾಲಾ ಕಾಲೇಜು ಆಶ್ರಯಿಸುವ ಅನಿವಾರ್ಯತೆ ಇದೆ. ಹೀಗಾಗಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟ ಇಲ್ಲಿನ ಎಪಿಎಂಸಿ ಬಳಿಯ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿಯೇ ನಡೆಯುತ್ತಿವೆ.

ಕೋಟ್‌

ತಾಲೂಕು ಕ್ರೀಡಾಂಗಣದಲ್ಲಿ ಮೂಲ ಸೌಕರ್ಯಗಳ ಕೊರತೆ ಇದೆ. ಕ್ರೀಡಾಂಗಣದ ಮೆಟ್ಟಿಲುಗಳ ಮೇಲಿನ ಹೊದಿಕೆ ಕಿತ್ತು ಹೋಗಿರುವ ಕಾರಣ ಬಿಸಿಲು ಹಾಗೂ ಮಳೆ ಬಂದಾಗ ಅಲ್ಲಿ ಕುಳಿತು ಕೊಳ್ಳಲು ತೊಂದರೆಯಾಗುತ್ತದೆ. ಶೌಚಾಲಯ, ನೀರಿನ ಕೊರತೆ ಇದೆ. ಮೂಲ ಸೌಕರ್ಯ ಒದಗಿಸಿ ಅಲ್ಲಿ ಸೆಕ್ಯುರಿಟಿ ನೇಮಿಸಿದರೆ ಇದೊಂದು ಉತ್ತಮ ಕ್ರೀಡಾಂಗಣವಾಗಲಿದೆಯಲ್ಲದೆ, ಕ್ರೀಡಾಕೂಟ ಆಯೋಜಿಸಲು ಅನುಕೂಲವಾಗಲಿದೆ. ಕ್ರೀಡಾಪಟುಗಳಿಗೆ ಕ್ರೀಡಾಭ್ಯಾಸ ನಡೆಸಲು ಅನುಕೂಲವಾಗಲಿದೆ .

ಎ.ಮರಿಸ್ವಾಮಿ, ದೈಹಿಕ ಶಿಕ್ಷಕ

ತಾಲೂಕು ಕ್ರೀಡಾಂಗಣ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗಿಲ್ಲ. ಅಲ್ಲಿ ಮೂಲ ಸೌಕರ್ಯಗಳ ಕೊರತೆ ಹಾಗೂ ಸೆಕ್ಯುರಿಟಿ ಇಲ್ಲದ ಕಾರಣ ಕ್ರೀಡಾಂಗಣ ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಇದನ್ನು ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸುವುದು ಅಗತ್ಯವಿದೆ. ತಾಲೂಕು ಕ್ರೀಡಾಂಗಣದಲ್ಲಿ ಮೂಲ ಸೌಕರ್ಯ ಒದಗಿಸಿದರೆ ಕ್ರೀಡಾಪಟುಗಳಿಗೆ ಅಭ್ಯಾಸ ನಡೆಸಲು ಹಾಗೂ ಕ್ರೀಡಾಕೂಟಗಳ ಆಯೋಜನೆಗೂ ಅನುಕೂಲವಾಗಲಿದೆ ಎಂದು ಮುಖಂಡ ಎಂ.ಎಲ್.ಕೆ.ನಾಯ್ಡು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚ್ಚಿಲ: ಇಂದು ಶ್ರೀಮಾಧವ ಮಂಗಲರ ಪುತ್ಥಳಿ ಅನಾವರಣ
ನವದೆಹಲಿ: ಪೇಜಾವರ ಶ್ರೀ-ಹೊಸಬಾಳೆ ಭೇಟಿ