)
ಕನ್ನಡಪ್ರಭ ವಾರ್ತೆ ಬೆಳಗಾವಿ
ಸವದತ್ತಿ ಪಟ್ಟಣದ ಪದಕಿಪುರಂ ನಗರದ ನಿವಾಸಿ, ನಿವೃತ್ತ ಮುಖ್ಯ ಶಿಕ್ಷಕ ಶ್ರೀಶೈಲ ಬಸಪ್ಪ ಬೆಟ್ಟದ ಅವರು ನೀಡಿದ ದೂರಿನ ಮೇರೆಗೆ ಲೋಕಾಯುಕ್ತ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.
ದೂರುದಾರರು ನಿವೃತ್ತರಾದ ಬಳಿಕ ನಿಯಮಾನುಸಾರ ದೊರೆಯಬೇಕಿದ್ದ 300 ದಿನಗಳ ಗಳಿಕೆ ರಜೆ ನಗದೀಕರಣ ಮಾಡಿಕೊಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಕಚೇರಿ ಅಧೀಕ್ಷಕ ವಿಠ್ಠಲ ರಾವಳ ಅವರು ₹5,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.ಈ ಕುರಿತು ದೂರುದಾರರು ಅ.27ರಂದು ಬೆಳಗಾವಿ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು, ಪೊಲೀಸ್ ಅಧೀಕ್ಷಕ ಪ್ರಸನ್ನ ದೇಸಾಯಿ ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಿ, ಆರೋಪಿತ ಅಧಿಕಾರಿಯನ್ನು ಲಂಚದ ಹಣ ಪಡೆಯುವ ವೇಳೆ ಬಂಧಿಸಿದ್ದಾರೆ. ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ವೆಂಕಟೇಶ ಯಡಹಳ್ಳಿ, ಜಿ.ಎಸ್.ಪಾಟೀಲ, ಎಸ್.ಎಚ್. ತೊಸಿಮನಿ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿತರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ 1988ರ ತಿದ್ದುಪಡಿ ಕಾಯ್ದೆ 2018ರ ಕಲಂ 7(ಎ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಲಾಗಿದೆ.