ಕುಮಟಾ: ದೇಶದ ಆತ್ಮನಿರ್ಭರ ಯೋಜನೆಯಡಿ ಅಂಚೆ ಇಲಾಖೆಯಿಂದಲೇ ಸಿದ್ಧಪಡಿಸಲಾದ ಐಟಿ ೨.೦ ಸಾಫ್ಟ್‌ವೇರ್ ಅಳವಡಿಕೆ ಯೋಜನೆಯು ಅಂಚೆ ಇಲಾಖೆಯ ಆಧುನೀಕರಣದ ಮಹತ್ವಾಕಾಂಕ್ಷೆ ಕಾರ್ಯ ಯೋಜನೆಗಳಲ್ಲೊಂದಾಗಿದೆ. ಇದು ನಮ್ಮ ಕಾರ್ಯಾಚರಣೆಯಲ್ಲಿ ದಕ್ಷತೆ, ಸೇವಾ ವಿತರಣೆ ಮತ್ತು ಗ್ರಾಹಕಸ್ನೇಹಿ ಸವಲತ್ತು ನೀಡುವ ಧ್ಯೇಯ ಹೊಂದಿದೆ ಎಂದು ಜಿಲ್ಲಾ ಅಂಚೆ ಅಧೀಕ್ಷಕ ಧನಂಜಯ ಆಚಾರ್ ತಿಳಿಸಿದರು.
ಅಂಚೆ ನಿರೀಕ್ಷಕ ಗಿರೀಶ ಕುಮಾರ ಮಾತನಾಡಿ, ಬದಲಾವಣೆ ಜಗದ ನಿಯಮ, ೧೫೦ ವರ್ಷಗಳಿಗೂ ಹೆಚ್ಚು ಇತಿಹಾಸ ಹೊಂದಿರುವ ಅಂಚೆ ವ್ಯವಸ್ಥೆ ಗ್ರಾಹಕಸ್ನೇಹಿ ವ್ಯವಸ್ಥೆಯಾಗಿ ನೀಡಲು ನಿರಂತರ ಪ್ರಯತ್ನಗಳು ಕಾಲಕ್ಕೆ ತಕ್ಕಂತೆ ನಡೆಯುತ್ತಾ ಬಂದಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆಯಿಂದ ಸೇವೆಗಳನ್ನು ಇನ್ನಷ್ಟು ಸರಳ ಹಾಗೂ ಸುವ್ಯವಸ್ಥಿತಗೊಳಿಸಿ ಅಭಿವೃದ್ಧಿ ಕಾಣುತ್ತಿದೆ. ದೇಶದ ಬ್ಯಾಂಕಿಂಗ್ ಕ್ಷೇತ್ರಕ್ಕಿಂತ ಅತ್ಯುನ್ನತ ವ್ಯವಸ್ಥೆ ಅಳವಡಿಕೆಯಾಗಿದ್ದು, ಬ್ಯಾಂಕಿಂಗ್‌ನ ಎಲ್ಲ ಸೇವೆಗಳು ಮತ್ತು ಬ್ಯಾಂಕ್ ಲಭ್ಯವಿರದ ಕ್ಷೇತ್ರದಲ್ಲೂ ಅಂಚೆಯಲ್ಲಿ ಬ್ಯಾಂಕಿಂಗ್ ಸೇವೆ ತಲುಪಿದೆ ಎಂದರು.
ಅಂಚೆ ಕಚೇರಿಯ ಮುಖ್ಯ ಅಂಚೆ ಅಧಿಕಾರಿ ಸಾವಿತ್ರಿ ಹೆಗಡೆ, ನಮ್ಮ ಅಂಚೆ ಇಲಾಖೆಯು ಐಟಿ ೨.೦ ಸಾಫ್ಟ್‌ವೇರ್‌ನಿಂದಾಗಿ ಬಾಡಿಗೆ ಮನೆಯಿಂದ ಸ್ವಂತದ ಮನೆಗೆ ಬಂದಂತಾಗಿದೆ. ಇದರಿಂದ ಗ್ರಾಹಕರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.ಅರವಿಂದ ಹಾಗೂ ಮಂಜುನಾಥ ಕಾರ್ಯಕ್ರಮ ನಿರ್ವಹಿಸಿದರು. ಅಂಚೆ ಅಧಿಕಾರಿ, ಸಿಬ್ಬಂದಿ, ಗ್ರಾಹಕರು ಹಾಜರಿದ್ದರು.