ಧಾರವಾಡ:
ಪ್ರತ್ಯೇಕ ಪಾಲಿಕೆ ವಿಚಾರವಾಗಿ ಬುಧವಾರ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಹೋರಾಟಗಾರರು, ಸಂಘ-ಸಂಸ್ಥೆ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಪಾಲಿಕೆ ಸದಸ್ಯರು ಸಭೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ರಾಜ್ಯಪಾಲರಿಗೆ ಗಡುವು ನೀಡಿದಂತೆ ಷರತ್ತುಗಳಿಗೆ ಒಪ್ಪಿ ರಾಜ್ಯ ಸರ್ಕಾರ ಸಹ ಪ್ರತ್ಯೇಕ ಪಾಲಿಕೆ ರಚನೆಗೆ ಬೇಕಾದ ತೀರ್ಮಾನ ತೆಗೆದುಕೊಳ್ಳಲು ಜೂ. 9ರ ವರೆಗೆ ಗಡುವು ನೀಡಲಾಗಿದೆ. ಜೂ. 8ರ ವರೆಗೆ ಸರ್ಕಾರದ ಸ್ಪಂದನೆ ನೋಡಿ ಮುಂದಿನ ಹೋರಾಟದ ನಿರ್ಧಾರ ಪ್ರಕಟಿಸಲಾಗುವುದು. ಅಲ್ಲಿಯ ವರೆಗೂ ಅಹೋರಾತ್ರಿ ಹೋರಾಟ ನಡೆಯಲಿದೆ. ಈ ಹೋರಾಟದಲ್ಲಿ ಪಾಲಿಕೆಯ ಎಲ್ಲ ಪಕ್ಷಗಳ ಸದಸ್ಯರು ಕಡ್ಡಾಯವಾಗಿ ಭಾಗವಹಿಸಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಇದರೊಂದಿಗೆ ಈ ಮೊದಲು ಹೇಳಿದಂತೆ ಮೇ 29ರಂದು ಬೈಕ್ ರ್‍ಯಾಲಿ ಮಾತ್ರ ಮಾಡಲಿದ್ದು, ಆಯಾ ಪಕ್ಷಗಳ ಮುಖಂಡರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಬೈಕ್ ತಂದು ತಮ್ಮ ಪಕ್ಷದ ಧ್ವಜಗಳೊಂದಿಗೆ ರ್‍ಯಾಲಿ ಮಾಡಬಹುದು. ಆದರೆ, ಯಾವುದೇ ಕಾರಣಕ್ಕೂ ಹೋರಾಟದ ವೇದಿಕೆಗೆ ಮಾತ್ರ ಪಕ್ಷ, ಧ್ವಜಗಳನ್ನು ತರುವಂತಿಲ್ಲ. ಹೋರಾಟ ಮಾತ್ರ ಪಕ್ಷಾತೀತವಾಗಿಯೇ ನಡೆಯಬೇಕು ಎಂದು ಹೋರಾಟಗಾರ ಬಿ.ಡಿ. ಹಿರೇಮಠ ಸ್ಪಷ್ಟಪಡಿಸಿದರು. ಜತೆಗೆ ಧಾರವಾಡ ಬಂದ್ ಮುಂದೂಡಲಾಗಿದೆ ಎಂದು ತಿಳಿಸಿದರು.ಈ ಸಭೆಯಲ್ಲಿ ಮತ್ತದೇ ಬಿಜೆಪಿ, ಕಾಂಗ್ರೆಸ್ ಸದಸ್ಯರ ಮಧ್ಯೆ ರಾಜಕೀಯದ ವಾಗ್ವಾದಗಳು ನಡೆದಾಗ ಬಿ.ಡಿ. ಹಿರೇಮಠ ಅವರಿಂದ ತರಾಟೆಗೆ ಒಳಗಾಗಬೇಕಾಯಿತು. ಸಭೆಯಲ್ಲಿ ಮುಖ್ಯಮಂತ್ರಿಗಳ ಬದಲಾವಣೆ ವಿಚಾರವೂ ಮುನ್ನಲೆಗೆ ಬಂತು. ಕಾಂಗ್ರೆಸ್‌ನ ಕೆಲವು ಸದಸ್ಯರು ಇದೇ ವಾರದಲ್ಲಿ ಮುಖ್ಯಮಂತ್ರಿಗಳು ಬದಲಾಗುವ ಸಾಧ್ಯತೆ ಇದ್ದು, ಸರ್ಕಾರಕ್ಕೆ ಹೆಚ್ಚಿನ ಅವಧಿ ಗಡವು ನೀಡುವಂತೆ ಮನವಿ ಮಾಡಿದರು. ಆದರೆ, ಬಿಜೆಪಿ ಸದಸ್ಯರು ಇದಕ್ಕೆ ಒಪ್ಪಲಿಲ್ಲ. ಮಧ್ಯ ಪ್ರವೇಶಿಸಿದ ವಿಪ ಮಾಜಿ ಸಭಾಪತಿ, ಕಾಂಗ್ರೆಸ್ ಮುಖಂಡ ವೀರಣ್ಣ ಮತ್ತಿಗಟ್ಟಿ, ಮುಖ್ಯಮಂತ್ರಿ ಬದಲಾವಣೆ ವಿಚಾರ ಇಲ್ಲಿ ಬೇಡ. ಯಾರೇ ಮುಖ್ಯಮಂತ್ರಿಗಳಿದ್ದರೂ ಸರ್ಕಾರ ಮಾತ್ರ ರಾಜ್ಯಪಾಲರ ಅನುಮೋದನೆಯೊಂದಿಗೆ ಪ್ರತ್ಯೇಕ ಪಾಲಿಕೆ ರಚನೆ ಮಾಡಬಹುದು ಎಂದು ತಿಳಿಸಿದರು.
ಪ್ರತ್ಯೇಕ ಪಾಲಿಕೆ ಮಸೂದೆ ಜಾರಿಗೊಳಿಸಿಪ್ರತ್ಯೇಕ ಪಾಲಿಕೆ ಮಸೂದೆಗೆ ರಾಜ್ಯಪಾಲರು ಅನುಮೋದನೆ ನೀಡಿದ್ದು ಮುಖ್ಯಮಂತ್ರಿಗಳು ಶೀಘ್ರ ಸಚಿವ ಸಂಪುಟ ಸಭೆಯಲ್ಲಿ ಮಸೂದೆ ಜಾರಿಗೆ ತರಬೇಕೆಂದು ಹು-ಧಾ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಆಗ್ರಹಿಸಿದರು.
ಹತ್ತು ಲಕ್ಷ ಜನಸಂಖ್ಯೆ ಇದ್ದರೆ ಮಾತ್ರ ಕೇಂದ್ರದಿಂದ ಹೆಚ್ಚಿನ ಅನುದಾನ ಬರಲಿದೆ ಎಂಬ ಉದ್ದೇಶಕ್ಕೆ ಶಾಸಕ ಅರವಿಂದ ಬೆಲ್ಲದ ಅವರು ಪ್ರತ್ಯೇಕ ಪಾಲಿಕೆ ಬೇಡ ಎಂದಿದ್ದಾರೆಯೇ ಹೊರತು ಮತ್ತಾವ ಉದ್ದೇಶವಿಲ್ಲ. ರಾಜ್ಯ ಸರ್ಕಾರ ಹು-ಧಾಮಹಾನಗರ ಪಾಲಿಕೆಗೆ ಯಾವುದೇ ಅನುದಾನ ನೀಡದೇ ತೊಂದರೆ ಮಾಡಿದ್ದಕ್ಕೆ ಹೆಚ್ಚಿನ ಅನುದಾನಕ್ಕಾಗಿ ಪ್ರತ್ಯೇಕ ಪಾಲಿಕೆ ಬೇಡ ಎಂದಿತ್ತು. ಆದರೆ, ಜನರ ಆಶಯ ಮೇರೆಗೆ ಇದೀಗ ನಾವೆಲ್ಲರೂ ಒಪ್ಪಿದ್ದು, ರಾಜ್ಯ ಸರ್ಕಾರ ಕೂಡಲೇ ಪ್ರತ್ಯೇಕ ಪಾಲಿಕೆ ರಚನೆ ಮಾಡಲು ಆಗ್ರಹಿಸಿದರು.