ಧಾರವಾಡ: ಓರ್ವ ವ್ಯಕ್ತಿ ತನ್ನ ಅಂಗಾಂಗಳನ್ನು ದಾನ ಮಾಡುವ ಮೂಲಕ ಏಳು ಜೀವಗಳನ್ನು ಉಳಿಸಬಹುದು ಎಂದು ಧಾರವಾಡ ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್. ಹೇಳಿದರು.
ಮತ್ತೊಬ್ಬರ ಜೀವ ಉಳಿಸುವ ನಿಟ್ಟಿನಲ್ಲಿ ಮರಣದ ನಂತರ ಅಂಗಗಳ ಪರಿಣಾಮಕಾರಿ ಬಳಕೆಗೆ ಪ್ರತಿಯೊಬ್ಬರು ಅಂಗಾಂಗ ದಾನ ಮಾಡಬೇಕು. ಕೆಲ ಕಾನೂನು ಚೌಕಟ್ಟಿನಲ್ಲಿ ಅಂಗಾಂಗ ದಾನ ಶ್ರೇಷ್ಠವಾದುದು ಎಂದರು.
ಶ್ರೀಯಾ ಕಾಲೇಜಿನ ಶೈಕ್ಷಣಿಕ ನಿರ್ದೇಶಕಿ ಡಾ. ವಾಣಿ ಇರ್ಕಲ್, ಅಂಗಾಂಗ ಕಸಿಯಲ್ಲಿ ಒಳಗೊಂಡಿರುವ ಸವಾಲುಗಳ ಬಗ್ಗೆ ಮಾತನಾಡಿದರು.ಕಸಿ ಸ್ವೀಕರಿಸುವವರನ್ನು ನೋಡಿಕೊಳ್ಳುವಲ್ಲಿ ದಾದಿಯರ ನಿರ್ಣಾಯಕ ಪಾತ್ರವಿದೆ. ವಿಶೇಷವಾಗಿ ಕಸಿ ಮಾಡಿದ ನಂತರದ ಮೊದಲ 48 ಗಂಟೆಗಳಲ್ಲಿ ಪ್ರಮುಖವಾಗಿದೆ. ಅಂಗಾಂಶ ಮತ್ತು ಕಾರ್ಟಿಲೆಜ್ ದಾನದ ಮೂಲಕ ಒಂದು ದೇಹ ಸುಮಾರು 75 ಜನರಿಗೆ ಪ್ರಯೋಜನವನ್ನು ನೀಡುತ್ತದೆ ಎಂಬ ಮಾಹಿತಿ ಸಹ ಅವರು ನೀಡಿದರು.
32 ವರ್ಷದ ಅಂಗಾಂಗ ದಾನಿಯ ನಿಜ ಜೀವನದ ಕಥೆಯನ್ನು ಇದೇ ಸಂದರ್ಭದಲ್ಲಿ ಡಾ. ವಾಣಿ ಹಂಚಿಕೊಂಡರು,ಅಧ್ಯಕ್ಷತೆ ವಹಿಸಿದ್ದ ಶ್ರೀಯಾ ಕಾಲೇಜಿನ ಪ್ರಾಂಶುಪಾಲ ಡಾ. ರೋಡಾ ಜೇಸುರಾಜ್, ಜೀವ ಉಳಿಸುವ ಕಾರ್ಯವಾಗಿ ಅಂಗಾಂಗ ದಾನಕ್ಕೆ ಸಾಕಷ್ಟು ಮಹತ್ವವಿದೆ. ಭಾರತದಲ್ಲಿ ಅಂಗಾಂಗ ದಾನದ ಪ್ರಸ್ತುತ ಅಂಕಿ-ಅಂಶಗಳ ಬಗ್ಗೆಯೂ ತಿಳಿಸಿದರು. ಈ ಬಗ್ಗೆ ಜಾಗೃತಿ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದರು.
ಸಂಪನ್ಮೂಲ ವ್ಯಕ್ತಿ ರೇಖಾ ಜಿ. ಬ್ಯಾಡಗಿ, ನ್ಯಾಟೋ ಅರ್ಜಿ, ಅಂಗಾಂಗ ದಾನಕ್ಕೆ ನೋಂದಣಿ ಪ್ರಕ್ರಿಯೆ ಮತ್ತು ಅಂಗಾಂಗ ದಾನ ಕಾರ್ಡ್‌ಗಳ ಲಭ್ಯತೆಯ ಬಗ್ಗೆ ತಿಳಿಸಿದರು. ಧಾರವಾಡ ಜಿಲ್ಲೆ ಅಂಗಾಂಗ ದಾನ ಪ್ರತಿಜ್ಞೆಗಳಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ ಎಂದು ತಿಳಿಸಿದರು.ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್‌ನ ಉಪಾಧ್ಯಕ್ಷ ಜಯಂತಿಲಾಲ್ ಜಯಂತ್, ಬ್ಯೂಲಾ ಮಾರ್ಗರೇಟ್, ನಿಖಿತಾ ಶಿಂಧೆ ಇದ್ದರು. ನಂತರ ವಿದ್ಯಾರ್ಥಿಗಳು ಅಂಗಾಂಗ ದಾನದ ವಿಷಯದ ಕುರಿತು ಪೋಸ್ಟರ್‌ಗಳನ್ನು ಪ್ರಸ್ತುತಪಡಿಸಿದರು.